ಕಾಂಗ್ರೆಸ್‌ ನಾಯಕರ ಸಾಮರ್ಥ್ಯ ಪರೀಕ್ಷೆಗೆ ವೇದಿಕೆಯಾಗುತ್ತಿದೆ ಸಾಲು ಸಾಲು ಔತಣಕೂಟ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್‌ನಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ಕಂಡು ಬರುತ್ತಿವೆ. ಧರ್ಮಸ್ಥಳದ ಶಾಂತಿವನದಲ್ಲಿ ಬೀಡುಬಿಟ್ಟು ರಾಜಕೀಯ ತಂತ್ರಗಾರಿಕೆ ಮಾಡಿದ ಹೈಕಮಾಂಡ್ ಮಟ್ಟದಲ್ಲಿ ತನ್ನ ಆಪ್ತರಿಗೆ ಪ್ರಮುಖ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಔತಣಕೂಟ ಏರ್ಪಡಿಸಿದ್ದ ಸಿದ್ದರಾಮಯ್ಯ, ತನ್ನ ಬೆಂಬಲಿಸುವ ನಾಯಕರು ಎಷ್ಟು ಅನ್ನೋ ಲೆಕ್ಕಾಚಾರ ಮಾಡಿಕೊಂಡಿದ್ದರು. ಈ ಮೂಲಕ ಸಿದ್ದರಾಮಯ್ಯ ನಾನು ಕಾಂಗ್ರೆಸ್‌ನಲ್ಲಿ ಬಹುಮುಖ್ಯ ನಾಯಕ, ನನ್ನ ನಾಯಕತ್ವವನ್ನು ಅಧಿಕಾರ ಇಲ್ಲದಿದ್ದರೂ ಒಪ್ಪಿಕೊಳ್ಳಲಿದ್ದಾರೆ ಅನ್ನೋ ಸಂದೇಶ ರವಾನಿಸಿದ್ರು. ಕಳೆದ ಐದು ವರ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರದಲ್ಲಿದ್ದರೂ ಸಿದ್ದರಾಮಯ್ಯ ಅವರನ್ನು ವಿರೋಧಿಸಿಕೊಂಡೇ ಅಧಿಕಾರ ನಡೆಸಿದ ಡಿಕೆ ಶಿವಕುಮಾರ್ ಹಾಗೂ ಪರಮೇಶ್ವರ್ ಇದರಿಂದ ಕಂಗಾಲಾಗಿ ಬಿಟ್ರು. ಸಿದ್ದರಾಮಯ್ಯ ಔತಣಕೂಟಕ್ಕೆ ಬಂದಿದ್ದ ಶಾಸಕರ ಪಡೆ ನೋಡಿ ಸಿಡಿಲು ಬಡಿದಂತಾಯ್ತು. ಔತಣ ಕೂಟಕ್ಕೆ ಹಾಜರಾದರೂ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿದ್ದರು.

ಎಲ್ಲಾ ಆಯಾಮಗಳಲ್ಲೂ ಚಿಂತನೆ ನಡೆಸಿದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಮಂಗಳವಾರ ರಾತ್ರಿ ಕಾಂಗ್ರೆಸ್ ಶಾಸಕರಿಗೆ ಅಷ್ಟೇ ಅಲ್ಲದೆ ಮೈತ್ರಿಕೂಟದ ಶಾಸಕರು, ಸಚಿವರಿಗೆ ಔತಣಕೂಟ ಏರ್ಪಡಿಸಿದ್ದರು. ಖಾಸಗಿ ಹೋಟೆಲ್‌ನಲ್ಲಿ ನಡೆದ ಔತಣಕೂಟದಲ್ಲಿ ಹೆಚ್.ಡಿ ರೇವಣ್ಣ ಸೇರಿದಂತೆ ಸಾಕಷ್ಟು ಶಾಸಕರು ಸಚಿವರು ಆಗಮಿಸಿದ್ದರು. ಈ ಮೂಲಕ ಡಿ.ಕೆ ಶಿವಕುಮಾರ್ ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಬಹುಮುಖ್ಯವಾದುದು, ನನ್ನ ಮಾತಿಗೆ ಸರ್ಕಾರದಲ್ಲಿ ಮಹತ್ವ ಹೆಚ್ಚಾಗಿ ಇರಲಿದೆ ಅನ್ನೋ ಸಂದೇಶವನ್ನು ಹೈಕಮಾಂಡ್ ಹಾಗೂ ಶಾಸಕರಿಗೆ ರವಾನಿಸಿದರು. ಅಂದರೆ ಪಕ್ಷದ ಮೇಲೆ ಹಿಡಿತ ಸಾಧಿಸಿರುವ ಸಿದ್ದರಾಮಯ್ಯ ಅವರ ಜೊತೆ ಹೋದರೆ ಏನೂ ಪ್ರಯೋಜನ ಇಲ್ಲ ಅನ್ನೋದನ್ನು ಪರೋಕ್ಷವಾಗಿ ತಿಳಿಸಿದ್ರು.

ಇನ್ನು ಇಂದು ಬುಧವಾರ ರಾತ್ರಿ ಮೈತ್ರಿ ಸರ್ಕಾರದ ಉಪಮುಖ್ಯಮಂತ್ರಿ ಆಗಿರುವ ಪರಮೇಶ್ವರ್ ಕೂಡ ಔತಣ ಕೂಟ ಏರ್ಪಡಿಸಿದ್ದಾರೆ. ಈ ಮೂಲಕ ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿ ನಾನಿದ್ದೇನೆ. ಕಳೆದ 8 ವರ್ಷದಲ್ಲಿ ನಾನು ಅಧ್ಯಕ್ಷನಾಗಿ ನಿಮ್ಮ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರ ನನ್ನದೂ ಇದೆ ಎಂಬ ಸಂದೇಶ ರವಾನಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರ ಔತಣ ಕೂಟಕ್ಕೆ ಕಾಂಗ್ರೆಸ್ ಶಾಸಕರು ಹಾಗು ಸಚಿವರು ಆಗಮಿಸಿದ್ರು. ಮಂಗಳವಾರ ಡಿ.ಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟಕ್ಕೆ ಕಾಂಗ್ರೆಸ್ ಹಾಗು ಜೆಡಿಎಸ್ ಎರಡೂ ಪಕ್ಷದ ನಾಯಕರು ಆಗಮಿಸಿದ್ರು. ಇದರ ನಡುವೆ ಇಂದಿನ ಪರಮೇಶ್ವರ್ ಕೊಡುವ ಪಾರ್ಟಿಗೆ ಯಾರೆಲ್ಲಾ ಬರುತ್ತಾರೆ ಅನ್ನೋ ಕುತೂಹಲ ಮೂಡಿಸಿದೆ.

ಈ ಔತಣಕೂಟ ಪಾಲಿಟಿಕ್ಸ್‌ನಿಂದ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿನೇಶ್ ಗುಂಡೂರಾವ್ ಕೂಡ ಔತಣ ಕೂಟ ನಡೆಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಹುಲ್ ಸೇರಿದಂತೆ ಹಿರಿಯ ನಾಯಕರಿಗೆ ಧನ್ಯವಾದ ಹೇಳುವ ಸಲುವಾಗಿ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ. ದೆಹಲಿಯಿಂದ ವಾಪಸ್ ಆದ ಬಳಿಕ ಅಧಿಕೃತವಾಗಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು, ದಿನೇಶ್ ಗುಂಡೂರಾವ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆ ಬಳಿಕ ಅಂದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಔತಣಕೂಟದ ಬಳಿಕ ದಿನೇಶ್ ಗುಂಡೂರಾವ್ ಕೂಡ ಔತಣಕೂಟ ನಡೆಸಲು ಉದ್ದೇಶ ಇಟ್ಟುಕೊಂಡಿದ್ದಾರೆ. ಆ ಮೂಲಕ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಯಾರಿಗೆಲ್ಲಾ ಖುಷಿ ತಂದಿದೆ ಅನ್ನೋದನ್ನು ತಿಳಿದುಕೊಳ್ಳಲು ಇದು ಸಹಕಾರಿ ಆಗಲಿದೆ ಅನ್ನೋ ಲೆಕ್ಕಾಚಾರವೂ ಅಡಗಿದೆ ಎನ್ನಲಾಗಿದೆ. ಮುಂದೆ ಇದೇ ರೀತಿ ಅಧಿಕಾರ ನಡೆದ್ರೆ ಸಾಕಷ್ಟು ಗೊಂದಲದ ಗೂಡಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply