ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಜೆಡಿಯು ಮುಖಂಡ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಔತಣ ಕೂಟದಲ್ಲಿ ಭಾಗವಹಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತಂತೆ ಚರ್ಚೆ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಪಾಟ್ನಾಗೆ ಆಗಮಿಸಿದ ಅಮಿತ್ ಶಾ, ನೇರವಾಗಿ ಬಿಹಾರ ಸರ್ಕಾರದ ಆತಿಥಿ ಗೃಹಕ್ಕೆ ತೆರಳಿದರು. ಅಲ್ಲಿ ಉಪಹಾರ ಕೂಟದಲ್ಲಿ ಭಾಗವಹಿಸಿ ಉಭಯ ನಾಯಕರು ಚರ್ಚಿಸಿದರು.
ಕಳೆದ ಜುಲೈನಲ್ಲಿ ಮಹಾಮೈತ್ರಿಯಿಂದ ಹೊರಬಂದ ಜೆಡಿಯು ನಂತರ ಬಿಜೆಪಿ ಜತೆ ಕೈ ಜೋಡಿಸಿ ಎನ್ಡಿಎ ಮೈತ್ರಿಕೂಟ ಸೇರಿತ್ತು. ಈ ಮೈತ್ರಿಗೆ ಒಂದು ವರ್ಷ ಪೂರ್ಣ ಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಔತಣ ಕೂಟ ನಡೆಯುತ್ತಿದ್ದು, ಎರಡೂ ಪಕ್ಷಗಳ ನಡುವಣ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಗಳ ಹಂಚಿಕೆ ಸೇರಿದಂತೆ ಇತರೆ ವಿಚಾರವಾಗಿ ಮಾತುಕತೆ ನಡೆಸಲಾಗಿದೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ಒಟ್ಟಾಗಲು ಪ್ರಯತ್ನಿಸುತ್ತಿರೋದು ಒಂದೆಡೆಯಾದರೆ, ತಮ್ಮ ಜತೆಯಲ್ಲಿದ್ದ ಶಿವಸೇನೆ, ಟಿಡಿಪಿ ಸೇರಿದಂತೆ ಅನೇಕ ಮೈತ್ರಿ ಪಕ್ಷಗಳು ವಿರೋಧ ಪಾಳಯದ ಜತೆ ಗುರುತಿಸಿಕೊಳ್ಳುತ್ತಿರುವುದು ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. ಈ ಮಧ್ಯೆ ಬಿಜೆಪಿ ಹಾಗೂ ಜೆಡಿಯು ನಡುವಣ ಸ್ನೇಹದಲ್ಲಿ ಬಿರುಕು ಮೂಡಿರುವ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ. ಜೆಡಿಯು ಸಖ್ಯವನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಹೀಗಾಗಿ ಈ ಔತಣಕೂಟದಲ್ಲಿ ಎರಡು ಪಕ್ಷ ಗಳ ನಡುವಣ ಪಾಲುದಾರಿಕೆಯ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಈ ಇಬ್ಬರು ನಾಯಕರು ರಾತ್ರಿ ನಡೆಯಲಿರುವ ಭೋಜನ ಕೂಟದಲ್ಲೂ ಭಾಗವಹಿಸಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ನಿರೀಕ್ಷೆ ಇದೆ.