ರೈತರ ಸಾಲ ಮನ್ನಾ ವಿವರಿಸಿದ ಕುಮಾರಸ್ವಾಮಿ, ಯಾರಿಗೆ ಸಿಕ್ಕಿದ್ದು ಎಷ್ಟು?

ಡಿಜಿಟಲ್ ಕನ್ನಡ ಟೀಮ್:

ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ನೂತನ ಬಜೆಟ್ ಅನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಜೆಟ್ ಕುರಿತ ಟೀಕೆ, ರೈತರ ಸಾಲ ಮನ್ನಾ ವಿಚಾರವಾಗಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಹೇಳಿದ್ದಿಷ್ಟು..,

‘ಸಾಲ ಮನ್ನಾ ನಮ್ಮ ಸರ್ಕಾರದ ಬದ್ಧತೆಯಾಗಿತ್ತು. ಅದನ್ನು ಈಡೇರಿಸಲಿದ್ದೇವೆ. ₹1 ಲಕ್ಷವರರೆಗಿನ ಚಾಲ್ತಿ ಬೆಳೆಸಾಲ ಮನ್ನಾ ಮಾಡಲಾಗುವುದು. ಇದರಿಂದ ಸರ್ಕಾರಕ್ಕೆ ₹ 10,700 ಕೋಟಿ ಹೊರೆಯಾಗಲಿದೆ. ಈಗಾಗಲೇ ರಾಷ್ಟ್ರೀಕೃತ, ಸಹಕಾರಿ, ಕಿಸಾನ್ ಕಾರ್ಡ್‌ಗಳ ₹ 2 ಲಕ್ಷದ ವರೆಗಿನ ಸುಸ್ತಿ ಸಾಲಮನ್ನಾ ಮಾಡಲಾಗಿದ್ದು, ಚಾಲ್ತಿ ಸಾಲದ ರೈತರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈಗ ರೈತರ ಚಾಲ್ತಿ ಸಾಲವನ್ನೂ ಮನ್ನಾ ಮಾಡುತ್ತಿದ್ದೇವೆ. ಇದು ಸಹಕಾರಿ ವಲಯದ ಸಾಲಗಳಿಗೆ ಮಾತ್ರವೇ ಅನ್ವಯಿಸಲಿದ್ದು, ರಾಷ್ಟ್ರೀಕೃತ ಬ್ಯಾಂಕು ಅಥವಾ ಕಿಸಾನ್ ಕಾರ್ಡ್‌ಗೆ ಅನ್ವಯಿಸುವುದಿಲ್ಲ.

ಇನ್ನು ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ ಅಕ್ಕಿಯ ಪ್ರಮಾಣವನ್ನು 7 ಕೆಜಿ ಮುಂದುವರೆಸಿಕೊಂಡು ಹೋಗುತ್ತೇವೆ. ಆದರೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ನಿರ್ಧಾರ ಸಾಧ್ಯವಿಲ್ಲ. ಜೀವ ಬೇಕಾದರೂ ಕೊಟ್ಟು ರೈತರ ಪ್ರಾಣ ಕಾಪಾಡುತ್ತೇನೆ.

ಸಾಲ ಮನ್ನಾದಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಲಾಭ ಆಗಿದೆ. ಬೆಳಗಾವಿ ವಲಯದ ₹9501 ಕೋಟಿ ಸಾಲಮನ್ನಾ ಆಗುತ್ತೆ, ಬೆಂಗಳೂರು ವಲಯದ ₹7454 ಕೋಟಿ, ಕಲಬುರಗಿ ವಲಯದ ₹5651 ಕೋಟಿ, ಮೈಸೂರು ವಲಯದ ₹6760 ಕೋಟಿ, ಒಟ್ಟು ₹29279 ಕೋಟಿ ಮನ್ನಾ ಆಗುತ್ತೆ. ಹೀಗಾಗಿ ನನ್ನ ಬಜೆಟ್ ನಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂಬುದು ಸುಳ್ಳು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 29,289, ಸಹಕಾರಿ ಬ್ಯಾಂಕ್‌ಗಳಲ್ಲಿ 682 ಕೋಟಿ  ರು. ಸಾಲಮನ್ನಾ ಮಾಡಲಾಗುವುದು.’

ಸಾಲಮನ್ನಾದ ಹೆಚ್ಚು ಲಾಭ ಪಡೆದ ಜಿಲ್ಲೆಗಳು (₹ಕೋಟಿ ಗಳಲ್ಲಿ)

ಜಿಲ್ಲೆ ಮೊತ್ತ
ಬೆಳಗಾವಿ 2,670
ಬಾಗಲಕೋಟೆ 1,820
ಧಾರವಾಡ 1,220
ಹಾವೇರಿ 1,032
ಉತ್ತರ ಕನ್ನಡ 465
ದಾವಣಗೆರೆ 1,212
ತುಮಕೂರು 1,185
ಬೆಂಗಳೂರು 735
ರಾಮನಗರ 630
ರಾಯಚೂರು 1,137
ಹಾಸನ 1,456
ಮಂಡ್ಯ 1,018
ಮೈಸೂರು 980

Leave a Reply