ತಂಡಕ್ಕೋಸರ ತ್ಯಾಗ ಮಾಡ್ತಾರಾ ಕೊಹ್ಲಿ?

ಡಿಜಿಟಲ್ ಕನ್ನಡ ಟೀಮ್:

ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ ಈಗ ಏಕದಿನ ಸರಣಿಯನ್ನು ಗೆಲ್ಲುವತ್ತ ಗಮನ ಹರಿಸಿದೆ. ಇಂದಿನಿಂದ ಏಳು ಪಂದ್ಯಗಳ ಸರಣಿ ಆರಂಭವಾಗಲಿದ್ದು ಟೀಮ್ ಇಂಡಿಯಾ ಶುಭಾರಂಭದ ನಿರೀಕ್ಷೆಯಲ್ಲಿದೆ.

ಭಾರತದ ಪಾಲಿಗೆ ಈ ಸರಣಿ ಮಹತ್ವದ್ದಾಗಿದೆ. ಕಾರಣ ಮುಂದಿನ ವರ್ಷ ವಿಶ್ವಕಪ್ ಇಂಗ್ಲೆಂಡಿನಲ್ಲಿ ನಡೆಯಲಿದ್ದು, ಈ ಟೂರ್ನಿ ಅಭ್ಯಾಸ ಸರಣಿ ಎಂದೇ ಬಿಂಬಿತವಾಗಿದೆ.

ಸದ್ಯ ಭಾರತ ತಂಡ ಸಮತೋಲನದಿಂದ ಕೂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಆಟಗಾರರ ನಡುವೆ ಈ ಹಿಂದೆಗಿಂತ ಹೆಚ್ಚು ಪೈಪೋಟಿ ಏರ್ಪಟ್ಟಿದೆ. ಬೌಲಿಂಗ್ ನಲ್ಲಿ ಯುವ ವೇಗಿಗಳು ಹಾಗೂ ಸ್ಪಿನ್ನರ್ ಗಳ ಫಾರ್ಮ್ ಅತ್ಯದ್ಭುತವಾಗಿದೆ. ಹೀಗೆ ಬಲಿಷ್ಠವಾಗಿ ಕಾಣುತ್ತಿರುವ ತಂಡದಲ್ಲಿ ಒಂದು ಸಮಸ್ಯೆ ಆಂತರಿಕ ವಾಗಿ ಕಾಡಲಾರಂಭಿಸಿದೆ. ಅದೇನೆಂದರೆ ನಾಲ್ಕನೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರ ಯಾರು? ಎಂಬುದು.

ಹೌದು, ಸದ್ಯ ಟೀಮ್ ಇಂಡಿಯಾ ಸತತ ಗೆಲುವು ಸಾಧಿಸುತ್ತಿರುವುದು ಈ ಸಮಸ್ಯೆಯನ್ನು ಮರೆಮಾಚಿದೆ. ಆದರೆ, ವಿಶ್ವಕಪ್ ಟೂರ್ನಿ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಕಡೆಗಣಿಸುವಂತಿಲ್ಲ. ಯಾವುದೇ ತಂದಕ್ಕಾದರು ಈ ಕ್ರಮಾಂಕ ಬಹಳ ಪ್ರಮುಖ. ತಂಡ ಉತ್ತಮ ಆರಂಭ ಪಡೆದರೆ ಅದನ್ನು ಬಳಸಿಕೊಂಡು ದೊಡ್ಡ ಮೊತ್ತ ಪೇರಿಸುವುದು ಹಾಗೂ ಉತ್ತಮ ಆರಂಭ ಸಿಗದಿದ್ದಾಗ ತಂಡದ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಳ್ಳುವುದು ಈ ಕ್ರಮಾಂಕದಲ್ಲಿ ಆಡುವ ಆಟಗಾರನ ಜವಾಬ್ದಾರಿ. ಇದಕ್ಕಾಗಿ ಈ ಆಕ್ರಮಣಕಾರಿ ಹಾಗೂ ಇನ್ನಿಂಗ್ಸ್ ಕಟ್ಟಬಲ್ಲ ಸಾಮರ್ಥ್ಯವಿರುವ ಆಟಗಾರನ ಅಗತ್ಯವಿದೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಸ್ಥಾನ ತುಂಬುವ ಜವಾಬ್ದಾರಿ ಹಾಗೂ ಸಾಮರ್ಥ್ಯ ಇರುವುದು ಕೊಹ್ಲಿಗೆ. ಆರಂಭಿಕರಾಗಿ ಎಡಗೈ ಹಾಗೂ ಬಲಗೈ ಜೋಡಿಯಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆಡಲಿದ್ದಾರೆ. ಇನ್ನು ಅತ್ಯುತ್ತಮ ಫಾರ್ಮ್ ನಲ್ಲಿರೋ ಕೆ.ಎಲ್ ರಾಹುಲ್ ಗೆ ಆರಂಭಿಕ ಸ್ಥಾನ ಸಿಗದಿದ್ದರೂ 3ನೇ ಕ್ರಮಾಂಕವನ್ನು ಬಿಟ್ಟುಕೊಡಲೇ ಬೇಕು. ಹೀಗಾಗಿಯೇ ಕೊಹ್ಲಿ ತನ್ನ 3ನೇ ಕ್ರಮಾಂಕವನ್ನು ತ್ಯಾಗ ಮಾಡಿ 4ನೇ ಕ್ರಮಾಂಕದ ಜವಾಬ್ದಾರಿ ಹೊರಬೇಕಿದೆ.

ಕಳೆದ ವಿಶ್ವಕಪ್ ನಂತರ ಟೀಮ್ ಇಂಡಿಯಾ ಈ ಕ್ರಮಾಂಕದಲ್ಲಿ 10 ಆಟಗಾರರನ್ನು ಪ್ರಯೋಗಿಸಿದೆ. ರಹಾನೆ, ಯುವರಾಜ್, ಧೋನಿ, ಪಾಂಡ್ಯ, ದಿನೇಶ್ ಕಾರ್ತಿಕ್, ರಾಹುಲ್, ಕೊಹ್ಲಿ, ಮನೀಶ್ ಪಾಂಡೆ, ಮನೋಜ್ ತಿವಾರಿ, ಕೆದಾರ್ ಜಾಧವ್ ಈ ಕ್ರಮಾಂಕದಲ್ಲಿ ಆಡಿದ್ದಾರೆ. ರಹಾನೆ ಸ್ವಲ್ಪ ಯಶಸ್ವಿಯಾಗಿದ್ದರೂ ಇತರೆ ಆಟಗಾರರ ಪ್ರದರ್ಶನ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವಂತೆ ಮಾಡಿದೆ.

ಹೀಗಾಗಿ ಕೊಹ್ಲಿ 4ನೇ ಕ್ರಮಾಂಕಕ್ಕೆ ಇಳಿದು ಧೋನಿಗೆ 5ನೇ ಕ್ರಮಾಂಕವನ್ನು ಖಾಯಂಗೊಳಿಸಬೇಕಿದೆ. ಆಗ ತಂಡ ಎಂತಹುದೇ ಕಠಿಣ ಪರಿಸ್ಥಿತಿಯಲ್ಲಿದ್ದರೂ ಮತ್ತೆ ಪಂದ್ಯದ ಮೇಲಿನ ನಿಯಂತ್ರಣ ಸಾಧಿಸಬಲ್ಲ ಅವಕಾಶವಿರುತ್ತದೆ.

ತಂಡದ ಸಮತೋಲನ ಹೆಚ್ಚಿಸಲು ಕೊಹ್ಲಿ ತಮ್ಮ ಸ್ಥಾನವನ್ನು ರಾಹುಲ್ ಗೆ ತ್ಯಾಗ ಮಾಡಬೇಕಿದೆ. ಅಲ್ಲದೆ 4ನೇ ಕ್ರಮಾಂಕದಲ್ಲಿ ಆಡಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಬೇಕಾದ ಅಗತ್ಯವಿದೆ. ತಂಡದ ಹಿತಕ್ಕಾಗಿ ನಾಯಕ ಕೊಹ್ಲಿ ಈ ತ್ಯಾಗ ಮಾಡುವರೆ ಎಂಬುದು ಈ ಸರಣಿಯಲ್ಲಿ ಸ್ಪಷ್ಟವಾಗಲಿದೆ.

Leave a Reply