ಕೇವಲ 18 ತಿಂಗಳಲ್ಲಿ ಭತ್ತದ ಕಣದಿಂದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಪೋಡಿಯಂವರೆಗೆ: ಇದು ಹಿಮಾದಾಸ್ ಮಿಂಚಿನ ಓಟ!

ಡಿಜಿಟಲ್ ಕನ್ನಡ ಟೀಮ್:

ಪಿ.ಟಿ ಉಷಾ ನಂತರ ವಿಶ್ವ ಮಟ್ಟದ ಟ್ರ್ಯಾಕ್ ಅಥ್ಲೆಟಿಕ್ಸ್ ನಲ್ಲಿ ಭಾರತದ ಯಾವುದೇ ಅಥ್ಲೀಟ್ ಗಳು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಈಗ ಆ ಕೊರತೆ ನೀಗಿಸುವ ಭರವಸೆ ಮೂಡಿದೆ. ಅದಕ್ಕೆ ಕಾರಣರಾಗಿರುವವರು ಅಸ್ಸಾಂ ಮೂಲದ ಯುವ ಓಟಗಾರ್ತಿ ಹಿಮಾದಾಸ್.

ಹೌದು, ಪೋಲೆಂಡ್ ನಲ್ಲಿ ನಡೆಯುತ್ತಿರುವ ಐಎಎಎಫ್ 20 ವರ್ಷದೊಳಗಿನ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400 ಮೀ. ಓಟದಲ್ಲಿ ಹಿಮಾದಾಸ್ ಚಿನ್ನದ ಪದಕ ಗೆದ್ದಿದ್ದಾರೆ. ಆ ಮೂಲಕ ಈ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದ ಭಾರತದ ಮೊದಲ ಟ್ರ್ಯಾಕ್ ಅಥ್ಲೀಟ್ ಆಗಿದ್ದಾರೆ.

ಹಿಮಾ ಈ ಸಾಧನೆಯ ಶಿಖರ ಏರಿರೋದು ಕೇವಲ 18 ತಿಂಗಳಲ್ಲಿ. ನಂಬಲು ಕಷ್ಟ ಎನಿಸಿದರೂ ಇದು ಸತ್ಯ. ಈಕೆ ಸಾಧನೆಯ ಹಾದಿ ಏನು ಎಂಬುದನ್ನು ನೋಡೋಣ ಬನ್ನಿ…

ಅಸ್ಸಾಂನ ನಾಗೌನ್ ಜಿಲ್ಲೆಯ ಧಿಂಗ್ ಗ್ರಾಮದ ಭತ್ತದ ರೈತನ ಪುತ್ರಿಯಾಗಿರುವ ಹಿಮಾದಾಸ್, ಎರಡು ವರ್ಷದ ಹಿಂದೆ ಈ ಸಾಧನೆಯ ಕನಸು ಕಂಡಿರಲಿಲ್ಲ. ಭತ್ತದ ಕಣದಲ್ಲಿ ಹುಡುಗರೊಂದಿಗೆ ಫುಟ್ಬಾಲ್ ಆಡಿಕೊಂಡಿದ್ದಳು. ಈಕೆಯನ್ನು ನೋಡಿದ ಸ್ಥಳೀಯ ಕೋಚ್ ಅಥ್ಲೆಟಿಕ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವಂತೆ ಹಿಮಾಳಿಗೆ ಸಲಹೆ ನೀಡಿದರು. ಇವರ ಸಲಹೆಯಂತೆ ಹಿಮಾ ಓಡಲು ಆರಂಭಿಸಿದಳು.

18 ತಿಂಗಳ ಹಿಂದೆ ಶಿವಸಾಗರ್ ನಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಿಮಾ, ಮೊದಲ ಬಾರಿಗೆ ಸ್ಪರ್ಧಾತ್ಮಕ ಓಟದಲ್ಲಿ ಭಾಗವಹಿಸಿದಳು. ಈ ಸ್ಪರ್ಧೆಯಲ್ಲಿ ಕಳಪೆ ಸ್ಪೈಕ್ಸ್ (ಓಟದ ಶೂ) ನಲ್ಲೇ ಅತ್ಯುತ್ತಮವಾಗಿ ಓಡಿದ ಹಿಮಾ 100 ಮತ್ತು 200 ಮೀ.ನಲ್ಲಿ ಚಿನ್ನ ಗೆದ್ದಳು.

ಈಕೆಯ ಕ್ಷಮತೆಯನ್ನು ಗುರುತಿಸಿದ ಕ್ರೀಡೆ ಮತ್ತು ಯುವಜನ ಕಲ್ಯಾಣ ಇಲಾಖೆಯ ಅಥ್ಲೆಟಿಕ್ಸ್ ಕೋಚ್ ನಿಪೋನ್, ‘ನಿನಗೆ ಅಥ್ಲೆಟಿಕ್ಸ್ ನಲ್ಲಿ ಉತ್ತಮ ಭವಿಷ್ಯವಿದೆ’ ಎಂದು ಮನವರಿಕೆ ಮಾಡಿದರು. ಈಕೆ ಒಪ್ಪಿದರೆ ಸಾಕೆ? ಅವರ ಪೋಷಕರು ಒಪ್ಪಬೇಕಲ್ಲ.

ಆರು ಪುತ್ರಿಯರ ಪೈಕಿ ಕಡೆಯ ಹಾಗೂ ಮುದ್ದಿನ ಮಗಳನ್ನು 140 ಕಿ.ಮೀ ದೂರದ ಗುವಾಹಟಿಗೆ ಕಳುಹಿಸಲು ತಂದೆ ರಂಜಿತ್ ದಾಸ್ ಹಾಗೂ ತಾಯಿ ಜೋಮಾಲಿ ಬಿಲ್ ಕುಲ್ ಸಿದ್ಧರಿರಲಿಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸಿಕ್ಕ ಈ ಪ್ರತಿಭೆಯನ್ನು ಅಲ್ಲೇ ಕೊಲೆಯಲು ಬಿಟ್ಟು ಹೋಗಲು ಸಿದ್ಧವಿರದ ನಿಪೋನ್, ಹಿಮಾಳ ಪೋಷಕರನ್ನು ಎಲ್ಲಾ ರೀತಿಯಲ್ಲೂ ಮನವೊಲಿಸಿ ಆಕೆಗಿರುವ ಭವಿಷ್ಯ ವಿವರಿಸಿದರು. ಅಂತಿಮವಾಗಿ ಹಿಮಾಳನ್ನು ಗುವಾಹಟಿಗೆ ಕರೆತರಲು ಯಶಸ್ವಿಯಾದರು.

ಇಲ್ಲಿ ಹಿಮಾಳಿಗೆ ವಸತಿ ಹಾಗೂ ತರಬೇತಿಗೆ ಸಕಲ ಸಿದ್ಧತೆ ಮಾಡಿಕೊಟ್ಟರು. ಇದನ್ನು ಅತ್ಯುತ್ತಮವಾಗಿ ಬಳಸಿಕೊಂಡ ಹಿಮಾ ಹಗಲಿರುಳು ಅಭ್ಯಾಸ ಮಾಡಿದಳು. ಈಕೆಯಲ್ಲಿದ್ದ ಸ್ವಾಭಾವಿಕ ಸಾಮರ್ಥ್ಯ ಈಕೆ ಬೇಗನೆ ರಾಷ್ಟ್ರೀಯ ಕಿರಿಯ ಅಥ್ಲೆಟಿಕ್ಸ್ ತಂಡದಲ್ಲಿ ಆಯ್ಕೆಯಾಗುವಂತೆ ಮಾಡಿತು. ಈಗ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದು ಹೊಸ ಇತಿಹಾಸ ಬರೆದಿದ್ದಾಳೆ.

18 ತಿಂಗಳಲ್ಲಿ ಈಕೆ ಸಾಗಿಬಂದ ಹಾದಿ ನಿಜಕ್ಕೂ ಮಿಂಚಿನ ಓಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಕೆ ಮುಂದಿನ ದಿನಗಳಲ್ಲೂ ಇದೇ ರೀತಿ ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿ ಮತ್ತಷ್ಟು ಸಾಧನೆ ಶಿಖರ ಹತ್ತಲಿ ಎಂಬುದು ಎಲ್ಲಾ ಕ್ರೀಡಾಭಿಮಾನಿಗಳ ಆಶಯ.

Leave a Reply