ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಚಿನ್ನ ಗೆದ್ದು ಇತಿಹಾಸ ಬರೆದ ಹಿಮಾದಾಸ್!

ಡಿಜಿಟಲ್ ಕನ್ನಡ ಟೀಮ್:

ಫಿನ್ಲೆಂಡ್ ನಲ್ಲಿ ನಡೆಯುತ್ತಿರುವ 20 ವರ್ಷದವರೊಳಗಿನ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕ ಪಡೆದಿದ್ದಾರೆ. ಅದರೊಂದಿಗೆ ಈ ಸ್ಪರ್ಧೆಯಲ್ಲಿ ಚಿನ್ನದ ಪದ ಪಡೆದ ಭಾರತದ ಮೊದಲ ಟ್ರ್ಯಾಕ್ ಅಥ್ಲೇಟ್ ಎಂಬ ಹೆಗ್ಗಳಿಕೆಗೆ ಹಿಮಾದಾಸ್ ಪಾತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಅಥ್ಲೆಟಿಕ್‌ಸ್ ಸಂಸ್ಥೆಗಳ ಒಕ್ಕೂಟ(ಐಎಎಎಫ್) ಆಯೋಜಿಸಿದ್ದ ಟೂರ್ನಿಯಲ್ಲಿ ಗುರುವಾರ ಅಂತಿಮ ಸುತ್ತಿಗೆ ಪ್ರವೇಶಿಸಿದ್ದ ಹಿಮಾ, ಇಂದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಿಳೆಯರ 400 ಮೀಟರ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಹಿಮಾದಾಸ್ 51.46 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಇತಿಹಾಸ ಬರೆದರು.

ಈ ಹಿಂದೆ ಅಂಡರ್ 20 ಚಾಂಪಿಯನ್ ಶಿಪ್ ನಲ್ಲಿ ಜಾವೇಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ, 2002 ರಲ್ಲಿ ಡಿಸ್ಕಸ್ ನಲ್ಲಿ ಸೀಮಾ ಪುನಿಯಾ ಹಾಗೂ 2014 ರಲ್ಲಿ ನವಜೀತ್ ಕೌರ್ ಧಿಲೋನ್ ಅವರು ಕಂಚಿನ ಪದಕ ಪಡೆದಿದ್ದರು.

ಟೂರ್ನಿಯ ಸೆಮಿ ಫೈನಲ್‌ನ ಮಹಿಳೆಯರ ವಿಭಾಗದಲ್ಲಿ 18 ವರ್ಷದ ಹಿಮ ದಾಸ್ ಅವರು 52.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದ್ದರು. ಕ್ವಾಟರ್‌ನಲ್ಲಿ 52.25 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.

Leave a Reply