ಟೀಮ್ ಇಂಡಿಯಾ ಸ್ಪಿನ್ ಪರೀಕ್ಷೆಯಲ್ಲಿ ಫೇಲಾದ ಇಂಗ್ಲೆಂಡ್!

ಡಿಜಿಟಲ್ ಕನ್ನಡ ಟೀಮ್:

ಭಾರತದ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ (25ಕ್ಕೆ6) ಹಾಗೂ ರೋಹಿತ್ ಶರ್ಮಾ (137*) ಆಕರ್ಷಕ ಶತಕದ ಮುಂದೆ ಮಂಕಾದ ಇಂಗ್ಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.

ನಾಟ್ಟಿಂಗ್ ಹ್ಯಾಮ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯರು 49.5 ಓವರ್ ಗಳಲ್ಲಿ 268 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತ ಬೆನ್ನಟ್ಟಿದ ಭಾರತ 40.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 269 ರನ್ ಪೇರಿಸಿ ಜಯಿಸಿತು. ಅದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಅಂಗಳದಲ್ಲಿ ಇಂಗ್ಲೆಂಡ್ ತಂಡ ಆಡಿದ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 444 ಹಾಗೂ 481 (ಆಸ್ಟ್ರೇಲಿಯಾ ವಿರುದ್ಧ) ರನ್ ಪೇರಿಸಿತ್ತು. ಹೀಗಾಗಿ ಈ ಪಂದ್ಯದಲ್ಲೂ ಇಂಗ್ಲೆಂಡ್ ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆ ಇತ್ತು. ಆದರೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನು ಕಾಡಿದ ಕುಲ್ದೀಪ್ ಕೇವಲ 25 ರನ್ ನೀಡಿ 6 ವಿಕೆಟ್ ಕಬಳಿಸಿ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಇಂಗ್ಲೆಂಡ್ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ ನಿರೀಕ್ಷೆಯಂತೆ ಸುಲಭವಾಗಿ ಚೇಸಿಂಗ್ ಮಾಡಿತು. 59 ಎಸೆತ ಬಾಕಿ ಇರುವಂತೆ ಪೂರ್ಣಗೊಳಿಸಿ ಸುಲಭ ಜಯ ದಾಖಲಿಸಿತು. ಭಾರತ ತಂಡದ ಪರ ಧವನ್ 40, ರೋಹಿತ್ 137*, ಕೊಹ್ಲಿ 75, ರಾಹುಲ್ 9* ರನ್ ಗಳಿಸಿದರು.

ಈ ಪಂದ್ಯದಲ್ಲಿ ಮಾಡಲಾದ ಸಾಧನೆ…

  • ಏಕದಿನ ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಎಂಬ ದಾಖಲೆ ಬರೆದ ಕುಲ್ದೀಪ್ ಯಾದವ್.
  • ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್.
  • ಭಾರತದ ಪರ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ನಾಲ್ಕನೇ ಬೌಲರ್. (ಬಿನ್ನಿ 4ಕ್ಕೆ6, ಕುಂಬ್ಳೆ 12ಕ್ಕೆ6, ನೆಹ್ರಾ 23ಕ್ಕೆ6)
  • ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದ ಭಾರತದ 6ನೇ ಬೌಲರ್ ಕುಲ್ದೀಪ್. (ಬಿನ್ನಿ, ಕುಂಬ್ಳೆ, ನೆಹ್ರಾ, ಮುರಳಿ ಕಾರ್ತಿಕ್, ಅಜಿತ್ ಅಗರ್ಕರ್)
  • 18ನೇ ಏಕದಿನ ಶತಕ ಬಾರಿಸಿದ ರೋಹಿತ್ ಶರ್ಮಾ.

Leave a Reply