ಶಾಸಕರ ಮಕ್ಕಳೇ ಸೇವಿಸ್ತಿದ್ದಾರಂತೆ ಡ್ರಗ್ಸ್! ನಿಜಾನಾ?

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆ ಕಲಾಪದ ಕೊನೆಯ ದಿನ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಜಾಲದ ಬಗ್ಗೆ ಮಹತ್ವದ ಚರ್ಚೆ ನಡೀತು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪುಟ್ಟ ಪುಟ್ಟ ನಗರಗಳಲ್ಲಿ ಡ್ರಗ್ಸ್ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿರುವ ಬಗ್ಗೆ ಸದನದಲ್ಲಿ ಆರ್. ಅಶೋಕ್ ಪ್ರಸ್ತಾಪ ಮಾಡಿದರು.

ನಿಯಮ 69ರ ಅಡಿ ಚರ್ಚೆ ನಡೆದ ಬಳಿಕ ಉತ್ತರ ಕೊಟ್ಟ ಗೃಹ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್, ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ತಡೆಗೆ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಡ್ರಗ್ಸ್ ಪೂರೈಕೆ ಜಾಲದಲ್ಲಿ ತೊಡಗಿಸಿ ಯುವ ಜನರನ್ನು ಬಲಿಪಶು ಮಾಡುತ್ತಿರುವ ಕಿಂಗ್‍ಪಿನ್‍ಗಳ ವಿರುದ್ಧ ರಾಜ್ಯ ಸರಕಾರ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಿದೆ ಎಂದು ಸದನಕ್ಕೆ ಸ್ಪಷ್ಟಪಡಿಸಿದರು.

ಡ್ರಗ್ಸ್ ಮಾಫಿಯಾ ಬಗ್ಗೆ ಶಾಸಕರು ಪಕ್ಷಾತೀತವಾಗಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ರು. ಡ್ರಗ್ಸ್ ದಂಧೆಯಲ್ಲಿ ವಿದೇಶಿಯರ ಪ್ರಭಾವ ಜಾಸ್ತಿಯಿದೆ. ಬನ್ನೇರುಘಟ್ಟ ರಸ್ತೆಯ ಫಾರಂಗಳಲ್ಲಿ ಸಾಮಾನ್ಯ ಅಲಂಕಾರಿಕ ಪುಷ್ಟ ಬೆಳೆಯುವ ಹಾಗೆ ಬೆಳೆಯುತ್ತಿದ್ದಾರೆ. ನಿಮ್ಮ ಪೊಲೀಸರಿಗೆ ಗೊತ್ತಾಗ್ತಿಲ್ಲ ಅಷ್ಟೆ ಅಂದ್ರು. ಅದಕ್ಕೆ ಉತ್ತರಿಸಿದ ಪರಮೇಶ್ವರ್, ಬೆಂಗಳೂರು ವಿಮಾನ ನಿಲ್ದಾಣ ಸುತ್ತಮುತ್ತಲಿನ ಭಾಗದ ಕೊಡಿಗೇಹಳ್ಳಿಯ ಕೆಲ ಮನೆಗಳಲ್ಲೇ ಡ್ರಗ್ಸ್ ತಯಾರಿಸಿ ಬೇರೆಡೆ ರವಾನಿಸುವ ಬಗ್ಗೆ ನಮ್ಮ ಅಧಿಕಾರಿಗಳೇ ಪತ್ತೆ ಮಾಡಿದರು. ಅನ್ನೋ ಅಚ್ಚರಿ‌ ವಿಚಾರವನ್ನು ಗೃಹ ಸಚಿವರು ಹೇಳಿದರು. ರಾಷ್ಟ್ರೀಯ ಮಟ್ಟದಲ್ಲಿ ಅನ್ವಯವಾಗುವಂಥ ಕಠಿಣ ಕಾನೂನನ್ನು ಕೇಂದ್ರ ಸರಕಾರ ಜಾರಿಗೊಳಿಸಬೇಕೆಂದು ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಆಗ್ರಹಿಸಿದ್ರು.

ಈ ನಡುವೆ ಪರಮೇಶ್ವರ್ ಉತ್ತರ ಕೊಡುವಾಗ ಬಿಜೆಪಿ ಶಾಸಕರೊಬ್ಬರು ಎದ್ದು ನಿಂತರು. ನಾನು ಮಾತನಾಡಿದ ಬಳಿಕ ಮಾತನಾಡಿ ಎಂದರೂ ಕೇಳದ ಅವರು, ಡ್ರಗ್ಸ್‌ ಬಗ್ಗೆ ತಮ್ಮ ಮಗನೇ ಅಡಿಕ್ಟ್ ಆಗಿದ್ದ ಎಂದು ಬೆಚ್ಚಿ ಬೀಳುವ ಸಂಗತಿ ಹೊರ ಹಾಕಿದ್ರು. “ನನ್ನ ಮಗನನ್ನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ಒಂದಕ್ಕೆ ಸೇರಿಸಿದ್ದೆ. ಒಂದು ವರ್ಷ ತುಂಬುವ ವೇಳೆಗೆ ಆತ ಡ್ರಗ್ಸ್ ಅಡಿಕ್ಟ್ ಆಗಿದ್ದ. ಈ ವಿಚಾರ ನಮ್ಮ ಗಮನಕ್ಕೆ ಬರಲು ಬರೋಬ್ಬರಿ ಆರು ತಿಂಗಳಾಗಿತ್ತು ಅಂದ್ರು. ಈ ಸುದ್ದಿ ಮಾಧ್ಯಮಗಳಲ್ಲಿ ಬಿಸಿ ಕಡಲೇ ಕಾಯಿಯಂತೆ ಸೇಲ್‌ ಕೂಡ ಆಯ್ತು. ಇದರ ಪರಿಣಾಮ ಅರಿತ ಕಾಂಗ್ರೆಸ್ ಶಾಸಕ ಹೆಚ್ ಕೆ ಪಾಟೀಲ್, ಅವರ ಮಗನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಅವರ ಹೇಳಿಕೆಯನ್ನು ಕಡತದಿಂದ ತೆಗೆಯುವಂತೆ ಮನವಿ ಮಾಡಿದರು. ಆ ಬಳಿಕ ಅದನ್ನು ಕಡತದಿಂದ ತೆಗದು ಹಾಕುವಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಸೂಚನೆ ನೀಡಿದರು. ಈ ಸುದ್ದಿಯನ್ನು ಬಿತ್ತರಿಸದಂತೆ ಮಾಧ್ಯಮಗಳಿಗೂ ಉಪಸಭಾಧ್ಯಕ್ಷರು ಸೂಚನೆ ನೀಡಿದ್ರು.

ಇದಕ್ಕೂ ಮೊದಲು ಆರ್.ಅಶೋಕ್ ವಿಚಾರ ಪ್ರಸ್ತಾಪ ಮಾಡಿದಾಗಲೇ ಸ್ಪೀಕರ್ ರಮೇಶ್ ಕುಮಾರ್, ಒಂದು ಮಾತನ್ನು ಹೇಳಿದ್ರು. ಈ ಡ್ರಗ್ಸ್ ಅನ್ನೋದು ಯಾವುದೋ ಹಳ್ಳಿಯ ಸರ್ಕಾರಿ‌ ಶಾಲೆಯಲ್ಲಿ ಸೇಲ್‌ ಆಗಲ್ಲ. ನಾವು ತುಂಬಾ ನಾಜೂಕಾಗಿ ಹೇಳುವ ಪ್ರತಿಷ್ಟಿತ ಶಾಲಾ ಕಾಲೇಜುಗಳಲ್ಲಿ ಈ ದಂಧೆ ನಡೆಯುತ್ತದೆ. ಈ ಶಾಲಾ ಕಾಲೇಜಲ್ಲಿ ಓದುವುದು ಯಾರೆಂದು ಒಂದು ಕ್ಷಣ ಯೋಚನೆ ಮಾಡಿ ಎಂದರು. ಯಾವುದೋ ಬಿಟ್ಟಿ ದುಡ್ಡು, ಲೆಕ್ಕವಿಲ್ಲ, ಅಪ್ಪನ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡುವವರು ಮಾತ್ರ ಇದಕ್ಕೆ ದಾಸರಾಗುವುದು ಎನ್ನುವ ಮೂಲಕ ಶಾಸಕರು, ಸಚಿವರ ಮಕ್ಕಳೇ ಡ್ರಗ್ಸ್ ಅಡಿಕ್ಟ್ ಆಗ್ತಿರೋದು ಅನ್ನೋದನ್ನು ಹೇಳಿದರು. ಆ ಬಳಿಕ ಶಾಸಕರು ನೇರವಾಗಿ ತಮ್ಮ ನೋವನ್ನೇ ಹೊರ ಹಾಕಿದ್ದು ರಮೇಶ್ ಕುಮಾರ್ ಅವರ ಹೇಳಿಕೆಯನ್ನು ಅಂಗೀಕರಿಸಿದಂತಿತ್ತು.

Leave a Reply