ಫ್ರಾನ್ಸ್ ಗೆ ವಿಶ್ವಕಪ್ ಕಿರೀಟ! ವಿಶೇಷ ದಾಖಲೆ ಬರೆದ ಎಂಬಾಪ್ಪೆ!

ಡಿಜಿಟಲ್ ಕನ್ನಡ ಟೀಮ್:

ಪಂದ್ಯದ ಆರಂಭದಿಂದಲೇ ಸ್ವಯಂಕೃತ ತಪ್ಪುಗಳನ್ನು ಎಸಗಿದ ಕ್ರೊವೇಶಿಯಾ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಸೋಲನುಭವಿಸಿದೆ. ಇದರೊಂದಿಗೆ ಫ್ರಾನ್ಸ್ ವಿಶ್ವ ಫುಟ್ಬಾಲ್ ನ ಸಾಮ್ರಾಟನಾಗಿ ಹೊರಹೊಮ್ಮಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ 4-2 ಗೋಲುಗಳಿಂದ ಕ್ರೊವೇಶಿಯಾವನ್ನು ಮಣಿಸಿತು. ಫ್ರಾನ್ಸ್ ಪರ ಆಂಟೋನಿ ಗೈಜ್ಮನ್ 37ನೇ, ಪೌಲ್ ಪೋಗ್ಬಾ 59ನೇ, ಕೈಲಿಯಾನ್ ಎಂಬಾಪ್ಪೆ 65ನೇ ನಿಮಿಷದಲ್ಲಿ ಗೋಳು ಗಳಿಸಿದರು. ಕ್ರೊವೇಶಿಯಾ ತಂಡದ ಮಾರಿಯೋ ಪಂದ್ಯದ 20ನೇ ನಿಮಿಷದಲ್ಲಿ ಸ್ವಯಂ ಗೋಲು ಬಾರಿಸಿ ಫ್ರಾನ್ಸ್ ಗೆ ಕಾಣಿಕೆ ನೀಡಿದ್ದರು. ಇನ್ನು ನಂತರದ ಹಂತದಲ್ಲಿ ಪ್ರತಿರೋಧ ನೀಡಿದ ಕ್ರೊವೇಶಿಯಾ ಇವಾನ್ ಪೇರಿಸಿಕ್ 28ನೇ ಹಾಗೂ ಮಾರಿಯೋ 69ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲಷ್ಟೇ ಶಕ್ತವಾಯಿತು.

ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ನಲ್ಲಿ ಆಡಿದ ಕ್ರೊವೇಶಿಯಾ ಆರಂಭದಲ್ಲೇ ತಾನು ಮಾಡಿದ ತಪ್ಪಿನಿಂದ ಫ್ರಾನ್ಸ್ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿತು.

ಪಂದ್ಯದ ಹೈಲೈಟ್ಸ್…

  • 19 ವರ್ಷದ ಎಂಬಾಪ್ಪೆ ಗೋಲು ದಾಖಲಿಸುವ ಮೂಲಕ, ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪೀಲೆ ನಂತರ ಗೋಲು ಬಾರಿಸಿದ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
  • ಕ್ರೊವೇಶಿಯಾದ ಲೂಕಾ ಮೊಡ್ರಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಗೋಲ್ಡನ್ ಬಾಲ್ ಪಡೆದರು.
  • ಎಂಬಾಪ್ಪೆ ಫಿಫಾ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಪಡೆದರು.
  • 1998ರ ನಂತರ ಮತ್ತೆ ವಿಶ್ವ ಚಾಂಪಿಯನ್ ಆದ ಫ್ರಾನ್ಸ್.
ಲೂಕಾ ಮೊಡ್ರಿಕ್ ಮತ್ತು ಎಂಬಾಪ್ಪೆ.

Leave a Reply