ಶಕ್ತಿ ಕೇಂದ್ರಗಳ ಹೆಚ್ಚಳ; ಕುಮಾರಸ್ವಾಮಿ ಗಳಗಳ!

ಸರಕಾರದಲ್ಲಿ ಒಂದು ಶಕ್ತಿ ಕೇಂದ್ರ ಇದ್ದಾಗಲೇ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಕಷ್ಟ. ಏಕೆಂದರೆ ಅಲ್ಲಿ ಪ್ರತಿಪಕ್ಷ ಪರ್ಯಾಯ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಸಮರ್ಥ ಪ್ರತಿಪಕ್ಷ ನಾಯಕನನ್ನು ಪರ್ಯಾಯ ಮುಖ್ಯಮಂತ್ರಿ ಅಂತಲೂ ಕರೆಯುತ್ತಾರೆ. ಪ್ರತಿಪಕ್ಷದ ಹೊಡೆತ ಸಹಿಸಿಕೊಂಡು ಸರಕಾರದ ನೊಗ ಎಳೆಯುವುದು ಕಡಿಮೆ ಸವಾಲಿನ ಕೆಲಸವೇನಲ್ಲ. ಅಂಥಾದ್ದರಲ್ಲಿ ಸರಕಾರದ ಒಳಗೇ ನಾನಾ ಶಕ್ತಿ ಕೇಂದ್ರಗಳು ಸೃಷ್ಟಿಯಾಗಿಬಿಟ್ಟರೆ ಆಡಳಿತದ ಚುಕ್ಕಾಣಿ ಹಿಡಿದವರ ಕತೆ ಕೇಳುವುದೇ ಬೇಡ. ಒಂದು ಮಾಡಿದರೆ ಹೆಚ್ಚು, ಮತ್ತೊಂದು ಮಾಡದಿದ್ದರೆ ಕಡಿಮೆ. ಪ್ರತಿಯೊಂದಕ್ಕೂ ಪ್ರಶ್ನಾರ್ಥಕ ಚಿಹ್ನೆ ಅರ್ಥಾತ್ ಕೊಕ್ಕೆ!

ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಚುಕ್ಕಾಣಿ ಹಿಡಿದಿರುವ ಕುಮಾರಸ್ವಾಮಿ ಸ್ಥಿತಿಯೂ ಇದೇ ಆಗಿದೆ. ತಾವು ಪ್ರತಿನಿಧಿಸುವ ಪಕ್ಷದ ಒಳಗೇ ಹಾಗೂ ಮೈತ್ರಿ ಭಾಗವಾಗಿರುವ ಕಾಂಗ್ರೆಸ್‌ನಲ್ಲಿ ಸೃಷ್ಠಿಯಾಗಿರುವ ನಾನಾ ಶಕ್ತಿ ಕೇಂದ್ರಗಳ ಪರಿಣಾಮವಾಗಿ ಅಧಿಕಾರ ಹಿಡಿದ ಎರಡೇ ತಿಂಗಳು ಮುಗಿಯುವ ಮೊದಲೇ ಹೈರಣಾಗಿ ಹೋಗಿದ್ದಾರೆ. ಒಳ-ಹೊರಗಿನ ಒತ್ತಡಗಳು ತಂದಿರುವ ತುಮುಲ, ಉದ್ವೇಗ, ಆತಂಕ, ನೋವು ಅವರ ಕಣ್ಣೀರಲ್ಲಿ ಪ್ರತಿಬಿಂಬಿತವಾಗುತ್ತಿದೆ.

ನಿಜ, ಮೈತ್ರಿ ಸರಕಾರದಲ್ಲಿ ಈಗ ಕುಮಾರಸ್ವಾಮಿ ಒಬ್ಬರೇ ಶಕ್ತಿ ಕೇಂದ್ರವಾಗಿ ಉಳಿದಿಲ್ಲ. ಅಲ್ಲಿ ಹಲವು ನಾಯಕರಿದ್ದಾರೆ. ಅವರೆಲ್ಲರೂ ಪರ್ಯಾಯ ಕೇಂದ್ರಗಳಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಹಿರಿಯ ಸಚಿವರಾದ ಎಚ್.ಡಿ. ರೇವಣ್ಣ ಹಾಗೂ ಡಿ.ಕೆ. ಶಿವಕುಮಾರ್ ತಕ್ಷಣಕ್ಕೆ ಕಾಣುವ ಪರ್ಯಾಯ ಶಕ್ತಿ ಕೇಂದ್ರಗಳು. (ಹೈಕಮಾಂಡ್‌ದು ಪ್ರತ್ಯೇಕ ಸ್ಟೋರಿ). ಆದರೆ ಈ ಪೈಕಿ ಎಲ್ಲರೂ ಕುಮಾರಸ್ವಾಮಿ ಅವರಿಗೆ ಸವಾಲು ಅಲ್ಲ. ಒಳಹೊಂದಾಣಿಕೆಗಳು ಬೇರೆಯೇ ಇವೆ. ಆದರೆ ಈ ಶಕ್ತಿ ಕೇಂದ್ರಗಳ ಪೈಕಿ ಸಿದ್ದರಾಮಯ್ಯನವರದೇ ಒಂದು ತೂಕವಾದರೆ, ಉಳಿದವರದು ಮತ್ತೊಂದು ತೂಕ! ಅಧಿಕಾರ ಮತ್ತು ಅಸ್ತಿತ್ವದ ಚಿಂತೆಯೇ ಕೇಂದ್ರಗಳ ಸೃಜನೆಗೆ ಮೂಲಕಾರಣ. ತಮ್ಮ ಅಸ್ತಿತ್ವ ಸಾಬೀತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ತಂತ್ರ-ಮಂತ್ರಗಳ ಮೊರೆ ಹೋಗಿದ್ದಾರೆ. ಸರಕಾರದ ಮೇಲೆ ಒತ್ತಡ ಹಾಕಿ, ಅದರ ಲಗಾಮನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವ ಧಾವಂತ. ಆಗಷ್ಟೇ ತಮಗೆ ಕಿಮ್ಮತ್ತು, ಇಲ್ಲದಿದ್ದರೆ ಇಲ್ಲ ಎಂಬ ಅಧಿಕಾರಪ್ರಜ್ಞೆ ಅವರನ್ನು ಆಳುತ್ತಿದೆ. ಹೀಗಾಗಿ ಪ್ರತಿಷ್ಠೆ, ಇತಿಮಿತಿ, ಒತ್ತಡ ಹಾಗೂ ಮುಜುಗರದ ಸುಳಿಗೆ ಸಿಕ್ಕಿ ಮೈತ್ರಿ ಸರಕಾರ ವಿಲವಿಲನೆ ಒದ್ದಾಡುತ್ತಿದ್ದರೆ, ಅದರ ಚುಕ್ಕಾಣಿ ಹಿಡಿದಿರುವ ಕುಮಾರಸ್ವಾಮಿ ಗಳಗಳನೆ ಅಳುತ್ತಿದ್ದಾರೆ.

ಜೆಪಿ ‘ವನದಲ್ಲಿ ನಡೆದ ಪಕ್ಷದ ನೂತನ ಸಚಿವರು ಹಾಗೂ ಶಾಸಕರ ಅಭಿನಂದನೆ ಸಮಾರಂಭ ಸಂದರ್ಭ ಕುಮಾರಸ್ವಾಮಿ ತೀವ್ರ ಭಾವೋದ್ವೇಗಕ್ಕೆ ಒಳಗಾಗಿ, ಕಣ್ಣೀರು ಹಾಕಿದ್ದಾರೆ. ಎರಡು ದೋಣಿಯ ಮೇಲೆ ಕಾಲಿಟ್ಟು ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಹೆಜ್ಜೆ-ಹೆಜ್ಜೆಗೂ ಆಗಿರುವ ನಕಾರಾತ್ಮಕ ಅನುಭವ ಕಣ್ಣೀರಾಗಿ ಹರಿದಿದೆ. ಹೀಗಾಗಿಯೇ ಅವರು ಹೇಳಿರುವುದು: ‘ಸಿಎಂ ಸ್ಥಾನ ಮುಳ್ಳಿನ ಹಾಸಿಗೆಯಾಗಿದೆ. ರೈತರ ಸಾಲಮನ್ನಾ ವಿಚಾರದಲ್ಲಿ ಬಂದೆರಗಿರುವ ಎಲ್ಲ ನೋವುಗಳನ್ನು ನುಂಗಿ ವಿಷಕಂಠನಾಗಿದ್ದೇನೆ. ವಿಷಕಂಠನಾಗಿ ಆ ಮುಳ್ಳಿನ ಮೇಲಿದ್ದೇನೆ. ಸಿಎಂ ಆಗಿ ಎರಡು ತಿಂಗಳು ಕೂಡ ಕಳೆದಿಲ್ಲ. ಆಗಲೇ ಎಲ್ಲ ಕೆಲಸ ಆಗಬೇಕು ಎಂದರೆ ಹೇಗೆ ಸಾಧ್ಯ? ಕೆಲಸ ಮಾಡಲು ಸ್ವಲ್ಪ ಕಾಲಾವಕಾಶ ಬೇಡವೇ? ಆದರೆ ಎಲ್ಲರೂ ಒತ್ತಡ ಹಾಕುತ್ತಿದ್ದಾರೆ. ನನಗೆ ಸಿಎಂ ಸ್ಥಾನದ ಮೇಲೆ ವ್ಯಾಮೋಹ ಇಲ್ಲ. ಎರಡು ದಿನದಲ್ಲೇ ಸ್ಥಾನ ಬಿಟ್ಟು ತೊಲಗಲು ಸಿದ್ಧ.

ಸಂಪುಟ ರಚನೆ, ವಿಸ್ತರಣೆ, ಖಾತೆ ಹಂಚಿಕೆ, ಬಜೆಟ್ ಮಂಡನೆ, ರೈತರ ಸಾಲ ಮನ್ನಾ, ಇಂಧನ, ವಿದ್ಯುತ್, ಮದ್ಯದ ಮೇಲಿನ ಹೆಚ್ಚಳ, ಅನ್ನಭಾಗ್ಯ ಅಕ್ಕಿ ಪ್ರಮಾಣ ಕಡಿತ- ಇವೇ ಮೊದಲಾದ ವಿಚಾರಗಳು ಕುಮಾರಸ್ವಾಮಿ ಕಾಲಿಗೆ ಅಡಿಗಡಿಗೂ ತೊಡರಿದ ಮುಳ್ಳುಗಳು. ಬಜೆಟ್‌ನಿಂದ ಹಿಡಿದು ಅನ್ನಭಾಗ್ಯದ ಅಕ್ಕಿ ಪ್ರಮಾಣ ಕಡಿತ ವಿಚಾರದವರೆಗೂ ಸಿದ್ದರಾಮಯ್ಯನವರು ಕುಮಾರಸ್ವಾಮಿ ಮೇಲೆ ಒಂದಷ್ಟು ಒತ್ತಡಗಳನ್ನು ಹೇರಿರುವುದು ಸುಳ್ಳಲ್ಲ. ಒಂದಷ್ಟು ಪತ್ರಗಳನ್ನು ಬರೆದು ಒತ್ತಡವನ್ನು ಇಮ್ಮಡಿಗೊಳಿಸಿದ್ದಾರೆ. ಹೊಸ ಬಜೆಟ್ ಬದಲು ಪೂರಕ ಬಜೆಟ್ ಮಂಡಿಸಬೇಕು, ತಮ್ಮ ಸರಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸಬೇಕು ಎಂದು ಅವರು ಹಾಕಿದ ಎಲ್ಲ ಷರತ್ತುಗಳನ್ನು ಕುಮಾರಸ್ವಾಮಿ ಅನ್ನಭಾಗ್ಯ ಯೋಜನೆ ಅಕ್ಕಿಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಕಡಿತ ಒಂದನ್ನು ಬಿಟ್ಟು. ಈ ಇಳಿಕೆಯಿಂದ ಬೊಕ್ಕಸಕ್ಕೆ 2500 ಕೋಟಿ ರುಪಾಯಿ ಉಳಿತಾಯವಾಗುತ್ತದೆ, ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಡೀಕರಣಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂಬುದು ಸಿಎಂ ಉದ್ದೇಶ. ಆದರೆ ಸಿದ್ದರಾಮಯ್ಯ ಇದಕ್ಕೆ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯು ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಲು ಒತ್ತಡ ಹೇರಿದೆ. ಇದು ಕಾಂಗ್ರೆಸ್‌ನ ಒತ್ತಡಗಳ ಪೈಕಿ ಒಂದು ಸ್ಯಾಂಪಲ್ ಅಷ್ಟೇ. ಇಂಥ ಅನೇಕ ಒತ್ತಡಗಳಿಂದ ಕುಮಾರಸ್ವಾಮಿ ಅಸಹಾಯಕರಾಗಿದ್ದು, ಅದರ ಸಂಕೇತವೇ ಅವರ ಕಣ್ಣೀರು.

ಹೌದು, ಕುಮಾರಸ್ವಾಮಿಗೆ ಒತ್ತಡ ಹೆಚ್ಚಾಗಿದೆ ಎಂಬುದನ್ನು ಅವರ ತಂದೆ, ಮಾಜಿ ಪ್ರಧಾನಿ ದೇವೇಗೌಡರೊಬ್ಬರೇ ಹೇಳಿಲ್ಲ. ಮಿತ್ರಪಕ್ಷ ಕಾಂಗ್ರೆಸ್ ಸಚಿವ ಡಿ.ಕೆ. ಶಿವಕುಮಾರ್ ಕೂಡ ಬಹಿರಂಗವಾಗಿಯೇ ಅರುಹಿದ್ದಾರೆ. ಕುಮಾರಸ್ವಾಮಿ ಕಣ್ಣೀರು ಹಾಕಿದ ದಿನವೇ ಶಿವಕುಮಾರ್ ಈ ಮಾತಾಡಿರುವುದು ಕಾಕಾತಾಳೀಯ. ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಒಂದು ಲಿಮಿಟ್ ಇರುತ್ತದೆ. ಅಕ್ಕಿ ಪ್ರಮಾಣ ಕಡಿತ ಹಿಂತೆಗೆದುಕೊಳ್ಳಲು ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಅವರು ತಮ್ಮದೇ ಪಕ್ಷದ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಇಲ್ಲಿ ಶಿವಕುಮಾರ್ ಅವರು ಕುಮಾರಸ್ವಾಮಿ ಪರ ಬ್ಯಾಟಿಂಗ್ ಆಡಿರುವುದು, ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡಿರುವುದರ ಹಿಂದೆ ಬೇರೆ-ಬೇರೆ ರಾಜಕೀಯ ಕಾರಣಗಳು ಇರಬಹುದು, ಇಲ್ಲದಿರಬಹುದು. ಆದರೆ ಕಾಂಗ್ರೆಸ್‌ನವರೇ ಇಂಥದೊಂದು ಆರೋಪ ಮಾಡಿದಾಗ ಕುಮಾರಸ್ವಾಮಿ ಆಪಾದನೆಗೂ ಒಂದು ಬಲ ಬಂದಂತಾಗುತ್ತದೆ. ಅಲ್ಲಿಗೆ ಕುಮಾರಸ್ವಾಮಿ ಒತ್ತಡದಲ್ಲಿ ಸಿಲುಕಿದ್ದಾರೆ, ಕಾಂಗ್ರೆಸ್ ಅದಕ್ಕೆ ಕಾರಣ, ಕುಮಾರಸ್ವಾಮಿ ನಿರುಮ್ಮಳವಾಗಿ ಅಧಿಕಾರ ಮಾಡಲು ಅವರು ಬಿಡುತ್ತಿಲ್ಲ ಎಂಬ ಆರೋಪ ನಿಜವಾದಂತಾಗುತ್ತದೆ. ಕುಮಾರಸ್ವಾಮಿ ಕಣ್ಣೀರಿಗೂ ನೈಜ ಕಾರಣವಿದೆ ಎನ್ನುವ ಸಂದೇಶ ರವಾನೆಯಾಗಿ, ಅವರ ಪರ ಅನುಕಂಪಕ್ಕೂ ಕಾರಣವಾಗುತ್ತದೆ.

ಹಾಗೆ ನೋಡಿದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಈಗಲೂ ಸಿದ್ದರಾಮಯ್ಯನವರೇ ಪವರ್‌ ಫುಲ್ ನಾಯಕರು. ಶಾಸಕಾಂಗ ಪಕ್ಷದ ನಾಯಕರು ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯನವರ ಮಾತು ಇಲ್ಲೂ ನಡೆಯುತ್ತದೆ, ದಿಲ್ಲಿಯಲ್ಲೂ ನಡೆಯುತ್ತದೆ. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದರೂ ಕಾಂಗ್ರೆಸ್‌ನಲ್ಲಿ ಇವತ್ತಿಗೂ ಅವರೇ ಶಕ್ತಿ ಕೇಂದ್ರ. ದಿನೇಶ್ ಗುಂಡೂರಾವ್ ಹಾಗೂ ಈಶ್ವರ ಖಂಡ್ರೆ ಅವರು ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವುದರ ಹಿಂದೆ ಅವರ ಶಿಫಾರಸ್ಸು ಕೆಲಸ ಮಾಡಿದೆ. ಹೀಗಾಗಿಯೇ ಅವರು ಬಾದಾಮಿಗೆ ಹೋಗಲಿ, ಧರ್ಮಸ್ಥಳಕ್ಕೆ ಹೋಗಲಿ, ಬೆಂಗಳೂರಿಗೆ ಬರಲಿ, ಅರಮನೆ ಮೈದಾನದಲ್ಲಿ ನಿಂತು ಭಾಷಣ ಮಾಡಲಿ ಈ ಶಕ್ತಿ ಕೇಂದ್ರ ಅವರನ್ನು ಹಿಂಬಾಲಿಸುತ್ತದೆ. ಅವರಿಗೆ ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಆಗದಿರಬಹುದು, ಆದರೆ ಅಧಿಕಾರದಲ್ಲಿರುವ ಮೈತ್ರಿ ಸರಕಾರವನ್ನು ಪಲ್ಲಟಗೊಳಿಸುವ ತಾಕತ್ತಂತೂ ಇದೆ. ಹೀಗಾಗಿಯೇ ಮಂತ್ರಿ ಮಂಡಲ ವಿಸ್ತರಣೆ, ಖಾತೆ ಹಂಚಿಕೆ, ಬಜೆಟ್ ವಿಚಾರದಲ್ಲಿ ಅವರ ಮಾತಿಗೆ ಕಿಮ್ಮತ್ತು ಸಿಕ್ಕಿದೆ. ಇದು ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಒಂದಷ್ಟು ಒಳಗುದಿಗೂ ಕಾರಣವಾಗಿದ್ದು, ಡಿಸಿಎಂ ಪರಮೇಶ್ವರ ಹಾಗೂ ಡಿ.ಕೆ. ಶಿವಕುಮಾರ್ ಅವರಂಥವರು ಪರ್ಯಾಯ ಶಕ್ತಿ ಕೇಂದ್ರಗಳಾಗಿ ಹೊರಹೊಮ್ಮಲು ಪ್ರೇರಣೆಯನ್ನೂ ನೀಡಿದೆ. ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಒಂದಷ್ಟು ಕಾಲ ಅಧಿಕಾರ ವಂಚಿತರಾಗಿ ಸಮಾನ ಸಂತ್ರಸ್ತರಾಗಿದ್ದ ಪರಮೇಶ್ವರ ಹಾಗೂ ಶಿವಕುಮಾರ್ ಅಧಿಕಾರ ರಾಜಕಾರಣದ ಸೂಕ್ಷ್ಮ ಸಂವೇದನೆಗಳಿಗೆ ಮಣಿದು ಕುಮಾರಸ್ವಾಮಿಯವರ ಅಂತರಂಗದ ಸ್ನೇಹಿತರಾಗಿ ಪರಿವರ್ತಿತರಾಗಿದ್ದಾರೆ. ಅವರಿಗೆ ಸಿದ್ದರಾಮಯ್ಯನವರಿಗಿಂಥ ಕುಮಾರಸ್ವಾಮಿಯವರೇ ಈಗ ಆಪ್ಯಾಯಮಾನರಾಗಿದ್ದಾರೆ. ಹಿಂದೆ ಒಂದು ಕಾಲದಲ್ಲಿ ದೇವೇಗೌಡರ ಕುಟುಂಬಕ್ಕೆ ಅನತಿ ದೂರದಲ್ಲಿದ್ದ ಇವರನ್ನು ಹತ್ತಿರಕ್ಕೆ ಕರೆತಂದಿರುವುದು ಮತ್ತದೇ ಅಧಿಕಾರ ರಾಜಕಾರಣವೇ. ಇದು ಸಿದ್ದರಾಮಯ್ಯನವರ ಕೋಪಕ್ಕೂ ಕಾರಣವಾಗಿದೆ. ರಾಜಕೀಯ ಶತ್ರು ದೇವೇಗೌಡರ ಕುಟುಂಬದ ಜತೆ ರಾಜಕೀಯ ಅನಿವಾರ್ಯ ಸ್ಥಿತಿಯಿಂದಾಗಿ ಕಾಂಗ್ರೆಸ್ ಸರಕಾರ ಮಾಡಿದ್ದನ್ನೇ ಸಿದ್ದರಾಮಯ್ಯನವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ತಮ್ಮದೇ ಪಕ್ಷದ ನಾಯಕರು ಜತೆ ರಾಜಿಯಾಗಿರುವುದನ್ನು ಹೇಗೆ ತಾನೇ ಸಹಿಸಿಕೊಂಡಾರು? ಹೀಗಾಗಿ ಒಂದು ಕಡೆ ಕುಮಾರಸ್ವಾಮಿ ಮತ್ತೊಂದು ಕಡೆ ಪರಮೇಶ್ವರ, ಶಿವಕುಮಾರ್ ಅವರಂಥ ಸ್ವಪಕ್ಷೀಯ ನಾಯಕರನ್ನು ನಿಯಂತ್ರಿಸುತ್ತಾ, ತಮ್ಮ ನಾಯಕತ್ವದ ಅಸ್ತಿತ್ವ ಕಾಪಿಟ್ಟುಕೊಳ್ಳಬೇಕಾದ ಸವಾಲು ಎದುರಿಸುತ್ತಿರುವ ಸಿದ್ದರಾಮಯ್ಯನವರು ಉಪಾಯವಾಗಿ ಒಂದೊಂದೇ ದಾಳ ಉರುಳಿಸುತ್ತಿದ್ದಾರೆ. ಹಾಗೆ ಅವರು ಉರುಳಿಸುತ್ತಿರುವ ದಾಳಗಳು ಕುಮಾರಸ್ವಾಮಿ ಅವರಿಗೆ ಒತ್ತಡಗಳಾಗಿ ಮಾರ್ಪಟ್ಟಿವೆ.

ಇಲ್ಲಿ ಇನ್ನೊಂದು ವಿಚಾರ. ಉಪಮುಖ್ಯಮಂತ್ರಿ ಆದರೂ ತಾವು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಲು ಆಗಲಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಅಧಿಕಾರದ ಜತೆ ಪ್ರಾಮುಖ್ಯತೆ ಕೂಡ ಮುಖ್ಯ. ಅದೀಗ ಪರಮೇಶ್ವರ ಮತ್ತು ಸಿದ್ದರಾಮಯ್ಯ ನಡುವೆ ಹಂಚಿ ಹೋಗಿದೆ. ಹಿಂದೆ 2004 ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ ಅವರ ಪೂರ್ವಾಧಿಕಾರಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಕೂಡ ಈಗಿನ ಸಿದ್ದರಾಮಯ್ಯನವರಂತೆ ಬರೀ ಶಾಸಕರಾಗಿದ್ದರು. ವಿಧಾನಸಭೆಯಲ್ಲಿ ಕೃಷ್ಣ ಇದ್ದರೆ ಧರ್ಮಸಿಂಗ್ ಅವರಿಗೆ ಒಂದು ರೀತಿಯ ಮುಜುಗರ. ತಮ್ಮ ಹಿಂದಿನ ಮುಖ್ಯಮಂತ್ರಿ ತಮ್ಮ ಹಿಂದಿನ ಸಾಲಿನಲ್ಲಿ ಕೂರುತ್ತಿದ್ದಾರಲ್ಲ ಅಂತ. ಅದು ಕೃಷ್ಣ ಮುಜುಗರ ತರುವ ವಿಚಾರವಾಗಿತ್ತು. ಇನ್ನೊಂದು ಕಾರಣ, ಈಗ ಸಿದ್ದರಾಮಯ್ಯನವರ ಮನೆ ಹತ್ತಿರ ಸೇರುವಂತೆ ಕಾಂಗ್ರೆಸ್ ಶಾಸಕರು ಆಗಲೂ ದೇವೇಗೌಡ ವಿರೋಧಿ ಎಸ್.ಎಂ. ಕೃಷ್ಣ ನಿವಾಸದ ಬಳಿ ನಿತ್ಯ ಜಮಾಯಿಸುತ್ತಿದ್ದರು. ಭಿನ್ನಮತೀಯ ಚಟುವಟಿಕೆ ಅದೂ-ಇದೂ ಅಂತ ಮಾಧ್ಯಮಗಳಲ್ಲಿ ಬರುತ್ತಿದ್ದ ವರದಿಗಳು ಧರ್ಮಸಿಂಗ್ ನೆಮ್ಮದಿಯನ್ನು ಆಪೋಶನ ತೆಗೆದುಕೊಂಡಿದ್ದವು. ಆಗ ಧರ್ಮಸಿಂಗ್ ಮತ್ತವರ ಆಪ್ತರೂ ಆಗಿದ್ದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಸೇರಿ ಸಮಾನ ಸ್ನೇಹಿತ ಶಾಸಕರ ಮೂಲಕ ಕೃಷ್ಣ ಅವರಿಗೆ ಸಂದೇಶ ರವಾನಿಸಿದರು. ಕೃಷ್ಣ ಅವರು ವಿಧಾನಸಭೆಗೆ ಬರುವುದು ಬೇಡ, ಇದರಿಂದ ಇಬ್ಬರಿಗೂ ಆಗುವ ಮುಜುಗರ ತಪ್ಪಿಸಿಕೊಳ್ಳಬಹುದು. ಸರಕಾರದ ಮಟ್ಟದಲ್ಲಿ ಆಗಬೇಕಾದ ಅವರ ಯಾವುದೇ ಕೆಲಸವಿದ್ದರೂ ತಾವೇ ಮಾಡಿಕೊಡುವುದಾಗಿಯೂ ಹೇಳಿ ಕಳುಹಿಸಿದ್ದರು. ಕೃಷ್ಣ ಅವರಿಗೂ ಇದು ಸರಿ ಎಂದು ತೋರಿತು. ಅವರು ನಿಧಾನವಾಗಿ ವಿಧಾನಸಭೆಗೆ ಬರುವುದನ್ನು ಬಿಟ್ಟರು. ಕೆಲದಿನಗಳ ನಂತರ ಮಹಾರಾಷ್ಟ್ರ ರಾಜ್ಯಪಾಲರಾಗಿ ಹೋದರು. ಖುದ್ದು ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮುಂಬಯಿ ರಾಜಭವನಕ್ಕೆ ಹೋಗಿ ಕೃಷ್ಣ ಅವರನ್ನು ಬಿಟ್ಟು ಬಂದರು.

ಆಗ ಕೇಂದ್ರದಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ ಇತ್ತು. ಕಾಂಗ್ರೆಸ್ ಅದರ ಚುಕ್ಕಾಣಿ ಹಿಡಿದಿತ್ತು. ಕೃಷ್ಣ ಮತ್ತು ಧರ್ಮಸಿಂಗ್ ಧರ್ಮಸಂಕಟ ಕಾಂಗ್ರೆಸ್ ಹೈಕಮಾಂಡ್‌ಗೂ ಅರ್ಥವಾಗಿತ್ತು. ಹೀಗಾಗಿ ಕೃಷ್ಣ ಅವರನ್ನು ರಾಜ್ಯಪಾಲರನ್ನಾಗಿ ನಿಯೋಜಿಸಿ ಇಬ್ಬರಿಗೂ ಆಗುತ್ತಿದ್ದ ಮುಜುಗರ ತಪ್ಪಿಸಿತು. ಈಗ ಕುಮಾರಸ್ವಾಮಿ ಮತ್ತು ಅವರ ಪಕ್ಕದಲ್ಲಿ ಕೂರುವ ಕಾಂಗ್ರೆಸ್‌ನ ಪರಮೇಶ್ವರ ಅವರಿಗೆ ಸಿದ್ದರಾಮಯ್ಯ ಕೂಡ ಧರ್ಮಸಿಂಗ್ ಸರಕಾರದ ಎಸ್.ಎಂ. ಕೃಷ್ಣ ಅವರಂತೇ ಗೋಚರಿಸುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ಪರಮೇಶ್ವರ ಬೇರೆ ಪಕ್ಷದವರಿ ರಬಹುದು. ಆದರೆ ಇಬ್ಬರೂ ಸಮಾನ ದುಃಖಿಗಳು. ಹಾಗೆಂದು ಸಿದ್ದರಾಮಯ್ಯ ಅವರನ್ನು ನಿವಾರಿಸಿಕೊಳ್ಳಲು ಇಬ್ಬರಿಗೂ ಅಸ್ತ್ರಗಳೇ ಸಿಗುತ್ತಿಲ್ಲ. ಏಕೆಂದರೆ ಕೇಂದ್ರದಲ್ಲಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ. ಹೀಗಾಗಿ ಸಿದ್ದರಾಮಯ್ಯ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿ ಕಳುಹಿಸಲು ಹೈಕಮಾಂಡ್‌ಗೂ ಸಾಧ್ಯವಿಲ್ಲ. ಅಲ್ಲಿಗೆ ಆ ವಿಚಾರ ಮುಗಿಯಿತು.

ಇಲ್ಲಿ ಇನ್ನೊಂದು ವಿಚಾರ. ಕರ್ನಾಟಕದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಲು ಸಿದ್ದರಾಮಯ್ಯ ಅವರಂಥ ಗಟ್ಟಿ ನಾಯಕ ಹೈಕಮಾಂಡ್‌ಗೂ ಅನಿವಾರ್ಯ ಎನಿಸಿದೆ. ಹಾಗೆ ನೋಡಿದರೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಅವರಿಗೆ ಒತ್ತಡ ಇತ್ತು. ಆದರೆ ಬೇರೆ-ಬೇರೆ ಕಾರಣಗಳಿಂದ ಸಿದ್ದರಾಮಯ್ಯ ಅದನ್ನು ತಮ್ಮ ಆಪ್ತ, ಯುವ ನಾಯಕ ದಿನೇಶ್ ಗುಂಡೂರಾವ್ ಹೆಗಲಿಗೆ ಅದನ್ನು ದಾಟಿಸಿದ್ದಾರೆ. ಜತೆಗೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ನೇತೃತ್ವದ ಬಿಜೆಪಿಗೆ ಪ್ರತಿಚಾಟಿ ಬೀಸಲು ಸಿದ್ದರಾಮಯ್ಯ ಅವರು ಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೋದಿ, ಶಾ ಅವರಿಗೆ ಏಕಾಂಗಿಯಾಗಿ ತಡಕಿಕೊಂಡದ್ದು ಸಿದ್ದರಾಮಯ್ಯ ಅವರೊಬ್ಬರೇ. ಅವರ ತಿರುಗೇಟಿನ ಮುಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸಪ್ಪೆಯಾಗಿದ್ದರು. ಹೀಗಾಗಿ ಸಿದ್ದರಾಮಯ್ಯ ನಾಯಕತ್ವ ಕಾಂಗ್ರೆಸ್‌ಗೆ ಅನಿವಾರ್ಯ. ಅವರ ನಾಯಕತ್ವ ಇರುವವರೆಗೂ ಮೈತ್ರಿ ಸರಕಾರ ಮತ್ತದರ ನಾಯಕ ಕುಮಾಸ್ವಾಮಿ ಅವರಿಗೆ ತಂಟೆ-ತಕರಾರೂ ತಪ್ಪಿದ್ದಲ್ಲ. ನಾನಾ ರೂಪಗಳಲ್ಲಿ, ನಾನಾ ಬಣ್ಣಗಳಲ್ಲಿ ಒತ್ತಡ ಹೀಗೆಯೇ ಮುಂದುವರಿಯುತ್ತದೆ. ಆ ಒತ್ತಡಗಳ ಜತೆಜತೆಗೆ ಕುಮಾರಸ್ವಾಮಿ, ಪರಮೇಶ್ವರ ಜೋಡೆತ್ತಿನಂತೆ ಸರಕಾರದ ನೊಗ ಎಳೆಯಬೇಕಾಗುತ್ತದೆ. ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ತೊಡರಿ ಗಕೊಳ್ಳುವವರೆಗೂ..!

ಲಗೋರಿ: ಸುಳಿಗೆ ಸಿಕ್ಕವರು ಪರಸ್ಪರ ಕಾಲೆಳೆದರೆ ಸಿಗುವುದು ಪಾತಾಳವಷ್ಟೇ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply