ಕ್ಷಮಿಸು ಹಿಮಾ! ನಮಗೆ ಸಾಧನೆಗಿಂತ ನಿನ್ನ ಜಾತಿಯೇ ಹೆಚ್ಚಾಗಿ ಹೋಯ್ತು!

ಡಿಜಿಟಲ್ ಕನ್ನಡ ಟೀಮ್:

ಹಿಮಾದಾಸ್… ಸದ್ಯ ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡುವಂತೆ ಮಾಡಿರುವ ಅಸ್ಸಾಂನ ಯುವ ಓಟಗಾರ್ತಿ. ಬಡತನದಂತಹ ಕಷ್ಟಗಳನ್ನು ಮೆಟ್ಟಿನಿಂತು ಅಲ್ಪಾವಧಿಯಲ್ಲೇ ವಿಶ್ವ ಕ್ರೀಡಾ ವೇದಿಕೆಯಲ್ಲಿ ಭಾರತದ ತಿರಂಗಾವನ್ನು ಹಾರಿಸಿದ್ದರೂ ನಮ್ಮ ಸಮಾಜ ಮಾತ್ರ ಆಕೆಯ ಜಾತಿ ತಿಳಿಯುವ ಕೀಲುಮಟ್ಟಕ್ಕೆ ಇಳಿದಿರುವುದು ದುರಾದೃಷ್ಟಕರ.

ಹೌದು, ಹಿಮಾದಾಸ್ ವಿಶ್ವ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಎಲ್ಲೆಡೆ ಸುದ್ದಿ ಮಾಡಿದಳು. ಯಾರಿಗೂ ಹೆಚ್ಚು ಪರಿಚಯವಿಲ್ಲದ ಈಕೆಯ ಬಗ್ಗೆ ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಹುಟ್ಟುಕೊಳ್ಳುವುದು ಸಹಜ. ಅದೇ ರೀತಿ ಕಳೆದ 2-3 ದಿನಗಳಲ್ಲಿ ಈಕೆಯ ಬಗ್ಗೆ ಗೂಗಲ್ ನಲ್ಲಿ ಹೆಚ್ಚು ಶೋಧವೂ ನಡೆದಿದೆ. ಆದರೆ ನಮ್ಮ ಜನ ಈಕೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದು, ಈಕೆಯ ಸಾಧನೆಯನ್ನಲ್ಲ, ಈಕೆಯ ಕಷ್ಟದ ಹಾದಿಯನ್ನು ಅಲ್ಲ. ಬದಲಿಗೆ ನಮ್ಮ ಜನಕ್ಕೆ ತಿಳಿದುಕೊಳ್ಳಬೇಕಾಗಿದ್ದು ಈಕೆಯ ಜಾತಿ!

ನಿಜ, ನಮ್ಮ ಸಮಾಜ ಆಕೆಯ ಜಾತಿ ಯಾವುದು ಎಂದು ಗೂಗಲ್ ಅನ್ನು ಹೆಚ್ಚು ಕೇಳುತ್ತಿದೆ. ಸದ್ಯ ಗೂಗಲ್ ನಲ್ಲಿ ಹಿಮಾದಾಸ್ ಎಂದು ಟೈಪ್ ಮಾಡಿದರೆ ಮೊದಲು ಬರುವ ಟ್ರೆಂಡಿಂಗ್ ಹಿಮಾದಾಸ್ ಜಾತಿ ಯಾವುದು ಎಂದು. ನಂತರ ಬರುವುದು ಹಿಮಾದಾಸ್ ವಿಶ್ವ ಚಾಂಪಿಯನ್ ಶಿಪ್ ಚಿನ್ನ, ಆನಂತರ ಆಕೆಯ ಜೀವನದ ಬಗ್ಗೆ ಎಂದು. ಅಲ್ಲಿಗೆ ನಮ್ಮ ಸಮಾಜಕ್ಕೆ ಹಿಮಾಳ ಸಾಧನೆಗಿಂತ ಆಕೆಯ ಜಾತಿ ದೊಡ್ಡದು ಎಂದು ಸಾಬೀತಾಗಿದೆ.

ಹಿಮಾಳ ಜಾತಿಯನ್ನು ಹುದುಕಿದವರ ಪೈಕಿ ರಾಜ್ಯವಾರು ನೋಡಿದರೆ, ಕೇರಳ ಮೊದಲ ಸ್ಥಾನದಲ್ಲಿದ್ದರೇ ಎರಡನೇ ಸ್ಥಾನದಲ್ಲಿರುವುದು ಕರ್ನಾಟಕ. ನಂತರ ಹರಿಯಾಣ, ಅಸ್ಸಾಂ ಹಾಗೂ ಬೆಂಗಾಳ ರಾಜ್ಯಗಳು. ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಕರೆದುಕೊಂಡರೂ ನಾವು ಜಾತಿಯ ವ್ಯಾಮೋಹಕ್ಕೆ ಎಷ್ಟರಮಟ್ಟಿಗೆ ಸಿಲುಕಿದ್ದೇವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

Leave a Reply