ಕಾಂಗ್ರೆಸ್- ಜೆಡಿಎಸ್ ಮೈತ್ರಿ ಉಸಿರುಗಟ್ಟಿಸುತ್ತಿದೆ ಕುಮಾರಸ್ವಾಮಿ ಕಣ್ಣೀರು!

ಡಿಜಿಟಲ್ ಕನ್ನಡ ಟೀಮ್:

ಸದ್ಯ ರಾಜ್ಯ ರಾಜಕಾರಣದಲ್ಲಿ ಒತ್ತಡ ರಾಜಕೀಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಟ್ಟಿರುವುದು ಎರಡು ಪಕ್ಷಗಳ ನಡುವಣ ನಾಯಕರ ವಾಗ್ಯುದ್ಧಕ್ಕೆ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ.

ಕುಮಾರಸ್ವಾಮಿ ಅವರದು ನಾಟಕದ ಕಣ್ಣೀರು ಎಂದು ರಾಜ್ಯ ಬಿಜೆಪಿ ನಾಯಕರು ಕುಟುಕಿದರೆ, ಇದರ ಹಿಂದೆ ಕಾಂಗ್ರೆಸ್ ಕುತಂತ್ರ ಅಡಗಿದೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಟೀಕಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನ ಕೆಲವು ನಾಯಕರು ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ, ಮತ್ತೆ ಕೆಲವರು ತಮ್ಮ ಪಕ್ಷದವರ ವಿರುದ್ಧವೇ ಗುಡುಗಿದ್ದಾರೆ. ಯಾವ ಯಾವ ನಾಯಕರು ಏನು ಹೇಳಿದ್ದಾರೆ ನೋಡೋಣ ಬನ್ನಿ…

 • ಸಮ್ಮಿಶ್ರ ಸರ್ಕಾರ ಎಂದರೆ ಸಣ್ಣಪುಟ್ಟ ಸಮಸ್ಯೆ ಇದೇ ಇರುತ್ತದೆ. ಎಲ್ಲವೂ ಸರಿ ಹೋಗುತ್ತದೆ. ಕೋಳಿವಾಡ ಅವರ ಹೇಳಿಕೆ ವೈಯಕ್ತಿಕ.
  ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
 • ಸಮ್ಮಿಶ್ರ ಸರ್ಕಾರ ಮುನ್ನಡೆಸಲು ಧೈರ್ಯ ಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರೆ. ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇದು ಸರಿಯಲ್ಲ.
  ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ
 • ಮಗ ಮಾತ್ರ ಚೆನ್ನಾಗಿರಬೇಕು ಎಂದರೆ ಹೇಗೆ? ಮದುವೆಯಾದ ಬಳಿಕ ಅಳಿಯನೂ ಚೆನ್ನಾಗಿರಬೇಕಲ್ಲವೇ ಗೌಡರೆ? ಕುಮಾರಸ್ವಾಮಿ ಅವರಿಗೆ ಪ್ರಮುಖ ಖಾತೆ ನೀಡಿದ್ದೇವೆಯೇ ಹೊರತು ವಿಷವಲ್ಲ. ತಮ್ಮ ಕಣ್ಣೀರು ಒರೆಸಿಕೊಳ್ಳುವ ಬದಲು ಜನರ ಕಣ್ಣೀರು ಒರೆಸಲಿ.
  ಎ. ಮಂಜು, ಕಾಂಗ್ರೆಸ್ ಮಾಜಿ ಸಚಿವ
 • ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವವರಿಗೆ ಮಾತ್ರ ಕಣ್ಣೀರು ಬರುತ್ತದೆ. ಕಲ್ಲು ಹೃದಯದವರಿಗೆ ಅಲ್ಲ. ಬಡವರ ಕಷ್ಟ ನೋಡಿ ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುವುದು ಸಹಜ.
  ವೆಂಕಟರಾವ್ ನಾಡಗೌಡ ಪಶುಸಂಗೋಪನಾ ಸಚಿವ
 • ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಹಿಸದ ಕೆಲವು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನಾನು ಅವರ ಹೆಸರು ಹೇಳುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಅವರು ಮೈತ್ರಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗೆ ಕಿರುಕುಳ ನೀಡುತ್ತಿರುವುದು ಯಾರೆಂದು ಜನರೇ ಅರ್ಥ ಮಾಡಿಕೊಳ್ಳುತ್ತಾರೆ.
  ಕೆ.ಬಿ ಕೋಳಿವಾಡ, ವಿಧಾನಸಭಾ ಮಾಜಿ ಸ್ಪೀಕರ್.

ಒಟ್ಟಿನಲ್ಲಿ ಕುಮಾರಸ್ವಾಮಿ ಅವರ ಕಣ್ಣೀರು ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಣ ಮೈತ್ರಿ ಉಸಿರುಗಟ್ಟಿಸುತ್ತಿದೆ.

Leave a Reply