ನನ್ನ ಕಣ್ಣೀರಿಗೆ ಯಾವುದೇ ಬಣ್ಣವಿಲ್ಲ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

‘ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಾಗ ನಾನು ಯಾವ ರೀತಿ ಕಟು ವಾಗಿರುತ್ತೇನೋ ಅದೇ ರೀತಿ ನೋವಿನ ಸಂದರ್ಭದಲ್ಲಿ ಭಾವುಕನಾಗುತ್ತೇನೆ…’ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಕಣ್ಣೀರಿನ ಪ್ರಕರಣಕ್ಕೆ ನೀಡಿರುವ ಸ್ಪಷ್ಟನೆ.

ಪಕ್ಷದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದನ್ನು ವಿವಿಧ ಪಕ್ಷಗಳ ನಾಯಕರು ಟೀಕೆ ಮಾಡಿದ್ದರು. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಹೇಳಿದ್ದಿಷ್ಟು…

‘ಇದು ನನ್ನ ಸಹಜ ನಡವಳಿಕೆ. ರಾಜ್ಯದ ಜನತೆಯ ನೋವಿಗಾಗಿ ನಾನು ಬಹಿರಂಗವಾಗಿ ಕಣ್ಣೀರಿಡುತ್ತೇನೆ. ಅದು ನನ್ನಲ್ಲಿ ಮೂಡಿಬರುವ ಸಹಜ ಪ್ರಕ್ರಿಯೆ. ಅದಕ್ಕೆ ಯಾವುದೇ ‘ಬಣ್ಣ’ವಿರುವುದಿಲ್ಲ. ನನ್ನ ನಡವಳಿಕೆ ಕೂಡ ಕಣ್ಣೀರಿನಷ್ಟೇ ಪಾರದರ್ಶಕವಾಗಿರುತ್ತೆ. ನಾನು ನನ್ನ ಕುಟುಂಬದಂತಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸದಸ್ಯರೊಂದಿಗೆ ಚರ್ಚೆ ಮಾಡುವಾಗ ಭಾವುಕನಾಗಿದ್ದು ನಿಜ. ನಾನು, ನನ್ನವರೊಂದಿಗೆ ನನ್ನ ನೋವನ್ನು ಹಂಚಿಕೊಂಡಿದ್ದೇನೆ. ಕಣ್ಣೀರು ಹಾಕಿದ್ದು ನಿಜ. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ.

ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತ ಮಿಗಿಲಾಗಿ ನಾನೂ ಒಬ್ಬ ಮನುಷ್ಯ. ನನ್ನಲ್ಲಿಯೂ ಕೆಲವು ಹುಟ್ಟುಗುಣಗಳಿವೆ. ಅವುಗಳನ್ನು ಹೊರಹಾಕುವ ಸಂದರ್ಭದಲ್ಲಿ ಭಾವುಕವಾಗುವುದು ಸಹಜ. ನಾನು ಸರ್ಕಾರದ ಸಮಾರಂಭದಲ್ಲಿ ಇಲ್ಲವೆ ಸರ್ಕಾರಿ ಸಭೆಗಳಲ್ಲಿ ಕಣ್ಣೀರು ಹಾಕಿಲ್ಲ. ಆ ಸಭೆಯಲ್ಲಿ ಒಂದು ಗಂಟೆ ಮಾತನಾಡಿದ್ದೇನೆ. ಎಲ್ಲಿಯೂ ನಾನು, ಯಾವುದೇ ಪಕ್ಷ ನನಗೆ ಕಿರುಕುಳ ನೀಡುತ್ತಿದೆ ಎಂದು ಹೇಳಿಕೊಂಡಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಾಲ ಮನ್ನಾ ಮಾಡಲು ಕಷ್ಟ ಪಟ್ಟಿದ್ದೇನೆ. ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಆದರೂ ನನ್ನನ್ನು ಜನರು ಬೆಂಬಲಿಸುತ್ತಿಲ್ಲ. ಅವರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ನೋವನ್ನು ವ್ಯಕ್ತ ಪಡಿಸುವಾಗ ಕಣ್ಣೀರು ತುಂಬಿ ಬಂದಿದ್ದು ನಿಜ. ಆದರೆ, ಯಾವುದೇ ಪಕ್ಷದ ನೀಡುತ್ತಿರುವ ತೊಂದರೆಯನ್ನು ಸಹಿಸಿಕೊಳ್ಳದೇ, ನೋವನ್ನು ಈ ರೀತಿ ಹೊರಹಾಕಿದ್ದೇನೆ ಎಂದು ಹೇಳುವುದು ಸರಿಯಲ್ಲ.’

ದೆಹಲಿ ಭೇಟಿ ಬಗ್ಗೆ ನೀಡಿದ ಮಾಹಿತಿ…

‘ರಾಜ್ಯದ ಲೋಕಸಭಾ ಮತ್ತು ರಾಜ್ಯ ಸಭಾ ಸದಸ್ಯರ ಸಭೆಯನ್ನು ನಾಳೆ (ಜೂನ್ 18) ಸಂಜೆ ಕರೆದಿದ್ದೇನೆ. ಹೀಗಾಗಿ ನವದೆಹಲಿಗೆ ಆಗಮಿಸಿದ್ದೇನೆ. ಅಲ್ಲದೆ, ಇದೇ ಸಂದರ್ಭದಲ್ಲಿ ಕೇಂದ್ರ ಆಯ್ದ ಸಚಿವರೊಂದಿಗೆ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತುಕತೆ ನಡೆಸಲು ಬಂದಿದ್ದೇನೆ.’

Leave a Reply