ಕುಮಾರಸ್ವಾಮಿ ಕಣ್ಣೀರು ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಸಿಕ್ಕ ಹೊಸ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ ತಮ್ಮ ಪ್ರತಿ ನಡೆಯನ್ನೂ ಪ್ರಶ್ನಿಸಿ ಟೀಕಿಸಿ ಒತ್ತಡ ಹೇರುತ್ತಿರುವುದರ ವಿರುದ್ಧ ಭಾವುಕರಾಗಿ ಕುಮಾರಸ್ವಾಮಿ ಅವರು ಸುರಿಸಿರುವ ಕಣ್ಣೀರು ಈಗ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಬಳಸಲು ಹೊಸ ಅಸ್ತ್ರವಾಗಿದೆ.

ಹೌದು, ಕುಮಾರಸ್ವಾಮಿ ಅವರ ಕಣ್ಣೀರು ನಾಟಕೀಯ ಎಂದು ರಾಜ್ಯ ನಾಯಕರು ಟೀಕಿಸಿ ಕೈತೊಳೆದುಕೊಂಡರು. ಆದ್ರೆ ಕೇಂದ್ರ ನಾಯಕರು ಕುಮಾರಸ್ವಾಮಿ ಅವರ ಕಣ್ಣೀರನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ, ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ತಮ್ಮ ಫೇಸ್ಬುಕ್ ನಲ್ಲಿ ಕುಮಾರಸ್ವಾಮಿ ಅವರ ಕಣ್ಣೀರನ್ನು ಮುಂದಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಂದಾಗುತ್ತಿರುವುದು ದೇಶಕ್ಕೆ ಅಪಾಯಕಾರಿ ಎಂದು ಎಚ್ಚರಿಸುವ ಪ್ರಯತ್ನ ಮಾಡಿರುವುದು.

ಅರುಣ್ ಜೇಟ್ಲಿ ಅವರ ಫೇಸ್ಬುಕ್ ಪೋಸ್ಟಿನ ಸಾರಾಂಶ ಹೀಗಿದೆ…

‘ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮನ್ನು ವಿಷಕಂಠನಿಗೆ ಹೋಲಿಸಿಕೊಂಡು ಕಣ್ಣೀರಿಟ್ಟಿರುವ ಬೆಳವಣಿಗೆ ಬೇಸರ ತಂದಿದೆ. ಅವರ ಹೇಳಿಕೆಗಳನ್ನು ಕೇಳಿದರೆ ಹಳೆಯ ಹಿಂದಿ ಶೋಕ ಸಿನಿಮಾ ನೆನಪಾಗುತ್ತಿದೆ. ಕರ್ನಾಟಕ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಈ ಸರ್ಕಾರದ ಮುಖ್ಯಮಂತ್ರಿಯಾಗಿರುವುದರಿಂದ ಸಹಜವಾಗಿಯೇ ಅವರ ಮೇಲೆ ಒತ್ತಡ ಹಾಕಲಾಗುತ್ತದೆ. ಕಾಂಗ್ರೆಸ್ ತನ್ನ ಜತೆ ಮೈತ್ರಿ ಮಾಡಿಕೊಂಡ ನಾಯಕರುಗಳನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸುವುದು ಹೊಸತಲ್ಲ. ಹಿಂದೆ ಚರಣ್ ಸಿಂಗ್, ಚಂದ್ರ ಶೇಖರ್, ದೇವೇಗೌಡ, ಐ.ಕೆ ಗುಜ್ರಾಲ್ ಅವರಿಗೂ ಕಾಂಗ್ರೆಸ್ ಇದೇ ರೀತಿಯ ಕಿರುಕುಳ ನೀಡಿತ್ತು.

ಕರ್ನಾಟಕದಲ್ಲಿ ರಚನೆಯಾಗಿರುವ ಮೈತ್ರಿ ಸರ್ಕಾರಕ್ಕೆ ಯಾವುದೇ ಸೈದ್ಧಾಂತಿಕ ಗುರಿ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಬಹಿರಂಗವಾಗಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಂದಾಗುತ್ತಿದ್ದು ಈ ಮೈತ್ರಿಗೂ ಯಾವುದೇ ಸೈದ್ಧಾಂತಿಕ ಉದ್ದೇಶವಿಲ್ಲ. ಮೋದಿ ಅವರನ್ನು ಅಧಿಕಾರದಿಂದ ದೂರವಿಡುವುದೇ ಅವರ ಗುರಿ. ಹೀಗಾಗಿ ಈ ಮೈತ್ರಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದರೆ, ಇಂದು ಕರ್ನಾಟಕ ಮುಖ್ಯಮಂತ್ರಿಗೆ ಬಂದಿರುವ ಪರಿಸ್ಥಿತಿ ದೇಶದ ಪ್ರಧಾನಿಗೆ ಬರಲಿದೆ. ನಮಗೆ ದೇಶವನ್ನು ಮುನ್ನಡೆಸುವ ಪ್ರಧಾನ ಮಂತ್ರಿ ಬೇಕೋ ಅಥವಾ ಅಸಹಾಯಕ ಪ್ರಧಾನ ಮಂತ್ರಿ ಬೇಕಾ? ವಿರೋಧ ಪಕ್ಷಗಳ ಮೈತ್ರಿಯ ಭವಿಷ್ಯವನ್ನು ನಾವು ಕರ್ನಾಟಕದಲ್ಲಿ ನೋಡುತ್ತಿದ್ದೇವೆ.’

ಹೀಗೆ ಕರ್ನಾಟಕ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಜೇಟ್ಲಿ ಅವರು ರಾಷ್ಟ್ರಮಟ್ಟದಲ್ಲಿ ಅದರಲ್ಲೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದಾಗುತ್ತಿರುವ ವಿರೋಧ ಪಕ್ಷಗಳ ಮೈತ್ರಿಯನ್ನು ಟೀಕಿಸಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನಷ್ಟು ತಿಂಗಳು ಸಮಯವಿದ್ದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿಜೆಪಿಗೆ ಇನ್ನೆಷ್ಟು ಅಸ್ತ್ರಗಳನ್ನು ನೀಡುತ್ತದೆ ಎಂಬ ಕುತೂಹಲ ಮೂಡಿದೆ.

Leave a Reply