ಅವಧಿಗೂ ಮುನ್ನವೇ ಲೋಕಸಭಾ ಎಲೆಕ್ಷನ್?

ಡಿಜಿಟಲ್ ಕನ್ನಡ ಟೀಮ್:

ನರೇಂದ್ರ ಮೋದಿ‌ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಮುಕ್ತಾಯವಾಗಿದೆ. ಉಳಿದಿರೋದು ಒಂದು ವರ್ಷ ಮಾತ್ರ ಬಾಕಿ. ಹೇಳಿದ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರಾ? ಜನರಿಗೆ ಪ್ರಧಾನಿ ಮೋದಿ ನೇತೃತ್ವದ ಆಳ್ವಿಕೆಗೆ ಇಷ್ಟ ಆಗಿದ್ಯಾ? ಇಲ್ಲವಾ ಅನ್ನೋ ಬಗ್ಗೆ ಜನಾಭಿಪ್ರಾಯ ಕೇಳುವ ಸಮಯ ಮತ್ತೊಮ್ಮೆ ಬಂದಿದೆ. ನಿಗದಿಯಂತೆ ಚುನಾವಣೆ ನಡೆದರೆ ಮುಂದಿನ ವರ್ಷ ಏಪ್ರಿಲ್, ಮೇ ನಲ್ಲಿ ನಡೆಯಬೇಕಿದೆ. ಆದ್ರೆ ಬಿಜೆಪಿ ಪಕ್ಷ ಮಾಡಿಕೊಳ್ತಿರೋ ತಯಾರಿ ನೋಡಿದ್ರೆ ವರ್ಷಾಂತ್ಯ ಅಥವಾ ವರ್ಷದ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಅನ್ನೋ ಅನುಮಾನ ಸಾರ್ವಜನಿಕರಲ್ಲಿ‌ ಮೂಡುವಂತೆ ಮಾಡುತ್ತಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ನಿರೀಕ್ಷಿತ ಫಲಿತಾಂಶ ಬಾರದೆ ಅತ್ಯಧಿಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ವಿರೋಧ ಪಕ್ಷದಲ್ಲಿ ಕುಳಿತಿದೆ. ವಿಧಾನಸಭೆಯಲ್ಲಿ ನಿರೀಕ್ಷಿತ ಗೆಲುವು ಪಡೆಯಲು ಸಾಧ್ಯವಾಗದ ಮೋದಿ, ಮತ್ತೊಮ್ಮೆ ಲೋಕಸಭಾ ಅಖಾಡಕ್ಕೆ ಸಜ್ಜಾಗ್ತಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸೋ ಸಾಧ್ಯತೆ ಇದೆ ಎನ್ನಲಾಗ್ತಿದ್ರು, ಲೋಕಸಭಾ ಚುನಾವಣಾ ತಯಾರಿ ಬಗ್ಗೆ ಸ್ವತಃ ಮೋದಿಯೇ ರಾಜ್ಯ ನಾಯಕರಿಗೆ ಕ್ಲಾಸ್ ಕೊಡಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಹಿನ್ನಲೆಯಲ್ಲಿಯೇ ಜುಲೈ 27 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದು, ಪೂರ್ವ ತಯಾರಿ ಬಗ್ಗೆ ಸಿದ್ಧತೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಮಿತ್ ಶಾ ಆಗಮನ ಹಿನ್ನಲೆಯಲ್ಲಿ ರಾಜ್ಯ ನಾಯಕರೂ ಕೂಡ ಚುರುಕಾಗುತ್ತಿದ್ದು, ಬಿ.ಎಸ್ ಯಡಿಯೂರಪ್ಪ ಜುಲೈ 21 ರಿಂದ ರಾಜ್ಯ ಪ್ರವಾಸ ಆರಂಭ ಮಾಡಲಿದ್ದಾರೆ. ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ದಿನ ಬೃಹತ್ ರೈತ ಸಮಾವೇಶ ನಡೆಸಲು ನಿರ್ಧಾರ ಮಾಡಿದ್ದು, ಬೆಳಗಾವಿಯ ಚಿಕ್ಕೋಡಿ ಅಥವಾ ಹಾವೇರಿಯಲ್ಲಿ ರೈತ ಸಮಾವೇಶ ಆಯೋಜನೆ ಮಾಡುವ ಚಿಂತನೆಯಿದೆ. ಸಮಾವೇಶದಲ್ಲಿ ನಾಲ್ಕು ಲಕ್ಷ ರೈತರನ್ನು ಸೇರಿಸುವ ಬಗ್ಗೆ ಕೇಂದ್ರ ನಾಯಕರಿಂದ ರಾಜ್ಯಾಧ್ಯಕ್ಷರಿಗೆ ಮೌಕಿಕ ಸೂಚನೆ ರವಾನೆಯಾಗಿದೆ ಅಂತೆ. ಪ್ರಧಾನಿ ಮೋದಿ ರೈತ ಸಮಾವೇಶ ಮೂಲಕ‌ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಕಹಳೆ ಮೊಳಗಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಒಮ್ಮೆ ಪ್ರಧಾನಿ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ಆಗಸ್ಟ್ ಅಂತ್ಯದಲ್ಲಿ ಚುನಾವಣೆ ಘೋಷಣೆ ಮಾಡಿಬಿಡ್ತಾರಾ ಅನ್ನೋ ಚಿಂತನೆಯಲ್ಲಿವೆ ವಿರೋಧ ಪಕ್ಷಗಳು.

ಇಷ್ಟೆಲ್ಲಾ ಹೇಳಿದ ಮೇಲೆ ನಿಮ್ಮ ಮನಸ್ಸಿಗೆ ಹೀಗೊಂದು ಪ್ರಶ್ನೆ ಬಂದಿರಬಹುದು. ಅದೇನಂದ್ರೆ‌ ಇನ್ನೂ ಆರು ತಿಂಗಳು ಅಧಿಕಾರ ನಡೆಸಿದ ಬಳಿಕ ಚುನಾವಣೆಗೆ ಹೋಗಬಹುದು, ಹೀಗಿದ್ದ ಮೇಲೆ ಮೋದಿ ನೇತೃತ್ವದಲ್ಲಿ ಬೇಗನೆ ಚುನಾವಣೆಗೆ ಹೋಗುವ ಉದ್ದೇಶ ಏನಿರಬಹುದು ಎಂದು. ಅದಕ್ಕೂ ಉತ್ತವಿದೆ. ಮೊದಲಿಗೆ ವಿರೋಧ ಪಕ್ಷಗಳು ಚುನಾವಣೆ ಇನ್ನೂ ದೂರವಿದೆ ಅನ್ನೋ ಕಾರಣದಿಂದ ತಯಾರಿ ಆರಂಭ ಮಾಡದೇ ಇರಬಹುದು, ಆ ಪಕ್ಷಗಳಿಗೆ ಬರಬೇಕಿದ್ದ ಫಂಡ್ ಇನ್ನು ಬಾರದೆ ಇರಬಹುದು. ಹೀಗಿದ್ದಾಗ ಎದುರಾಳಿಯನ್ನು ಸೋಲಿಸುವುದು ಸುಲಭ. ಈಗಾಗಲೇ ಬಿಜೆಪಿ ಸಿದ್ಧತೆ ನಡೆಸಿದ್ದು, ಒಂದು ವೇಳೆ ಶೀಘ್ರದಲ್ಲೇ ಚುನಾವಣೆ ಘೋಷಣೆ ಆಗಿಬಿಟ್ಟರೆ, ವಿರೋಧ ಪಕ್ಷಗಳ ತಯಾರಿಗೆ ಸೂಕ್ತ ಸಮಯ ಸಿಗುವುದಿಲ್ಲ, ಪ್ರಣಾಳಿಕೆ, ಪ್ರಚಾರ, ಹಣಕಾಸು ಕ್ರೂಢಿಕರಣ ಹೀಗೆ ಹಲವು ವಿಚಾರದಲ್ಲಿ ಬ್ಯುಸಿಯಾಗುವ ಹಾಗೆ ಮಾಡಿದರೆ ಎದುರಾಳಿಗಳ ಆಕ್ರಮಣ ಕಡಿಮೆಯಾಗಲಿದೆ ಅನ್ನೋ ತಂತ್ರಗಾರಿಕೆ. ಒಟ್ಟಾರೆ ಬಿಜೆಪಿ ತಯಾರಿ ನೋಡುತ್ತಿದ್ದರೆ, ನಿಗದಿತ ಅವಧಿಗಿಂತಲೂ ಮೊದಲೇ ಚುನಾವಣೆ ಎದುರಿಸುವ ಇಂಗಿತ ಇದ್ದಂತೆ ಕಾಣ್ತಿದೆ ಅಂತಾನೇ ಹೇಳಬಹುದು.

Leave a Reply