ಮುಂಗಾರು ಅಧಿವೇಶನ: ಕಾಂಗ್ರೆಸ್ ಗೆ ಬಿಜೆಪಿಯಿಂದ ‘ಡೀಲ್ ಆಫರ್’! ರಾಹುಲ್ ಒತ್ತಡದ ತಂತ್ರಕ್ಕೆ ರವಿಶಂಕರ್ ಪ್ರತಿತಂತ್ರ!

ಡಿಜಿಟಲ್ ಕನ್ನಡ ಟೀಮ್:

ನಾಳೆಯಿಂದ ಮುಂಗಾರು ಸಂಸತ್ತಿನ ಅಧಿವೇಶನ ಆರಂಭವಾಗಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತಂತ್ರ ಪ್ರತಿತಂತ್ರಗಳ ಪ್ರಯೋಗ ಭರ್ಜರಿಯಾಗಿ ಸಾಗಿದೆ.

ಬಜೆಟ್ ಅಧಿವೇಶನ ಸದ್ದು ಗದ್ದಲ ಹಾಗೂ ಪ್ರತಿಭಟನೆಯ ಮಧ್ಯೆ ಸಮಯ ವ್ಯರ್ಥವಾಗಿತ್ತು. ಇನ್ನು ಉಭಯ ಸದನಗಳಲ್ಲಿ ತ್ರಿವಳಿ ತಲಾಕ್, ಹಿಂದುಳಿದ ವರ್ಗಗಳ ಮಸೂದೆಯಂತಹ ಅನೇಕ ಮಹತ್ವದ ಅನುಮೋದನೆ ಪಡೆಯಲು ಕಾಯುತ್ತಿವೆ. ಈ ಮಧ್ಯೆ ದಿವಾಳಿ ಹಾಗೂ ಸಾಲ ನೀತಿ (ತಿದ್ದುಪಡಿ), ಆರ್ಥಿಕ ಅಪರಾಧ ಮಸೂದೆಯಂತಹ ನೂತನ ಮಸೂದೆಗಳು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲು ಬರುತ್ತಿವೆ. ಇದೆಲ್ಲದರ ಜತೆಗೆ ಲೋಕಸಭೆ ಚುನಾವಣೆ ಸಮೀಪ ಇರುವ ಕಾರಣ ಈಬಾರಿಯ ಅಧಿವೇಶನ ಸಾಕಷ್ಟು ಮಹತ್ವ ಪಡೆದಿದೆ.

ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ. ಇದರ ಭಾಗವಾಗಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸರ್ಕಾರಕ್ಕೆ ಪತ್ರ ಬರೆದು, ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದರು. ಅದರೊಂದಿಗೆ ಮಹಿಳೆಯರ ಪರ ಭಾಷಣ ಮಾಡುವ ಬಿಜೆಪಿ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು.

ರಾಹುಲ್ ಗಾಂಧಿ ಅವರ ಈ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೂಡಿದೆ. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಸರ್ಕಾರ ಸಿದ್ಧವಿದೆ ಎಂದಿರುವ ಬಿಜೆಪಿ. ಈ ಮಸೂದೆ ಜತೆಗೆ ರಾಜ್ಯಸಭೆಯಲ್ಲಿ ಬಾಕಿ ಉಳಿದಿರುವ ತ್ರಿವಳಿ ತಲಾಕ್ ನಿಷೇಧ ಮತ್ತು ನಿಖಾ ಹಲಾಲ್ (ವಿಚ್ಛೇದಿತ ಮಹಿಳೆಯ ಮರುಮಾಡುವೆ ನಿಯಮ) ಮಸೂದೆ ಜಾರಿಗೊಳಿಸಲು ಸಹಕಾರ ನೀಡಿ ಎಂದಿದೆ. ಈ ಮೂಲಕ ಕಾಂಗ್ರೆಸ್ ಅವಧಿಯಲ್ಲಿ ಮಂಡನೆಯಾದ ಮಸೂದೆ ಜಾರಿಗೆ ತರಬೇಕಾದರೆ, ನಮ್ಮ ಮಸೂದೆಗಳ ಜಾರಿಗೆ ಸಹಕರಿಸಿ ಎಂಬ ಡೀಲ್ ಆಫರ್ ಕೊಟ್ಟಿದೆ.

ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪತ್ರ ಬರೆದು ತ್ರಿವಳಿ ತಲಾಕ್ ಮಸೂದೆ ಜಾರಿಗೆ ಸಹಕರಿಸದ ಕಾಂಗ್ರೆಸ್ ಮೇಲೆಯೇ ಒತ್ತಡ ಹೇರಿದ್ದಾರೆ.

Leave a Reply