ಕರ್ನಾಟಕದ ₹ 2500 ಕೋಟಿ ಯೋಜನೆಗಳಿಗೆ ಕೇಂದ್ರದ ಸಮ್ಮತಿ, ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಮೋದಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಕೇಂದ್ರದ ವಿವಿಧ ಸಚಿವರುಗಳೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಪರಿಣಾಮ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ₹2500 ಕೋಟಿ ಅನುದಾನ ನೀಡಲು ಒಪ್ಪಿಕೊಂಡಿದೆ.

ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿಗಳು, ಕೇಂದ್ರದ ಆಹಾರ ಮತ್ತು ನಾಗರೀಕರ ಸರಬರಾಜು, ಭೂ ಸಾರಿಗೆ ಮತ್ತು ಜಲಸಂಪನ್ಮೂಲ, ಕೃಷಿ ಸಚಿವರು, ರೈಲ್ವೆ ಮತ್ತು ಕಲ್ಲಿದ್ದಲು ಹಾಗೂ ರಕ್ಷಣಾ ಸಚಿವರನ್ನು ಖುದ್ದಾಗಿ ಭೇಟಿ ಮಾಡಿದ್ದರು. ಈ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಹೇಳಿದಿಷ್ಟು…

‘ತಮ್ಮ ಭೇಟಿಯ ವೇಳೆ ರಾಜ್ಯದ ಕೋರಿಕೆಗಳಿಗೆ ಎಲ್ಲಾ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಂತೋಷ ತಂದಿದೆ. ಹೀಗಾಗಿ ಕೇಂದ್ರದ ಜತೆಗಿನ ಮಾತುಕತೆ ಫಲಪ್ರಧವಾಗಿತ್ತು. ಇದಕ್ಕೆ ಸಹಕಾರ ನೀಡಿದ ಎಲ್ಲಾ ಸಚಿವರನ್ನು ರಾಜ್ಯದ ಪರವಾಗಿ ಅಭಿನಂದಿಸುತ್ತೇನೆ.’

ಕೇಂದ್ರದಿಂದ ಸಿಗಲಿರುವ ಪ್ರಮುಖ ಅನುದಾನಗಳು ಹಾಗೂ ಯೋಜನೆಗಳಿಗೆ ಸಿಕ್ಕ ಭರವಸೆ ಹೀಗಿವೆ…

  • 2014 ರಿಂದ ಇಂದಿನವರೆಗೆ ರಾಜ್ಯಕ್ಕೆ ಬಿಡುಗಡೆಯಾಗಬೇಕಿದ್ದ ಬೆಂಬಲ ಬೆಲೆಯ ಬಾಕಿ ಮೊತ್ತವಾದ ₹954 ಕೋಟಿ ಬಿಡುಗಡೆ ಮಾಡಲು ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ರಾಮ್ ವಿಲಾಸ್ ಪಾಸ್ವಾನ್ ಆದೇಶ.
  • ರಾಜ್ಯದಲ್ಲಿ 85 ಲಕ್ಷ ಲೀಟರ್ ಗಳಷ್ಟು ಹಾಲು ಉತ್ಪಾದನೆಯಾಗುತ್ತಿದ್ದು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿರುವ ಜಿಲ್ಲಾ ಹಾಲು ಉತ್ಪಾದಕರ ಸಂಘಗಳಲ್ಲಿ ಮೆಗಾಡೈರಿಗಳನ್ನು ಸ್ಥಾಪಿಸುವ ರಾಜ್ಯದ ಉದ್ದೇಶ ಮೆಚ್ಚಿಕೊಂಡ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಅವರು ಇದಕ್ಕಾಗಿ ₹ 900 ಕೋಟಿ ಅನುದಾನ ಬಿಡುಗಡೆಗೆ ಸಮ್ಮತಿ. ಸೂಚಿಸಿದ್ದಾರೆ. ಈ ಅನುದಾನದಲ್ಲಿ ಹಾಸನ, ಕೋಲಾರ ಮತ್ತು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೆಗಾ ಡೈರಿಗಳನ್ನು ಸ್ಥಾಪನೆ.
  • ರಾಜ್ಯದಲ್ಲಿ ಮಾರುಕಟ್ಟೆಗಳನ್ನು ಉನ್ನತೀಕರಿಸಲು ಅಗತ್ಯವಿರುವ ಅನುದಾನ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಆವರ್ತ ನಿಧಿ, ಬೆಂಬಲ ಬೆಲೆ ಹಾಗೂ ಅಡಿಕೆ ಮತ್ತು ತೆಂಗು ಬೆಳೆಗಾರರ ರಕ್ಷಣೆಗಾಗಿ ಅಗತ್ಯವಿರುವ ಕ್ರಮಗಳಿಗೆ ಅನುದಾನವನ್ನು ಒದಗಿಸಲು ಕೃಷಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ.
  • ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂಥೆ ರಾಜ್ಯದಲ್ಲಿರುವ ಪ್ರಮುಖ ಹೆದ್ದಾರಿಗಳ ನಿರ್ಮಾಣಕ್ಕೆ ಇರುವ ಅಡಚಣೆಗಳನ್ನು ಸರ್ಕಾರ ನಿವಾರಿಸಿದ್ದು, ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿಕೊಡುವಂತೆ ಮಾಡಿದ ಮನವಿಗೆ ಕೇಂದ್ರ ಭೂಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರಾದ ನಿತಿನ್ ಗಡ್ಕರಿ ಅವರಿಂದ ಸಕಾರಾತ್ಮಕ ಸ್ಪಂದನೆ.
  • ನದಿ ನೀರು ಹಂಚಿಕೆ ಪ್ರಾಧಿಕಾರ ಮತ್ತು ಮೇಕೆದಾಟು ವಿಷಯಗಳ ಬಗ್ಗೆಯೂ ಸಚಿವರೊಂದಿಗೆ ಚರ್ಚೆ.
  • ಮೆಟ್ರೋ ವಿಸ್ತರಣೆ ಸಂದರ್ಭದಲ್ಲಿ ನಿಲ್ದಾಣ ಕಾಮಗಾರಿಗಳ ಪೈಕಿ ಕೆಲವೊಂದು ಪ್ರದೇಶದಲ್ಲಿ ಅದು ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಬಗ್ಗೆ ಅವರಿಂದ ಅನುಮತಿ ಪಡೆದುಕೊಳ್ಳುವ ಸಂಬಂಧ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಜತೆ ಚರ್ಚೆ ಹಾಗೂ ಅವರಿಂದ ಅನುಮತಿ ಪಡೆದುಕೊಳ್ಳುವ ಸಂಬಂಧ ಅಗತ್ಯವಿರುವ ನೆರವನ್ನು ನೀಡುವುದಾಗಿ ಭರವಸೆ.
  • ಕೊಂಕಣ ರೈಲ್ವೆಯಲ್ಲಿರುವ ಪೊಲೀಸ್ ಬಲದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಾಲಿಯಾಗಿರುವ 900 ಹುದ್ದೆಗಳ ಜೊತೆಗೆ ಸರ್ಕಾರಿ ರೈಲ್ವೆ ಪೊಲೀಸ್ ದಳದ (ಜಿಆರ್ ಪಿ) ಸಂಖ್ಯಾಬಲಕ್ಕೆ ಹೆಚ್ಚುವರಿಯಾಗಿ 919ಕ್ಕೆ ಏರಿಕೆ ಮಾಡುವಂತೆ ಮತ್ತು ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಆದ್ಯತೆ ನೀಡುವಂತೆ ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಸಚಿವರಾದ ಪಿಯೂಷ್ ಗೋಯೆಲ್ ಬಳಿ ಮನವಿ. ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ.

Leave a Reply