ಬಿಜೆಪಿ ಸಂಸದರು ಉಲ್ಟಾ ಹೊದೆಡೆದಿದ್ದಕ್ಕೆ ಕಂಗಾಲಾದ ಕಾಂಗ್ರೆಸ್!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಉಳಿಸಿಕೊಂಡಿದೆ. ಆದ್ರೆ ಭಿನ್ನಮತ ಹಾಗೂ ಶಾಸಕರ ಅಸಮಾಧಾನದಿಂದ ಕಂಗಾಲಾಗಿದ್ದ ಹೈಕಮಾಂಡ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದುವೇ ದುಬಾರಿ ಐ ಫೋನ್ ಗಿಫ್ಟ್. ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಕಳೆದ ಮೂರು ದಿನಗಳ ಹಿಂದೆ ಸಂಸದರಿಗೆ ₹ 50 ಸಾವಿರದ ಆ್ಯಪಲ್ ಫೋನ್ ಜೊತೆಗೆ ಒಂದು ಲೆದರ್ ಬ್ಯಾಗ್ ಸಮೇತ ಉಡುಗೊರೆ ಕಳಿಸಿದ್ದರು. ಬಿಜೆಪಿ ಸಂಸದರು‌ ಇದನ್ನು ತಿರಸ್ಕರಿಸಿ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದರಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಐಪೋನ್ ತಿರಸ್ಕರಿಸಿ ಸಿಎಂಗೆ ಪತ್ರ ಬರೆದಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಿಎಂಗೆ ಖಾರದ ಪತ್ರ ಬರೆದಿದ್ದು, ಪೌರಕಾರ್ಮಿಕರ ಕಲ್ಯಾಣಕ್ಕೆ ಈ ಹಣ ಬಳಸಿ ಎಂದಿದ್ದರೆ, ಸಿ.ಟಿ ರವಿ ಈಗಾಗಲೇ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ, ಈ ಸಂದರ್ಭದಲ್ಲಿ ಇದೆಲ್ಲಾ ಬೇಕಿತ್ತಾ ಎಂದಿದ್ದಾರೆ. ಇನ್ನು ಸಚಿವ ಅನಂತ್ ಕುಮಾರ್ ಕೂಡ ಟ್ವಿಟ್ಟರ್ ಮೂಲಕ ಚಾಟಿ ಬೀಸಿದ್ದು, ಸಿಎಂ ಕುಮಾರಸ್ವಾಮಿ ಮಾತ್ರ ಯಾವ ಗಿಫ್ಟ್ ಕೂಡ ಸರ್ಕಾರದ ಪರವಾಗಿ ಕೊಟ್ಟಿಲ್ಲ. ಗಿಫ್ಟ್ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್

ರಾಜ್ಯ ಸರ್ಕಾರ ಸ್ವತಃ ನಾನು ಗಿಫ್ಟ್ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದ್ರೆ ಹೌದು ನಾನು ಸಂಸದರಿಗೆ ಮಾಹಿತಿ ತಿಳಿದುಕೊಳ್ಳಲು ಸಹಾಯವಾಗಲಿ ಅನ್ನೋ ಕಾರಣಕ್ಕೆ ನಾನೇ ಗಿಫ್ಟ್ ಕಳಿಸಿದ್ದು ಎಂದಿರುವ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಬಿಜೆಪಿ ಸಂಸದರ ವರಸೆ ನೋಡಿ ಕಣ್ಣು ಬಾಯಿ ಬಿಡ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ಗೂ ಐ ಫೋನ್ ವಿಷಯ ಗೊತ್ತಾಗಿದ್ದು, ಸರ್ಕಾರದಲ್ಲಿ ಯಾಕಿಷ್ಟು ಗೊಂದಲ? ಕೂಡಲೇ ಎಲ್ಲವನ್ನ ಸರಿಪಡಿಸಿ ಎಂದು ರಾಜ್ಯ ಉಸ್ತುವಾರಿ ಹೊತ್ತಿರುವ ವೇಣು ಗೋಪಾಲ್‌ಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿ ಇಷ್ಟೊಂದು ಗೊಂದಲವೇಕೆ? ಎಂದು ಪ್ರಶ್ನಿಸಿದ್ದು, ರಾಹುಲ್ ಪ್ರಶ್ನೆಗಳಿಂದ ತಬ್ಬಿಬ್ಬಾಗಿರುವ ವೇಣುಗೋಪಾಲ್, ಮಾಹಿತಿ ನೀಡುವಂತೆ ಕೆಪಿಸಿಸಿಗೆ ಸಂದೇಶ ರವಾನಿಸಿದ್ದಾರೆ. ಇದರ ಬೆನ್ನಲ್ಲೆ ಡಿಕೆ ಶಿವಕುಮಾರ್ ಕೂಡ ಬಿಜೆಪಿ ನಾಯಕರ ತಂತ್ರಕ್ಕೆ ಕುಪಿತಗೊಂಡಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವನಾಗಿದ್ದಾಗಲೂ ನಾನು ಗಿಫ್ಟ್ ನೀಡಿದ್ದೇನೆ. ಆಗ ಎಲ್ಲರೂ ವಿರೋಧ ಮಾಡದೆ ಪಡೆದುಕೊಂಡಿದ್ದರು. ಆದ್ರೆ ಈಗ ಹೊಸ ಸರ್ಕಾರ ಬಂದ ಮೇಲೆ‌ ನಾನು ಕೊಟ್ಟಿರುವ ಗಿಫ್ಟ್ ಅನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆಪ್ತರ ಬಳಿ ಹೇಳಿಡಿಕೊಂಡಿದ್ದಾರೆ.

ಬಿಜೆಪಿ ಸಂಸದರಿಗೂ ಇರಿಸು ಮುರುಸು..!

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಕೆಲವು ಬಿಜೆಪಿ ಹಿರಿಯ ಮುಖಂಡರ ವರಸೆಗೆ ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿ‌ ಸಂಸದರೂ ಕೂಡ ಕಂಗಾಲಾಗಿದ್ದಾರೆ. ಲೋಕಸಭೆ ಚುನಾವಣೆಗೆ ನಾವು ಕೋಟಿ ಕೋಟಿ ಖರ್ಚು ಮಾಡುತ್ತೇವೆ. ಐಪೋನ್ ತಗೊಂಡಿದ್ರೆ ಅದನ್ನು ಬಡ ವಿದ್ಯಾರ್ಥಿಗೋ ಅಥವಾ ನಮ್ಮದೇ ಗನ್ ಮ್ಯಾನ್‌ಗೋ ಕೊಡಬಹುದಿತ್ತು.ಅದನ್ನು ಬಿಟ್ಟು ಸಿಎಂಗೆ ಪತ್ರ ಬರೆದು ದೊಡ್ಡ ರಂಪಾಟ ಮಾಡಬೇಕಾಗಿ ಇರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚುನಾವಣೆ ವೆಚ್ಚದ ಮುಂದೆ 50 ಸಾವಿರದ ಐಪೋನ್ ಯಾವ ಲೆಕ್ಕ. ಈಗ ಐಫೋನ್ ತಿರಸ್ಕರಿಸಿ ಸಚಿವರಿಗೆ ಮುಜುಗರ ಉಂಟು ಮಾಡಬಹುದು ಆದರೆ, ನಮ್ಮ ಕೆಲಸಗಳು ಆಗಬೇಕಾದರೆ ಮತ್ತೆ ನಾವು ಅದೇ ಸಚಿವರ ಬಳಿಯೇ ಹೋಗಬೇಕು ಅಂತ ಪಕ್ಷದೊಳಗೆ ಅಸಮಾಧಾನ ಹೊರ ಹಾಕಿದ್ದಾರೆ. ಐಫೋನ್ ಗಿಫ್ಟ್ ವಿವಾದ ಆಗ್ತಿದ್ದ ಹಾಗೆ ಸಂಸದರು ಪಿಎಗಳ ಮೂಲಕ ಕರ್ನಾಟಕ ಭವನದ ಅಧಿಕಾರಿಗಳಿಗೆ ವಾಪಸ್ ಮಾಡಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಸಂಸದರಿಂದ ಗಿಫ್ಟ್ ವಾಪಸ್ ಮಾಡಿದ್ದು ಐವರು ಸಂಸದರು ವಾಪಸ್ ಮಾಡಬೇಕಿದೆ. ವಿಶೇಷ ಅಂದ್ರೆ ಬಾಗಲಕೋಟೆ ಬಿಜೆಪಿ ಸಂಸದ ಪಿ.ಎಸ್ ಗದ್ದಿಗೌಡರ್ ಈಗಾಗಲೇ ಗಿಫ್ಟ್ ಬಂದ ಐಫೋನ್ ಬಳಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹೊಸ ಐಫೋನ್ ಖರೀದಿಸಿ ವಾಪಸ್ ಮಾಡಬೇಕಾದ ಸ್ಥಿತಿ‌ಬಂದಿದೆ.

Leave a Reply