ಮೈತ್ರಿ ಸರಕಾರದ ಮಗ್ಗುಲಮುಳ್ಳಾಗಿರುವ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್?!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಮಗ್ಗಲು ಮುಳ್ಳಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಇವರನ್ನು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್ ಮಾಡುವ ನಿರ್ಧಾರಕ್ಕೆ ಹೈಕಮಾಂಡ್ ಬಂದಂತೆ ಕಾಣುತ್ತಿದ್ದು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಯಲ್ಲಿ ಬೆಳೆದು ಬಂದ ನಾಯಕ. ತೀರಾ ನಾಸ್ತಿಕರೂ ಅಲ್ಲದ ಆಸ್ತಿಕರೂ ಅಲ್ಲದ ಸಿದ್ದರಾಮಯ್ಯ, ಜೆಡಿಎಸ್ ನಲ್ಲಿ ಬೆಳೆದು, ಕಾಂಗ್ರೆಸ್ ಸೇರಿದ ಬಳಿಕ ಮುಖ್ಯಮಂತ್ರಿ ಆಗಿ ಆಡಳಿತ ನೀಡಿ ಜನಮನ್ನಣೆ ಗಳಿಸಿದವರು. ನಾಲ್ಕು ವರ್ಷ ತೂಕಡಿಕೆಯಲ್ಲೇ ಕಾಲ ಕಳೆದರೂ ಎಂದ ಬಿಜೆಪಿಗೆ ಸಿದ್ದರಾಮಯ್ಯ ಕೊನೆ ವರ್ಷದಲ್ಲಿ ನೀರು ಕುಡಿಸಿದ್ದು ಮಾತ್ರ ಸುಳ್ಳಲ್ಲ. ಯಾಕಂದ್ರೆ ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿ ಹೋದ ಕೂಡಲೇ ಲೆಕ್ಕಾ ಚುಕ್ತಾ ಮಾಡ್ತೀನಿ ಅನ್ನೋ ಹಠಕ್ಕೆ ಬಿದ್ದಂತೆ ಅಂಕಿ ಸಂಖ್ಯೆ ಸಮೇತ ಕೇಂದ್ರಕ್ಕೆ ಉತ್ತರ ಕೊಟ್ಟಿದ್ರು. ಮೋದಿ ಅಥವಾ ಅಮಿತ್ ಮಾತಿನ ಭರಾಟೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವ ಸಂಭವ ಇದ್ದಾಗಲೂ ತನ್ನ ವಾಕ್ಚಾತುರ್ಯದಿಂದ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ರು. ಆಗಲೇ ಸಿದ್ದರಾಮಯ್ಯ ರಾಜ್ಯ ರಾಜಕಾರಣ ಬಿಟ್ಟು ದೆಹಲು ರಾಜಕಾರಣಕ್ಕೆ ಹೊರಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ವು. ಯಾಕಂದ್ರೆ ಚುನಾವಣಾ ವೇಳೆಯಲ್ಲೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ‌ ಬರಲಿದೆ ಅನ್ನೋದು ಗೊತ್ತಿದ್ದ ಸತ್ಯ. ಆದ್ರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ್ರೆ ದೇವರ ಗೌಡರ ಜೊತೆ ಸಿದ್ದರಾಮಯ್ಯ ಹೊಂದಾಣಿಕೆ ಕಷ್ಟ. ಹೀಗಾಗಿ ಸಿದ್ದರಾಮಯ್ಯ ಮುಂದಿನ ಸ್ಟಾಪ್ ದೆಹಲಿ ಎಂದು‌ ಜನ ಮಾತನಾಡಿಕೊಳ್ತಿದ್ರು.‌ ಆದ್ರೆ ಚುನಾವಣೆ ಬಳಿಕ ಎಲ್ಲವೂ ಉಲ್ಟಾ ಪಲ್ಟಾ. ಯಾರು ಕುಮಾರಸ್ವಾಮಿ ಅವರಪ್ಪನ ಆಣೆ ಸಿಎಂ ಆಗಲ್ಲ ಎಂದಿದ್ರೋ ಅವರೇ ಕೈ ಕಟ್ಟಿ ನಿಂತು ಮುಖ್ಯಮಂತ್ರಿ ಮಾಡ್ತೀವಿ ಅಂತಾ ಹೇಳಿದ್ರು. ಆದ್ರೀಗ ಅದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಈಗ ಸಿದ್ದರಾಮಯ್ಯಗೆ ರಾಜ್ಯ ರಾಜಕಾರಣದಿಂದ ಅವರಿಗೆ ಕೇಂದ್ರದ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಸಿಕ್ಕಿದೆ. ಕಾಂಗ್ರೆಸ್​ ವರ್ಕಿಂಗ್ ಕಮಿಟಿ ಸದಸ್ಯರಾಗಿ ಮಲ್ಲಿಕಾರ್ಜು ಖರ್ಗೆ ಜೊತೆ ಸಿದ್ದರಾಮಯ್ಯ ಅವರೂ ನೇಮಕವಾಗಿದ್ದಾರೆ. ಒಟ್ಟು 23 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ಕರ್ನಾಟಕದಿಂದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅಖಿಲ ಭಾರತ ಕಾಂಗ್ರೆಸ್​ ನೀತಿ ನಿರೂಪಣೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾದ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಮುಂದೆ ರಾಜ್ಯದ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಬಗ್ಗೆಯೂ ಸಿದ್ದರಾಮಯ್ಯ ಮಹತ್ವದ ನಿರ್ಣಯ ತೆಗೆದುಕೊಳ್ಳಬಹುದಾಗಿದೆ. ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ. ರಾಷ್ಟ್ರಮಟ್ಟದಲ್ಲೂ ಸಿದ್ದರಾಮಯ್ಯ ಮಿಂಚೋಕೆ ಶುರುಮಾಡಿದ್ದಾರೆ.‌

ಸಿದ್ದರಾಮಯ್ಯ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಪಡೆದಿರೋದು ಸಂಭ್ರಮದ ವಿಚಾರ. ಆದ್ರೆ ಈಗಾಗಲೇ ಸಿದ್ದರಾಮಯ್ಯಗೆ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಸಮನ್ವಯ ಸಮಿತಿ ಸ್ಥಾನದಿಂದ ಎತ್ತಂಗಡಿ ಮಾಡೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ.

ಚುನಾವಣೆಗೂ ಮೊದಲಿನಿಂದಲೂ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಎಂಬ ಮಾತು ಇತ್ತು. ಈಗ ಇದು ನಿಜವಾಗಿದೆ. ಸಿದ್ದರಾಮಯ್ಯ ಡಮ್ಮಿ ಅನ್ನೋದೆಲ್ಲ ಸುಳ್ಳು, ಅವರು ಪವರ್​ಫುಲ್ ಆಗಿರೋ ಕಾರಣಕ್ಕೆ ಹೈಕಮಾಂಡ್ ದೆಹಲಿ ರಾಜಕೀಯಕ್ಕೆ ಕರೆಸಿಕೊಂಡಿದೆ. ಬಿಜೆಪಿ ಹಾಗೂ ಮೋದಿ ವಿರುದ್ಧ ಖಡಕ್ಕಾಗಿ ಮಾತಾಡುವ ಸಾಮರ್ಥ್ಯ ಕೂಡಾ ಸಿದ್ದರಾಮಯ್ಯಗಿದೆ. ಇದು ಕೂಡಾ ಸಿದ್ದರಾಮಯ್ಯ ದಿಲ್ಲಿ ರಾಜಕೀಯದ ಮೆಟ್ಟಿಲು ಏರೋಕೆ ಕಾರಣವಾಗಿದೆ ಎಂಬ ಚರ್ಚೆ ಜೋರಾಗಿದೆ.

ಆದ್ರೆ ಸಮನ್ವಯ ಸಮಿತಿ‌ ಅಧ್ಯಕ್ಷರಾಗಿ ಇದ್ದರೂ ಸಿದ್ದರಾಮಯ್ಯ ಕುಮಾರಸ್ವಾಮಿಗೆ ನಿರಂತರ ಪತ್ರ ಬರೆಯುವ ಮೂಲಕ ಅಧಿಕಾರ ನಡೆಸಲು ಆಗದಂತೆ ಸ್ಕೆಚ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ಡಿ.ಕೆ ಶಿವಕುಮಾರ್ ಕೂಡ ಸಮ್ಮಿಶ್ರ ಸರ್ಕಾರ ನಡೆಸುವಾಗ ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತವೆ. ಸಮಸ್ಯೆ ಎದುರಿಸಿ‌ ಕುಮಾರಸ್ವಾಮಿ ಅಧಿಕಾರ ನಡೆಸಲಿದ್ದಾರೆ. ನಿರಂತರವಾಗಿ ಪತ್ರ ಬರೆದು ಒತ್ತಡ ಹಾಕೋದು ತಪ್ಪು ಎಂದಿದ್ದರು. ಮೊನ್ನೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಕಣ್ಣೀರು ಹಾಕಿದ್ರು. ಈ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಇದೇ ವೇಳೆ ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರಿಗೆ ರಾಜ್ಯದಿಂದ ಕೇಂದ್ರಕ್ಕೆ ಮುಂಬಡ್ತಿ ಕೊಟ್ಟು ಸಾಗ ಹಾಕುವ ಕೆಲಸ ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

Leave a Reply