ನಾಳಿನ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ ಪಕ್ಷಗಳಿಗೆ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸಿದ್ದು, ಒತ್ತಡ ಹೇರುವ ಪ್ರಯತ್ನ ಮಾಡಿವೆ. ಆದರೆ… ಈ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ ಪಕ್ಷಗಳಿಗೆ ದೊಡ್ಡ ಸವಾಲಾಗುವುದು ನಿಶ್ಚಿತ!

ಈ ಅವಿಶ್ವಾಸ ನಿರ್ಣಯ ಮಂಡನೆ ನಿಜವಾಗಿ ಯಾರಿಗೆ ಪರೀಕ್ಷೆ ಎಂಬುದನ್ನು ಚರ್ಚಿಸುವ ಮುನ್ನ ಸದ್ಯ ಲೋಕಸಭೆಯಲ್ಲಿ ಇರುವ ಸಂಖ್ಯಾಬಲಗಳತ್ತ ಕಣ್ಣಾಡಿಸೋಣ…

ಒಟ್ಟು ಬಲ: 544
ಪ್ರಸ್ತುತ ಬಲ: 534
ಖಾಲಿ: 10
ಬಹುಮತ: 268

ಎನ್‌ಡಿಎ 312 (ಬಿಜೆಪಿ 273 + ಶಿವಸೇನೆ ಸೇರಿದಂತೆ ಮಿತ್ರ ಪಕ್ಷಗಳು 39)

ತಟಸ್ಥ 73 (ಎಐಎಡಿಎಂಕೆ 36 ಹಾಗೂ ಇತರೆ)

ವಿರೋಧ ಪಕ್ಷಗಳು 147 (ಕಾಂಗ್ರೆಸ್, ಟಿಎಂಸಿ, ಟಿಡಿಪಿ ಹಾಗೂ ಇತರೆ)

ಈ ಅಂಕಿಅಂಶಗಳು ಲೋಕಸಭೆಯಲ್ಲಿ ಎನ್ಡಿಎ ಮೈತ್ರಿ ಕೂಟಕ್ಕೆ ಭಾರಿ ಸಂಖ್ಯಾಬಲವಿರುವುದು ಸ್ಪಷ್ಟವಾಗಿದೆ. ಈ ಮೈತ್ರಿ ಕೂಟದಿಂದ ಟಿಡಿಪಿ ಹೊರ ನಡೆದಿದೆ. ಇತ್ತೀಚೆಗೆ ಟಿಡಿಪಿ ಜತೆ ಶಿವಸೇನೆಯು ಬಿಜೆಪಿ ಜತೆ ಮುನಿಸಿಕೊಂಡಿದ್ದರೂ ಅವಿಶ್ವಾಸ ನಿರ್ಣಯದಲ್ಲಿ ಎನ್ಡಿಎಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

ಒಂದು ವೇಳೆ ಶಿವಸೇನೆ ಬಿಜೆಪಿಗೆ ಕೈ ಕೊಟ್ಟರೂ ಟಿಡಿಪಿ ಹಾಗೂ ಶಿವಸೇನೆಯ ಒಟ್ಟು ಸಂಸದರ ಬಲ 34ಕ್ಕೆ ಬರುತ್ತದೆ. ಆಗ ಎನ್ಡಿಎ ಮೈತ್ರಿಯಲ್ಲಿ 34 ಸಂಸದರ ಸಂಖ್ಯೆ ಕಡಿಮೆಯಾದರೂ ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲ (268) ಉಳಿಯಲಿದೆ. ಇನ್ನು ಬಿಜೆಪಿಗೆ ಹೆಚ್ಚುವರಿಯಾಗಿ ತಟಸ್ಥರ ಗುಂಪಿನಲ್ಲಿರುವ ಎಐಎಡಿಎಂಕೆ(36) ಹಾಗೂ ಇತರೆ ಪಕ್ಷಗಳ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಅವಿಶ್ವಾಸ ನಿರ್ಣಯ ಬಿಜೆಪಿಗಾಗಲಿ ಎನ್ಡಿಎ ಮೈತ್ರಿಕೂಟಕ್ಕಾಗಲಿ ದೊಡ್ಡ ಸವಾಲಾಗಿ ಪರಿಣಮಿಸುವುದಿಲ್ಲ.

ಆದರೆ…

ಈ ಅವಿಶ್ವಾಸ ನಿರ್ಣಯ ವಿರೋಧ ಪಕ್ಷಗಳಿಗೆ ಸವಾಲಾಗಿ ಪರಿಣಮಿಸುವುದು. ಹೇಗೆಂದರೆ ಪ್ರಸ್ತುತ ಸಂದರ್ಭದಲ್ಲಿ ಯಾವೆಲ್ಲಾ ಪಕ್ಷಗಳು ಕಾಂಗ್ರೆಸ್ ಜತೆ ಕೈ ಜೋಡಿಸುತ್ತದೆ ಎಂದು ಈಗ ಸ್ಪಷ್ಟವಾಗಲಿದೆ. ಈ ಅವಿಶ್ವಾಸ ನಿರ್ಣಯ ಮಂಡನೆ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಪರೀಕ್ಷೆಯಾಗಿದೆ. ತೃತೀಯ ರಂಗ ರಚನೆ ಪ್ರಕ್ರಿಯೆ ಜತೆ ಜತೆಗೆ ವಿರೋಧ ಪಕ್ಷಗಳ ಒಗ್ಗಟ್ಟಿನ ಪ್ರಯತ್ನ ಸಾಗುತ್ತಿದ್ದು, ಇನ್ನು ಸ್ಪಷ್ಟ ಚಿತ್ರಣ ಪಡೆಯಲು ಈ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದಲ್ಲಿ ತಮ್ಮ ಒಗ್ಗಟ್ಟಿನ ಸಾಮರ್ಥ್ಯವನ್ನು ಪ್ರದರ್ಶಿಸುವ ಅಗತ್ಯ ಇತ್ತೇ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿ ಹಾಗೂ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಆತುರದಲ್ಲಿ ವಿರೋಧ ಪಕ್ಷಗಳು ತಾವು ತೋಡಿದ್ದ ಗುಂಡಿಯಲ್ಲಿ ಬೀಳುತ್ತದೆಯೇ ಎಂಬುದು ನಾಳೆ ನಡೆಯಲಿರುವ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ವೇಳೆ ತಿಳಿಯಲಿದೆ.

Leave a Reply