ಶೀರೂರು ಸ್ವಾಮೀಜಿಯನ್ನು ಕೊಂದವರು ಯಾರು?

ಡಿಜಿಟಲ್ ಕನ್ನಡ ಟೀಮ್:

ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಲಕ್ಷ್ಮೀವರ ಶ್ರೀಗಳು ಮಣಿಪಾಲ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇತ್ತೀಚೆಗೆ ಪಟ್ಟದ ದೇವರ ವಿಚಾರದಲ್ಲಿ ನನಗೆ ಮೋಸವಾಗಿದೆ ಎಂದು ಆರೋಪ ಮಾಡಿದ್ದ ಲಕ್ಷ್ಮೀವರ ಶ್ರೀಗಳು ಸೋಮವಾರ ಮಾಧ್ಯಮಗಳ ಮುಂದೆ ಮಾತನಾಡಿದ್ದರು. ಶ್ರೀ ಕೃಷ್ಣ ನನ್ನ ಸ್ವತ್ತಲ್ಲ, ರಾಮ ದೇವರೂ ಕೂಡ ನನ್ನ ಸ್ವತ್ತಲ್ಲ, ವಿಠಲ ಮಾತ್ರ ನನ್ನ ಸ್ವತ್ತು. ಒಂದು ವೇಳೆ ಪಟ್ಟದ ದೇವರು ಪಡೆಯಲು ಅವಶ್ಯ ಬಿದ್ದರೆ ಕ್ರಿಮಿನಲ್‌ ಕೇಸು ದಾಖಲಿಸಲು ಸಿದ್ಧ ಎಂದಿದ್ದರು.

‘ನಾವು ಸಾಮಾನ್ಯವಾಗಿ ಪರವೂರಿಗೆ ತೆರಳುವಾಗ ಬಂಗಾರ ಅಥವಾ ಇತರೆ ಯಾವುದೇ ಅಮೂಲ್ಯ ವಸ್ತುಗಳನ್ನು ಪರಿಚಿತರಿಗೆ ನೀಡುವುದು ಸಾಮಾನ್ಯ. ಆದರೆ ವಾಪಸ್ ಬಂದ ಬಳಿಕ ನಮ್ಮ ಸ್ವತ್ತನ್ನು ವಾಪಸ್ ಮಾಡಲು ನಿರಾಕರಿಸಿದರೆ ಅದು ದರೋಡನೆ ತಾನೇ’ ಎಂದು ಪ್ರಶ್ನಿಸಿದ್ದ ಸ್ವಾಮೀಜಿ, ‘ಕೃಷ್ಣಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ನಿರಾಕರಿಸುತ್ತಿರುವುದೂ ಕೂಡ ದರೋಡೆಗೆ ಸಮಾನ’ ಎಂದು ಟೀಕಿಸಿದ್ದರು. ಅಷ್ಟಮಠದ ಏಳು ಸ್ವಾಮೀಜಿಗಳು ಒಂದಾಗಿ ಈಗಾಗಲೆ ಮಠದಲ್ಲಿ ಸಭೆಯನ್ನು ಕರೆದಿದ್ದಾರೆ. ಅದರಲ್ಲಿ ಒಬ್ಬರನ್ನು ಲೀಡರ್‌ ಎಂದು ನೇಮಕ ಮಾಡಲಾಗಿದೆ. ಅವರು ಯಾರೆಂಬುವುದು ಎಲ್ಲರಿಗೂ ಗೊತ್ತಿದೆ ಎನ್ನುವ ಮೂಲಕ ಪ್ರಮುಖ ಶ್ರೀಗಳ ವಿರುದ್ಧ ಪರೋಕ್ಷವಾಗಿ ದಾಳಿ ಮಾಡಿದ್ದರು. ಆ ಬಳಿಕ ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ ಸ್ವಾಮೀಜಿ ಬೆಳಗ್ಗೆ ರಕ್ತವಾಂತಿ ಮಾಡಿ ಆಸ್ಪತ್ರೆ ಸೇರಿದ್ದರು.

ಲಕ್ಷ್ಮೀವರ ಶ್ರೀಗಳು ನಿಧನರಾದ ಬಳಿಕ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಹೇಳಿದ್ದಿಷ್ಟು…

‘ವಿಪರೀತ ರಕ್ತಸ್ರಾವ ಆಗಿತ್ತು, ಇಂದು ಮುಂಜಾನೆ 8:30 ಕ್ಕೆ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ ಎಂದಿದ್ದಾರೆ. ಜೊತೆಗೆ ವಿಷಪ್ರಾಷನ ಮಾಡಿಸಿರುವ ಶಂಕೆಯಿದೆ. ಅಥವಾ ಫುಡ್ ಪಾಯಿಸನ್ ನಿಂದಲೂ ಆಗಿರಲೂಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದು, ಪೋಲಿಸರಿಗೆ ಮಾಹಿತಿ ನೀಡಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಯುತ್ತದೆ.’

ಇನ್ನು ವೈದ್ಯರ ಅನುಮಾನಕ್ಕೆ ಬೆಂಬಲ ಎನ್ನುವಂತೆ ಶೀರೂರು ಸ್ವಾಮೀಜಿಗಳ ವಕೀಲರು ಹೇಳಿಕೆ ನೀಡಿರೋದು ಅನುಮಾನ ದುಪ್ಪಟ್ಟು ಮಾಡುತ್ತಿದೆ. ಈ ಬಗ್ಗೆ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮಾತನಾಡಿದ್ದು, ‘ಪಟ್ಟದ ದೇವರನ್ನು ವಾಪಸ್ ಪಡೆಯುವ ವಿಚಾರದ ವೈಮನಸ್ಸು ಮೂಡಿತ್ತು. ಈ ವೇಳೆ ನನ್ನ ಜೀವಕ್ಕೆ ಅಪಾಯ ಇದೆ ಅಂತಾ ಸ್ವಾಮೀಜಿ ನನ್ನ ಬಳಿ ಹೇಳಿಕೊಂಡಿದ್ದರು. ಅಷ್ಟಮಠದಲ್ಲಿ ಪುತ್ತಿಗೆ ಸ್ವಾಮೀಜಿಯನ್ನು ಹೊರತುಪಡಿಸಿ ಉಳಿದ 6 ಸ್ವಾಮೀಜಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು. ಕ್ರಿಮಿನಲ್ ಪ್ರಕರಣ ದಾಖಲಿಸಲು ರೆಡಿಮಾಡಿಕೊಂಡಿದ್ದೆ. ಶೀರೂರು ಶ್ರೀಗಳಿಗಳು ತನಗೆ ಇರುವ ಅಪಾಯದ ಮುನ್ಸೂನೆ ಕುರಿತು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಶೀರೂರು ಶ್ರೀಗಳ ಸಾವಿನ ಬಗ್ಗೆ ತನಿಖೆ ಯಾಗಬೇಕು, ಶವ ಪರೀಕ್ಷೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ ಸ್ವಾಮೀಜಿ ಸಾವು ಸಹಜವಲ್ಲ ಅನ್ನೋ ಅನುಮಾನ ದಟ್ಟವಾಗಿದೆ. ಪೊಲೀಸರು ಕೊಂದವರು ಯಾರು ಅನ್ನೋದನ್ನು ಪತ್ತೆ ಮಾಡಬೇಕಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಉಡುಪಿಯ ಶೀರೂರು ಮಠದ ಶ್ರೀಗಳ ಲಕ್ಷ್ಮೀವರ ತೀರ್ಥ ಸ್ವಾಮಿಜಿ ನಿಧನದ ಬಗ್ಗೆ ಹಲವು ಅನುಮಾನಗಳು, ಕಾರಣಗಳು ಕೇಳಿ ಬರುತ್ತಿದೆ ಈ‌ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದಿದ್ದಾರೆ.

Leave a Reply