ಮೊದಲು ಟೀಕೆ ನಂತರ ಅಪ್ಪುಗೆ! ಲೋಕಸಭೆಯಲ್ಲಿ ರಾಹುಲ್ ತಂತ್ರ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಇಂದು ನಡೆದ ಚರ್ಚೆ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ಲೋಕಸಭೆಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಭಾಷಣ ಮುಗಿಯುತ್ತಿದ್ದಂತೆ ರಾಹುಲ್ ಗಾಂಧಿ ತಮ್ಮ ಜಾಗದಿಂದ ಹೊರಬಂದು ಪ್ರಧಾನಿ ನರೇಂದ್ರ ಮೋದಿಯವರ ಬಳಿಗೆ ಆಗಮಿಸಿ ಅವರನ್ನು ಅಪ್ಪಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ನಂತರ ತಮ್ಮ ಕುರ್ಚಿಗೆ ಮರಳಿದ ರಾಹುಲ್, ತಮ್ಮ ಪಕ್ಷದ ನಾಯಕರಿಗೆ ಕಣ್ಸನ್ನೆ ಮಾಡಿ ಮುಗುಳ್ನಗೆ ಬೀರಿದರು.

ಇದಕ್ಕೂ ಮುನ್ನ ಮಾತನಾಡಿದ ರಾಹುಲ್ ಹೇಳಿದ್ದಿಷ್ಟು…

‘ಮೋದಿ ಅವರ ಮನದಲ್ಲಿ ಬಡವರ ಬಗ್ಗೆ ಒಂದು ಚೂರು ಕನಿಕರವಿಲ್ಲ. ನೋಟು ಅಮಾನ್ಯ ನಿರ್ಧಾರದಿಂದ ಬಡವರ ಮೇಲೆ ಬರೆ ಎಳೆದಿದೆ. ಮೋದಿ ಅವರು ದೇಶ ಕಾಯುವುದಾಗಿ ಹೇಳಿಕೊಳ್ಳುತ್ತಾರೆ. ಸಣ್ಣ ಉದ್ದಿಮೆಗಳಿಗೆ ಬೆಂಬಲಿಸುವುದಾಗಿ ತಿಳಿಸುತ್ತಾರೆ. ಆದರೆ ಅವರು ದೊಡ್ಡ ಉದ್ಯಮಿಗಳ ಪರವಾಗಿರುವುದು ಎಲ್ಲರಿಗೂ ತಿಳಿದಿದೆ. ಮೋದಿ ಅವರು ಮೇಲ್ನೋಟಕ್ಕೆ ನಗುಮುಖವನ್ನು ವ್ಯಕ್ತಪಡಿಸಿದರೂ ಆಂತರಿಕವಾಗಿ ಅವರ ಮನದಲ್ಲಿ ನನ್ನನ್ನು ನೋಡಿದರೆ ಭಯವಿದೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಅವರಿಗೆ ಸಾಧ್ಯವಾಗುವುದಿಲ್ಲ.

ರಾಫೆಲ್ ಡೀಲ್ ನಲ್ಲಿ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಈ ವಿಚಾರದಲ್ಲಿ ನಿರ್ಮಲಾ ಸೀತರಾಮನ್ ಅವರು ಸುಳ್ಳು ಹೇಳಿದ್ದಾರೆ. ಚೀನಾದಲ್ಲಿ 24 ಗಂಟೆಯಲ್ಲಿ 50 ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ. ಆದರೆ ಭಾರತದಲ್ಲಿ 400 ಮಂದಿಗೆ ಉದ್ಯೋಗ ಸಿಗುವುದು ದೊಡ್ಡ ವಿಚಾರ. ಚೀನಾಕ್ಕೆ ಹೋಗುವ ಪ್ರಧಾನಿ ಯಾವುದೇ ಅಜೆoಡಾ ಇಲ್ಲ ಎನ್ನುತ್ತಾರೆ. ಆದರೆ ಚೀನಾ ಅಧ್ಯಕ್ಷರ ಕಿವಿಯಲ್ಲಿ ದೊಕ್ಲಾಲಾಂ ವಿಚಾರ ಮಾತನಾಡುವುದಿಲ್ಲ ಎಂದು ಹೇಳುತ್ತಾರೆ.

ಬಿಜೆಪಿ ಸಚಿವರು ಸಂವಿಧಾನ ಬಡಳಿಸುತ್ತೇನೆ ಎಂದರೆ ಅದು ಅಂಬೇಡ್ಕರ್ ವಿರುದ್ಧ ಹಾಗೂ ದೇಶದ ವಿರುದ್ಧ ದಾಳಿ ಮಾಡಿದ ಹಾಗೆ. ನಿಜವಾದ ಹಿಂದುಗಳು ಯಾರು, ಶಿವ ಭಕ್ತಿ ಎಂದರೆ ಏನು ಎಂಬುದನ್ನು ನನಗೆ ಕಲಿಸಿದ್ದೀರಿ. ಅದಕ್ಕಾಗಿ ನಾನು ನಿಮಗೆ ಋಣಿಯಾಗಿರುತ್ತೇನೆ.

ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಭಿನ್ನ ರಾಜಕಾರಣಿಗಳು. ಅಧಿಕಾರವಿಲ್ಲದೆ ನಾನು ಬದುಕಬಲ್ಲೆ. ಆದರೆ ಮೋದಿ ಹಾಗೂ ಅಮಿತ್ ಶಾ ಅಧಿಕಾರವಿಲ್ಲದೇ ಇರಲು ಸಾಧ್ಯವಿಲ್ಲ. ನೀವು ನನ್ನನ್ನು ಪಪ್ಪು ಎಂದೇ ಕರಿಯಿರಿ. ನನ್ನನ್ನು ನಿಂದಿಸಿ. ನಿಮ್ಮ ಮನದಲ್ಲಿ ನನ್ನ ಬಗ್ಗೆ ಕೋಪವಿದೆ ಎಂದು ಗೊತ್ತು. ಆದರೆ ನಿಮ್ಮ ಬಗ್ಗೆ ನನಗೆ ಯಾವುದೇ ಕೋಪವಿಲ್ಲ. ಆದರೆ ಕಾಂಗ್ರೆಸ್ ಪಕ್ಷ ದೇಶವನ್ನು ಕಟ್ಟಿದೆ ಎಂಬುದನ್ನು ಮರೆಯಬೇಡಿ. ನಿಮ್ಮ ಮನದಲ್ಲೂ ಇದೆ ಭಾವನೆ ಇದೆ. ಅದನ್ನು ನಾನು ಹೊರ ತರುತ್ತೇನೆ.’

Leave a Reply