ಪ್ರಧಾನಿ ಮೋದಿ ವಿಶ್ವಾಸ ಗೆಲ್ತಾರೆ, ಆದರೆ..?!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚುನಾವಣಾ ವರ್ಷದಲ್ಲಿ ಅವಿಶ್ವಾಸಕ್ಕೆ ಗುರಿಯಾಗಿದೆ. ಮಾನ್ಸೂನ್ ಅಧಿವೇಶನ ಆರಂಭದ ದಿನವೇ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇಂದು ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಸಂಜೆ ವಿಶ್ವಾಸ ಮತ ಯಾಚನೆ ಆಗಲಿದೆ. ಮೋದಿ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದು, ಬಹುಮತಕ್ಕೆ ಅಗತ್ಯ ಇರುವಷ್ಟು ಸದಸ್ಯರ ಸಂಖ್ಯಾಬಲ ಭಾರತೀಯ ಜನತಾ ಪಾರ್ಟಿಗೆ ಇದೆ. ಆದರೂ ಅದು ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದು, ಮತದಾನದ ವೇಳೆ ಎಲ್ಲರೂ ಹಾಜರಿ ಇರಬೇಕೆಂದು ತಾಕೀತು ಮಾಡಿದೆ. ಈಗ ಉದ್ಬವ ಆಗಿರುವ ಪ್ರಶ್ನೆ ಅಂದ್ರೆ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಇದ್ದ ಮೇಲೆ‌ ವಿಪ್ ಜಾರಿ ಮಾಡುವ ಅವಶ್ಯಕತೆ ಏನಿತ್ತು. ಒಂದಿಬ್ಬರು ಬಂದಿಲ್ಲದಿದ್ದರೂ ಎನ್‌ಡಿಎ ಮಿತ್ರಪಕ್ಷಗಳ ನೆರವಿನಿಂದ ವಿಶ್ವಾಸ ಮತ ಗೆಲ್ಲಬಹುದಿತ್ತಲ್ಲ ಅನ್ನೋ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಪ್ರಧಾನಿ ನರೇಂದ್ರ ಮೋದಿ.

ಮೋದಿ ನೇತೃತ್ವದಲ್ಲಿ ಅಧಿಕಾರ ಹಿಡಿದ ಬಳಿಕ ಬಿಜೆಪಿಯಲ್ಲಿ ಭಾರೀ ಬೆಳವಣಿಗೆಗಳು ನಡೆದಿವೆ. ಅವರ ಆಡಳಿತ ಶೈಲಿಯನ್ನು ಬೆಂಬಲಿಸುವ ಜನರಷ್ಟೇ ಪ್ರಮಾಣದಲ್ಲಿ ವಿರೋಧಿಸುವವರೂ ಇದ್ದಾರೆ. ಅದೇ ರೀತಿ ಪಕ್ಷದ ಒಳಗೂ ಮೋದಿ ಆಡಳಿತ ವೈಖರಿ ವಿರೋಧಿಸುವ ಸಂಸದರಿದ್ದಾರೆ. ಅದ್ರಲ್ಲಿ ಶತೃಘ್ನ ಸಿನ್ಹಾ, ಕೀರ್ತಿ ಆಜಾದ್ ಅವರಂಥ ಐದಾರು ಮಂದಿ ಮೋದಿ ಆಡಳಿತಕ್ಕೆ ಸೆಡ್ಡು ಹೊಡೆದು, ಮೋದಿ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಮಹಾರಾಷ್ಟ್ರ ಮೂಲದ ಸಂಸದರಾಗಿದ್ದ ನಾನಾ ಪಾಟೋಳೆ, ‘ರೈತರ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಎದ್ದು ನಿಂತ್ರೆ ನಮ್ನ ಮಾತನ್ನೇ ಕೇಳಿಸಿಕೊಳ್ಳೋದಿಲ್ಲ. ಮೋದಿ ಸಂಸದರ ಮಾತನ್ನೇ ಕೇಳುವುದಿಲ್ಲ, ಇನ್ನು ಬಡವರ ಮಾತನ್ನು ಎಲ್ಲಿ ಕೇಳಿಸಿಕೊಳ್ತಾರೆ’ ಎಂದು ಮೋದಿ ಸಭೆಯಿಂದ ಎದ್ದು ಬಂದು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೇ ರೀತಿ ಮೋದಿಯನ್ನು ಬಹಿರಂಗವಾಗಿ ಎದುರಿಸಲು ಸಾಧ್ಯವಾಗದಿದ್ದರೂ ಒಳಗೊಳಗೇ ಕುದಿಯುತ್ತಿರುವ ಅದೆಷ್ಟೋ ಮಂದಿ ಸಂಸದರು ಬಿಜೆಪಿಯಲ್ಲಿದ್ದಾರೆ. ಈ ರೀತಿ ಅಸಮಾಧಾನ ಹೊಂದಿರುವ ಸಂಸದರು, ಚುನಾವಣಾ ವರ್ಷದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆದರೂ ಪರವಾಗಿಲ್ಲ ಎಂದು ವಿರೋಧ ಪಕ್ಷಗಳ ಪರವಾಗಿ ಮತ ಚಲಾಯಿಸಿದರೆ ಏನು ಗತಿ’ ಎಂಬ ಮುನ್ನೆಚ್ಚರಿಕೆ ವಿಪ್ ಜಾರಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸುತ್ತೇವೆ ಅನ್ನೋ ಭ್ರಮೆ ವಿರೋಧ ಪಕ್ಷಗಳಿಗೂ ಇಲ್ಲ. ಆದರೆ ಚುನಾವಣಾ ವರ್ಷದಲ್ಲಿ ಮೋದಿ ಹಾಗೂ ಬಿಜೆಪಿಯ ಆತ್ಮವಿಶ್ವಾಸವನ್ನು ಕಡಿಮೆ ಮಾಡುವುದು. ಜೊತೆಗೆ ವಿರೋಧ ಪಕ್ಷಗಳನ್ನು ನಿರ್ಣಯದ ಪರವಾಗಿ ಒಗ್ಗೂಡಿಸುವುದು ಕಾಂಗ್ರೆಸ್ ತಂತ್ರವಾಗಿದೆ. ಆದರೆ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಟಿಡಿಪಿ ಅನ್ನೋ ಕಾರಣಕ್ಕೆ ಟಿಆರ್‌ಎಸ್ ಪಕ್ಷ ತಟಸ್ಥ ನಿಲುವು ಪ್ರದರ್ಶನ ಮಾಡಲು ಮುಂದಾಗಿದೆ. ಬಿಜೆಡಿ ಈಗಾಗಲೇ ಸಭಾತ್ಯಾಗವನ್ನೂ ಮಾಡಿದೆ.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಅಂದೂ ಕೂಡ ನಿಲುವಳಿಗೆ ಸೋಲಾಗಿತ್ತು. ಆದರೆ ಸರ್ಕಾರದ ವೈಫಲ್ಯಗಳನ್ನು ಯಶಸ್ವಿಯಾಗಿ ಸಂಸತ್‌ನಲ್ಲಿ ಮಂಡಿಸುವ ಮೂಲಕ ದೇಶದ ಗಮನ ಸೆಳೆಯುವಲ್ಲಿ ಸಫಲವಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ NDAಗೆ ಸೋಲಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಿತ್ತು. ಇದೇ ಉದಾಹರಣೆ ಮೇಲೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿವೆ. ಇಂದು ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ದೇಶದ ಜನರ ಮುಂದಿಡಲು ಅವಕಾಶ ಸಿಕ್ಕಿದೆ. ಎಲ್ಲಾ ಪಕ್ಷಗಳೂ ಈ ಅವಕಾಶ ಬಳಸಿಕೊಳ್ಳುತ್ತಿವೆ.

Leave a Reply