ಟಿಡಿಪಿ ಸಿದ್ಧಪಡಿಸಿದ್ದ ಅಖಾಡದಲ್ಲಿ ಮೋದಿಯ ಟಾರ್ಗೆಟ್ ಆಗಿದ್ದು ಕೇವಲ ಕಾಂಗ್ರೆಸ್ ಮಾತ್ರ!

ಡಿಜಿಟಲ್ ಕನ್ನಡ ಟೀಮ್:

ಇದೇ ಮೊದಲ ಭಾರಿಗೆ ದೇಶದ ಲೋಕಸಭೆ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ಇಬ್ಬರು ನಾಯಕರ ನಡುವಣ ಪ್ರತಿಷ್ಠೆಯ ಸಮರವಾಗಿ ಪರಿವರ್ತನೆಯಾಗಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡಿಲ್ಲ ಎಂಬ ಕಾರಣದಿಂದ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಆಗ್ರಹಿಸಿದ್ದು ತೆಲುಗು ದೇಶಂ ಪಕ್ಷ. ಆದರೆ ಶುಕ್ರವಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರವೊಂದು ಬಿಟ್ಟು, ಉಳಿದಂತೆ ನಡೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ವಾಕ್ಸಮರ.

ಪ್ರದೇಶಿಕ ಸಮಸ್ಯೆಯಾದ ಆಂಧ್ರ ಪ್ರದೇಶದ ಬಗ್ಗೆ ಹೆಚ್ಚಿನ ಚರ್ಚೆಯಾಗಲಿಲ್ಲ. ರಾಹುಲ್ ಮೋದಿ ಅವರ ಕೋಪವನ್ನು ಟೀಕಿಸಿದರೆ, ಮೋದಿ ರಾಹುಲ್ ಗಾಂಧಿಯ ಅಹಂಕಾರವನ್ನು ಟೀಕಿಸಲು ಈ ವೇದಿಕೆ ಬಳಕೆಯಾಯಿತು. ಹೀಗಾಗಿ ಟಿಡಿಪಿ ಸಿದ್ಧಪಡಿಸಿದ ಅಖಾಡದಲ್ಲಿ ಮೋದಿ ವರ್ಸಸ್ ರಾಹುಲ್ ನಡುವಣ ಸಮರ ಸಾಗಿತು. ಈ ಸಮರದಲ್ಲಿ ನಿರೀಕ್ಷೆಯಂತೆ ಗೆದ್ದಿದ್ದು, ಮೋದಿಯೇ. ಆದರೆ ಈ ಅವಿಶ್ವಾಸ ನಿರ್ಣಯದಿಂದ ದೇಶದ ಜನರಿಗೆ ನಯಾ ಪೈಸೆಯಷ್ಟು ಲಾಭವಾಯಿತೇ ಎಂಬ ಪ್ರಶ್ನೆಗೆ ನಮ್ಮಲ್ಲಿ ಸಿಗುವು ಉತ್ತರ ಇಲ್ಲ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಟಿಡಿಪಿಯ ಅಸಮಾಧಾನವನ್ನು ಬಳಸಿಕೊಂಡ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಅವಿಶ್ವಾ ನಿರ್ಣಯ ಮಂಡನೆಗೆ ಪರೋಕ್ಷವಾಗಿ ಉತ್ತೇಜಿಸಿದರು. ಆ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರು. ಆದರೆ ಈ ಅವಕಾಶವನ್ನು ಬಯಸದೇ ಬಂದ ಭಾಗ್ಯವೆಂಬತೆ ಮೋದಿ ಎರಡೂ ಕೈಗಳಿಂದ ಬಾಚಿಕೊಂಡು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮೋದಿ ಅವರ ಸಂಪೂರ್ಣ ಭಾಷಣವನ್ನು ಕೇಳಿದರೆ, ಅವರ ಪ್ರತಿಯೊಂದು ಮಾತುಗಳು ನೇರವಾಗಿ ಕಾಂಗ್ರೆಸ್ ಅನ್ನು ನಾಟಿದವು. ತಮ್ಮ ಸರ್ಕಾರದ ವಿರುದ್ಧ ಟಿಡಿಪಿ ಅವವಿಶ್ವಾಸದ ನಿರ್ಣಯ ಘೋಷಿಸಿದರೂ ಟಿಡಿಪಿ ವಿರುದ್ಧ ದಾಳಿ ಮಾಡಲು ಮೋದಿ ಮುಂದಾಗಲಿಲ್ಲ. ಜತೆಗೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರ ಪ್ರಸ್ತಾಪಿಸಲಿಲ್ಲ. ಆಂಧ್ರ ಪ್ರದೇಶಕ್ಕೆ ಅಗತ್ಯ ನೆರವು ನೀಡುವ ಭರವಸೆ ನೀಡಿ ಕೈ ತೊಳದುಕೊಂಡರು. ಉಳಿದಂತೆ ಮೋದಿ ಗುರಿ ಇದ್ದದ್ದು, ತಮ್ಮ ಎದುರು ಕೂತಿದ್ದ ಕಾಂಗ್ರೆಸ್ ನಾಯಕರ ಮೇಲೆ.

ಕಾಂಗ್ರೆಸ್ ನಾಯಕರು ಮಾಡಿದ ಒಂದೊಂದು ಟೀಕೆಯನ್ನೇ ಆಧಾರವಾಗಿಟ್ಟುಕೊಂಡು ವಾಗ್ದಾಳಿ ಮಾಡಿದ ಮೋದಿ ಕಾಂಗ್ರೆಸ್ ಅನ್ನು ಹಿಗ್ಗಾಮುಗ್ಗ ಟೀಕಿಸಿದರು. ಮೋದಿ ಅವರ ಭಾಷಣದಲ್ಲಿ ಕೇವಲ ಕಾಂಗ್ರೆಸ್ ನಾಯಕರ ಹೆಸರು ಬರಲಿಲ್ಲ. ಅವರ ಬಾಯಲ್ಲಿ ಶರದ್ ಪವಾರ್, ದೇವೇಗೌಡ, ಮುಲಾಯಂ ಸಿಂಗ್ ಸೇರಿದಂತೆ ಇತರೆ ನಾಯಕರ ಹೆಸರು ಪ್ರಸ್ತಾಪವಾಯಿತು. ಈ ನಾಯಕರ ವಿರುದ್ಧ ಮಾತನಾಡದ ಮೋದಿ ಇವರು ಕಾಂಗ್ರೆಸ್ ನಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತರು ಎಂದು ಹೇಳುವ ಮೂಲಕ ಈ ನಾಯಕರನ್ನು ಪರೋಕ್ಷವಾಗಿ ಓಲೈಸಿದರು. ಅದರೊಂದಿಗೆ ಮುಂದಿನ ಚುನಾವಣೆಯಲ್ಲಿ ಒಂದಾಗಲು ಸಜ್ಜಾಗುತ್ತಿರುವ ವಿರೋಧ ಪಕ್ಷಗಳ ಒಗ್ಗಟ್ಟನ್ನು ತಮ್ಮ ಮಾತಿನ ಮೂಲಕವೇ ಒಡೆದರು. ಅದರೊಂದಿಗೆ ಕಾಂಗ್ರೆಸ್ ಅನ್ನು ವಿರೋಧ ಪಕ್ಷಗಳ ಸಾಲಿನಲ್ಲೂ ಏಕಾಂಗಿಯನ್ನಾಗಿ ಮಾಡಲು ಮೋದಿ ಯತ್ನಿಸಿದ್ದು ಸ್ಪಷ್ಟವಾಗಿ ಗೋಚರಿಸಿತು.

Leave a Reply