ವಿರೋಧ ಪಕ್ಷಗಳ ಟೀಕೆಗಳನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ಮಾತುಗಾರ ಮೋದಿ!

ಡಿಜಿಟಲ್ ಕನ್ನಡ ಟೀಮ್:

ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ. ಅಅದರೊಂದಿಗೆ ಮೇದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ.

ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡಿದ ಟೀಕಾ ಪ್ರಹಾರಗಳನ್ನು ಒಂದೊಂದಾಗೆ ಸ್ವೀಕರಿಸಿದ ಪ್ರಧಾನಿ ಮೋದಿ ಅವುಗಳನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ ಕಾರ್ಯಗಳನ್ನು ಬಿಚ್ಚಿಟ್ಟರು. ಬೆಳಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರೈತರ ಸಮಸ್ಯೆ, ನಿರುದ್ಯೋಗ, ಜಿಎಸ್ಟಿ, ನೋಟು ಅಮಾನ್ಯ, ಚೀನಾ ಪ್ರವಾಸದಿಂದ ದೊಕ್ಲಾಲಂವರೆಗೆ ವಿಚಾರ ಪ್ರಸ್ತಾಪ ಮಾಡಿದರು. ಈ ಎಲ್ಲ ವಿಚಾರಗಳಿಗೂ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ರಾಹುಲ್ ಗಾಂಧಿ ಅವರ ಒಂದೊಂದು ಟೀಕೆಗೆ ಮೋದಿ ನೀಡಿದ ತಿರುಗೇಟು ಹೀಗಿತ್ತು…

  • ಜುಮ್ಲಾ ಸ್ಟ್ರೈಕ್: ನಮ್ಮ ದೇಶದ ಸೈನಿಕರು ಪ್ರಾಣವನ್ನು ಒತ್ತೆ ಇಟ್ಟು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ನೀವು ಜುಮ್ಲಾ ಸ್ಟ್ರೈಕ್ ಎಂದು ಲೇವಡಿ ಮಾಡುತ್ತೀರಾ? ನಿಮ್ಮ ನಿಂದನೆಗಳೇನೇ ಇದ್ದರು ಅದನ್ನು ನನ್ನ ಮೇಲೆ ಪ್ರಯೋಗಿಸಿ. ಅದನ್ನು ನಾನು ಸ್ವೀಕರಿಸುತ್ತೇನೆ. ಆದರೆ ಹಗಲಿರುಳು ತಮ್ಮ ಜೀವನ ತ್ಯಾಗ ಮಾಡಿ ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕನನ್ನು ಅಪಮಾನಿಸಿದರೆ ನಾನು ಸಹಿಸಲಾರೆ. ಇಡೀ ದೇಶ ನಿಮ್ಮನ್ನು ಕ್ಷಮಿಸುವುದಿಲ್ಲ.
  • ಚೋಕಿದಾರ್ ನಹಿ ಭಾಗಿದಾರ್: ಹೌದು, ನಾನು ಚೌಕಿದಾರ್ ಅಲ್ಲ ಭಾಗಿದಾರ್. ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು ಬಡವರ ಸಂಕಷ್ಟಗಳಲ್ಲಿ ಭಾಗಿದಾರನಾಗಿದ್ದೇನೆ.
  • ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಭಯ: ಇಲ್ಲಿ ಕೆಲವರು ಕಣ್ಣಲ್ಲಿ ಕಣ್ಣಿಟ್ಟು ನೋಡುವ ವಿಚಾರವಾಗಿ ಮಾತನಾಡುತ್ತಾರೆ. ನಿಮ್ಮ ಕಣ್ಣಲ್ಲಿ ಕಣ್ಣಿಟು ನೋಡಲು ನಾನು ಯಾರು? ಸಾಮಾನ್ಯ ಮಹಿಳೆಯ ಮಗ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಪ್ರಯತ್ನಿಸಿದವರ ಸ್ಥಿತಿ ಏನಾಗಿದೆ? ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಪ್ರಯತ್ನಿಸಿದ ಸರ್ದಾರ್ ವಲ್ಲಭಾಯ್ ಪಟೇಲರು ಏನಾದರು, ಚಂದ್ರಶೇಖರ್ ಅವರು ಏನಾದರು? ಪ್ರಣಬ್ ಮುಖರ್ಜಿ ಏನಾದರು? ಶರದ್ ಪವಾರ್ ಏನಾದರೂ? ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಪ್ರಯತ್ನಿಸಿದವರು ಯಾವ ಸ್ಥಿತಿಗೆ ತಲುಪಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
  • ಉದ್ಯೋಗ ಸೃಷ್ಠಿ: ಈ ಹಿಂದೆ ಯುವಕರ ಕೈಯಲ್ಲಿ ಡಿಗ್ರಿ ಸರ್ಟಿಫಿಕೆಟ್‌ಗಳು ಮಾತ್ರ ಇದ್ದವು. ಆದರೆ ಈಗ ಮುದ್ರಾ ಯೋಜನೆಯಡಿ ಯುವಕರಿಗೆ ಉದ್ಯೋಗವಕಾಶಗಳನ್ನೂ ಕೂಡ ಕಲ್ಪಿಸಿ ಅವರನ್ನು ಉದ್ಯೋಗಿಗಳನ್ನಾಗಿ ಮಾಡಿದ್ದೇವೆ. ನಾವು ಯುವಕರು ಸ್ವಂತ ಉದ್ಯೋಗ ಸೃಷ್ಟಿಸಿಕೊಂಡು ಬೇರೆಯವರಿಗೂ ಉದ್ಯೋಗ ನೀಡುವಂತೆ ಮಾಡಿದ್ದೇವೆ.
  • ದೋಕಲಂ ವಿಚಾರ: ಇಲ್ಲಿ ಜನ ದೋಕಲಂ ವಿಚಾರವಾಗಿ ಮಾತನಾಡಿದರು. ದೋಕಲಂ ವಿಚಾರವಾಗಿ ಎರಡು ದೇಶಗಳ ಸರ್ಕಾರಗಳು ಒಂದು ನಿರ್ಣಯಕ್ಕೆ ಬಂದಿವೆ. ಆ ನಿರ್ಣಯದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಮಾಹಿತಿ ಇಲ್ಲದಿದ್ದರೆ ಮಾತನಾಡಬಾರದು.
  • ರೈತರ ಸಮಸ್ಯೆ: ರೈತರ ಪರಿಸ್ಥಿತಿ ಸುಧಾರಿಸಲು ಭಿಮ್ ಫಸಲ್ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್, ಬೆಂಬಲ ಬೆಲೆ .ಜನೆ ಜತೆಗೆ ರಸಗೊಬ್ಬರ ಪೂರೈಕೆ, ಉತ್ತಮ ಗುಣಮಟ್ಟದ ಬಿತ್ತನೆ ಬೀಜ ನೀಡುತ್ತಿದ್ದೇವೆ..2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸುವತ್ತ ನಾವು ಪ್ರಯತ್ನಿಸುತ್ತಿದ್ದೇವೆ.
  • ನೋಟು ಅಮಾನ್ಯ ಮತ್ತು ಕಪ್ಪುಹಣ: ನೋಟು ಅಮಾನ್ಯದ ನಿರ್ಧಾರದ ಮೂಲಕ ಕಕಪ್ಪು ಹಣದ ವಿರುದ್ಧ ನಮ್ಮ ಸರ್ಕಾರ ಹೋರಾಟ  ನಡೆಸಿದೆ. ಇನ್ನು 20 ವರ್ಷಗಳಿಂದ ಸಂಸತ್ತಿನಲ್ಲಿ ಧೂಳು ಹಿಡಿದಿದ್ದ ಬೇನಾಮಿ ಆಸ್ತಿ ಮಸೂದೆ ಜಾರಿಗೆ ತಂದಿದ್ದೇವೆ. ಈ ಕಾಯಿದೆ ಜಾರಿಗೆ ತಂದ ಮೇಲೆ 4500 ಕೋಟಿ ರು. ನಷ್ಟು ಬೇನಾಮಿ ಆಸ್ತಿಗಳನ್ನು ವಶಪಡಿಸಿಕೊಂಡಿದ್ದೇವೆ.
  • ವಿರೋಧ ಪಕ್ಷದವರಿಗೆ ಸರ್ಕಾರದಲ್ಲಿ ಮಾತ್ರವಲ್ಲ, ಜಿಎಸ್‌ಟಿ, ಆರ್‌ಬಿಐ, ಇವಿಎಂ, ಸಿಜೆಐ, ಸ್ವಚ್ಛ ಭಾರತ, ಚುನಾವಣಾ ಆಯೋಗ ಸೇರಿದಂತೆ ಯಾವುದರಲ್ಲೂ ವಿಶ್ವಾಸ ಇಲ್ಲ. ಅವರ ಖುದ್ದು ಅವರ ಮೇಲೆ ಅವರಿಗೆ ವಿಶ್ವಾಸ ಇಲ್ಲ.

Leave a Reply