ಬಿಜೆಪಿ ಹುತ್ತದಲ್ಲಿ ಕಾಂಗ್ರೆಸ್-ಜೆಡಿಎಸ್ ಹೆಡೆಯಾಡುವುದೇ?

 ಭೂಕಂಪದ ನಂತರ ಒಂದಷ್ಟು ಮರಿಕಂಪನಗಳು ದಾಖಲಾಗುವಂತೆ, ತಿಳಿಗೊಳದಲ್ಲಿ ಕಲ್ಲು ಬಿದ್ದ ಜಾಗದಲ್ಲೆದ್ದ ನೀರ್ಗುಳಿ ಒಂದಷ್ಟು ತೆರೆಗಳನ್ನು ಒಂದರ ಹಿಂದೊಂದರಂತೆ ಅನತಿ ದೂರದವರೆಗೂ ರವಾನಿಸುವಂತೆ ಕರ್ನಾಟಕ ವಿಧಾನಸಭೆ ಚುನಾವಣೆ ನಂತರದ ಕಂಪನಗಳು ಇನ್ನೂ ನಿಂತಿಲ್ಲ. ಸೂಕ್ತ ಹತ್ಯಾರಗಳಿಲ್ಲದೆ ರಣಾಂಗಣಕ್ಕೆ ಧುಮುಕಿ, ಬಿಜೆಪಿ ಬೋರಲು ಬಿದ್ದ ಪರಿಣಾಮ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ದಕ್ಕಿದ ಆಳ್ವಿಕೆ ಹಳಿ ಮೇಲೆ ಬಂದು ನಿಲ್ಲಲು ಸತಾಯಿಸುತ್ತಿದೆ. ಮೈತ್ರಿ ಸರಕಾರದ ಹಣೆಬರಹವಾಗಿಯೇ ಪರಿಣಮಿಸಿರುವ ಅನಪೇಕ್ಷಿತ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಒಂದು ಮುಗಿಯಿತು ಅನ್ನುವಷ್ಟೊತ್ತಿಗೆ ಮತ್ತೊಂದು ಹೆಡೆಬಿಚ್ಚಿ ನಿಂತಿರುತ್ತದೆ. ಅದನ್ನು ಬುಟ್ಟಿಗೆ ಹಾಕುವಷ್ಟೊತ್ತಿಗೆ ಮತ್ತೊಂದು ಹುತ್ತ ಬಿಟ್ಟಿಳಿದಿರುತ್ತದೆ. ಹಾವು ಮತ್ತು ಹಾವಾಡಿಗರ ನಡುವಣ ಸೆಣಸಾಟ ಮುಂದುವರೆದಿರುವುದರ ನಡುವೆಯೇ ಐದಾರು ತಿಂಗಳಲ್ಲಿ ಬರಲಿರುವ ಲೋಕಸಭೆ ಚುನಾವಣೆ ಸಮರಕ್ಕೆ ದಿಡ್ಡಿಬಾಗಿಲು ತೆರೆದುಕೊಳ್ಳುತ್ತಿದೆ. ನಾನಾ ಪಕ್ಷಗಳ ಪಂಥಾಹ್ವಾನದ ಭೂಮಿಕೆಯಾಗಿ.

ನಿಜ, ಎರಡು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಹೋರಾಟದಲ್ಲಿ ಆಗಿರುವ ಮೈಕೈ ನೋವೇ ಇನ್ನೂ ಆರಿಲ್ಲ.  ಈಗ ಮತ್ತೊಂದು ಸಮರಕ್ಕೆ ಸಜ್ಜಾಗಬೇಕಾದ ಅನಿವಾರ್ಯತೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಗುದ್ದಾಟದ ಸ್ವರೂಪ, ವಿಷಯ, ಮಾನದಂಡ, ತಂತ್ರ ಬೇರೆ-ಬೇರೆ ಇರಬಹುದು. ಆದರೆ ಸೇನೆಯನ್ನು ಮುನ್ನಡೆಸಿಕೊಂಡು ಹೋರಾಡಬೇಕಾದ ಮುಂಚೂಣಿ ನಾಯಕರು ಮಾತ್ರ ಅವರೇ ಆಗಿದ್ದಾರೆ. ಪ್ರತಿಷ್ಠೆ, ಅಸ್ತಿತ್ವ ಹಾಗೂ ನಾಯಕತ್ವವನ್ನು ಪಣಕ್ಕೆ ಒಡ್ಡುವ ಪರಿಣಾಮ ಈ ಚುನಾವಣೆ ರಾಜ್ಯ ಹಾಗೂ ರಾಷ್ಟ್ರ ನಾಯಕರಿಬ್ಬರಿಗೂ ಮುಖ್ಯವಾಗಿದೆ. ಜತೆಗೆ ರಾಷ್ಟ್ರ ನಾಯಕರು ರಾಜ್ಯ ನಾಯಕರ ನಡುವಣ ವಿಶ್ವಾಸ ಅಳೆವ ಮಾಪನವೂ ಆಗಿದೆ. ಹೀಗಾಗಿ ಈ ಚುನಾವಣೆಯನ್ನುಒಬ್ಬರು ಮತ್ತೊಬ್ಬರ ಹೆಗಲಿಗೆ ಕಟ್ಟಿ ಬಚಾವಾಗಲು ಸಾಧ್ಯವಿಲ್ಲ. ವಿಶ್ವಾಸದ ನೆಲೆಯಲ್ಲೇ ಎಲ್ಲರ ಪರಿಶ್ರಮ ಬೇಡುತ್ತಿರುವುದರಿಂದ ಅದಕ್ಕೀಗ ತಾಲೀಮು ಶುರವಾಗಿದೆ.

ಅಧಿಕಾರದಿಂದ ಬಿಜೆಪಿ ದೂರವಿಡುವ ಉದ್ದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿ. ವೇಣುಗೋಪಾಲ್ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ಬಿಜೆಪಿ ವಿರುದ್ಧ  ಸೆಣಸಲಿವೆ ಎಂದು ಘೋಷಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಅಲೆಯೊಂದೇ ಹೆಚ್ಚು ಕೆಲಸ ಮಾಡಿತ್ತು. ಅದರಲ್ಲಿ ಎರಡು ಮಾತಿಲ್ಲ. ಅವರಿಂದಾಗಿಯೇ ಬಿಜೆಪಿಯೊಂದೇ ಸ್ಪಷ್ಟ ಬಹುಮತ ಗಳಿಸಲು ಸಾಧ್ಯವಾಯಿತು. ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನ ಗೆಲ್ಲುವಲ್ಲಿಯೂ ಕೆಲಸ ಮಾಡಿದ್ದು ಅದೇ. ಅದನ್ನು ಹೊರತುಪಡಿಸಿ ಸಾಮಾನ್ಯ ಮಾನದಂಡ ಇಟ್ಟು ನೋಡುವುದಾದರೂ ಈಗಿನ ಪರಿಸ್ಥಿತಿಯಲ್ಲಿ ತ್ರಿಕೋನ ಸ್ಪರ್ಧೆಯಿಂದ ಬಿಜೆಪಿಗೆ ಹೆಚ್ಚು ಲಾಭ. ಜಾತ್ಯತೀತ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಕೆ ಆಗಿ ಹಿಂದುತ್ವ ಆಧರಿತ ಮತಗಳು ಬಿಜೆಪಿ ಸುತ್ತಲೇ ಗಿರಕಿ ಹೊಡೆಯುವುದರಿಂದ ಸಹಜವಾಗಿಯೇ ಅದರ ಫಲ ಆ ಪಕ್ಷಕ್ಕೇ ಸಿಗುತ್ತದೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾದರೆ ಅದೇ ಮಾತನ್ನು ಹೇಳಲು ಬರುವುದಿಲ್ಲ. ಜಾತ್ಯತೀಯ ಮತಗಳು ಕ್ರೋಡೀಕರಣಗೊಂಡರೆ ಬಿಜೆಪಿಯ ಒಟ್ಟುಮತಗಳನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚು. ಎಲ್ಲ ಕ್ಷೇತ್ರಗಳಲ್ಲೂ ಇದೇ ಕೆಮಿಸ್ಟ್ರಿ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲವಾದರೂ ಬಿಜೆಪಿಯ ಈಗಿನ ಸಂಖ್ಯಾಬಲವನ್ನು (18) ಕುಗ್ಗಿಸುವ ತಾಕತ್ತಿರುವುದು ಸುಳ್ಳಲ್ಲ. ರಾಜ್ಯದ ಮುಖಂಡರೊಡನೆ ಒಂದಿನಿತೂ ಯೋಚನೆ ಮಾಡದೆ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಕ್ಷಣವೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡದ್ದಲ್ಲದೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಅಂತಲೂ ಘೋಷಿಸಿದ್ದು ಇದೇ ಕಾರಣಕ್ಕೆ. ಅದರ ಮುಂದುವರಿದ ಭಾಗವಾಗಿಯೇ ವೇಣುಗೋಪಾಲ್ ಅವರ ಲೋಕಸಭೆ ಚುನಾವಣೆಪೂರ್ವ ಮೈತ್ರಿ ಹೇಳಿಕೆ.

ಇದು ಇಷ್ಟಕ್ಕೇ ನಿಂತಿಲ್ಲ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭವನ್ನೇ ತೃತೀಯ ರಂಗದ ಶಕ್ತಿಪ್ರದರ್ಶನಕ್ಕೂ ವೇದಿಕೆಯಾಗಿ ಬಳಸಿಕೊಂಡ ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ಎದಿರು ಈಸಲು ಅನಿವಾರ್ಯವಾಗಿರುವ ರಾಜಕೀಯ ಪರಿಸ್ಥಿತಿಯನ್ನು ಸಾಂಕೇತಿಕವಾಗಿ ಅನಾವರಣ ಮಾಡಿದರು. ಅದರ ಫಲಾಫಲಗಳು ಏನೇ ಇರಲಿ, ಮುಂದುವರಿದ ಭಾಗದ ಚಿತ್ರದ ಕತೆ ಎಂತೇ ಇರಲಿ, ಈಗ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (ಸಿಡಬ್ಲೂಸಿ) ಕೂಡ ಅದನ್ನೇ ಪ್ರತಿಪಾದಿಸಿದೆ. ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪೂರ್ವಾಧಿಕಾರಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಸ್ಥಳೀಯ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸುವಂತೆ ಸೋನಿಯಾ ಗಾಂಧಿ ಅವರು ಸಭೆಯಲ್ಲಿದ್ದವರಿಗೆಲ್ಲ ಮನವಿ ಮಾಡಿದ್ದಾರೆ. ಸಿಡಬ್ಲೂಸಿ ನೂತನ ಸದಸ್ಯ ಸಿದ್ದರಾಮಯ್ಯನವರು ಕೂಡ ಈ ಸಭೆಯಲ್ಲಿ ಇದ್ದರು. ಅಂದರೆ ಅದರರ್ಥ ಕರ್ನಾಟಕದಲ್ಲಿಯೂ ಜೆಡಿಎಸ್ ಜತೆ ಲೋಕಸಭೆ ಚುನಾವಣೆ ಮೈತ್ರಿ ಮುಂದುವರಿಯಲಿದೆ, ಅದನ್ನು ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲಿಸಬೇಕು ಎನ್ನುವುದೇ ಆಗಿದೆ. ಮೇಲಾಗಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಉಸ್ತುವಾರಿಯೂ ಸಿದ್ದರಾಮಯ್ಯನವರ ಹೆಗಲಿಗೇ ಬಿದ್ದಿದೆ.

ಮುಂದಿನ ಚುನಾವಣೆಯಲ್ಲಿ ಮೋದಿ ಅವರನ್ನು ಸದೆಬಡಿಯಲು ಆಗುತ್ತದೋ, ಇಲ್ಲವೋ ಅದು ಬೇರೆ ಪ್ರಶ್ನೆ. (ಮೊನ್ನೆ ತಾನೇ ಮೋದಿ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ತಂದಿದ್ದ ಅವಿಶ್ವಾಸ ನಿರ್ಣಯ 3:1 ರ ಅನುಪಾತದ ಮತಬಲದಲ್ಲಿ ಸೋಲುಂಡಿದೆ) ಆದರೆ ಅವರನ್ನು ಎದುರಿಸಲಾದರೂ ಬಿಜೆಪಿ ವಿರೋಧಿಗಳೆಲ್ಲರೂ ಒಗ್ಗೂಡಬೇಕು ಎನ್ನುವ ಜ್ಞಾನೋದಯವಂತೂ ಕಾಂಗ್ರೆಸ್‌ಗೆ ಆಗಿದೆ. ಮೋದಿ ವಿರೋಧಿ ಉಳಿದ ಪಕ್ಷಗಳೂ ಈ ಜ್ಞಾನೋದಯದಲ್ಲಿ ಪಾಲು ಪಡೆದಿವೆ. ಆದರೆ ಪ್ರತಿಪಕ್ಷಗಳು ಒಗ್ಗೂಡಿದಷ್ಟು ಬಿಜೆಪಿಗೇ ಹೆಚ್ಚು ಲಾಭ ಎಂದು ಮೋದಿ ಅವರು ವ್ಯಾಖ್ಯಾನಿಸಿದ್ದಾರೆ. ಅಂದರೆ ಎದುರಾಳಿಗಳ ಒಗ್ಗಟ್ಟು ಇಡೀ ದೇಶದಲ್ಲಿ ಮೋದಿ ಅವರದೇ ಒಂದು ಶಕ್ತಿಯಾದರೆ ಉಳಿದವರದು ಮತ್ತೊಂದು ಶಕ್ತಿ ಎಂಬುದನ್ನು ಪ್ರತಿಬಿಂಬಿಸಿದೆ. ಈ ವಿಚಾರವನ್ನು ಪಕ್ಕಕ್ಕಿಟ್ಟು ಕರ್ನಾಟಕದ ವಿಷಯಕ್ಕೆ ಮರಳುವುದಾದರೆ ರಾಷ್ಟ್ರಮಟ್ಟದಲ್ಲಿ ಇರುವ ಸ್ಥಿತಿಯೇ ಕರ್ನಾಟಕದ ಕನ್ನಡಿಯಲ್ಲೂ ಪ್ರತಿಫಲನವಾಗುತ್ತಿದೆ. ಆದರೆ ಈಗ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿದೆ. ಲೋಕಸಭೆ ಚುನಾವಣೆಪೂರ್ವ ಹೊಂದಾಣಿಕೆ ಮಾತುಕತೆ ಆರಂಭದ ಹಂತದಲ್ಲಿದೆ. ಹಿಂದಾದರೆ ಕಾಂಗ್ರೆಸ್ ಸರಕಾರ ಮಾತ್ರವಿತ್ತು. ಈಗ ಎರಡು ಪಕ್ಷಗಳ ಸರಕಾರ. ಆಗ ತ್ರಿಕೋನ ಸ್ಪರ್ಧೆಯಿತ್ತು. ಈಗ ಮೈತ್ರಿ ಏರ್ಪಟ್ಟರೆ ಮುಖಾಮುಖಿ ಹೋರಾಟ. ಹೀಗಾಗಿ ಲೋಕಸಭೆ ಚುನಾವಣೆ ಮುನ್ನೋಟವನ್ನು ಮೈತ್ರಿ ಕುತೂಹಲ ಹಿಂದಿಕ್ಕಿದೆ.

ಹೌದು, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಪೂರ್ವ ಮೈತ್ರಿ ಕುರಿತು ಸೋನಿಯಾ ಗಾಂಧಿ ಮತ್ತು ವೇಣುಗೋಪಾಲ್ ಆಡಿರುವ ಮಾತು ಜೆಡಿಎಸ್‌ಗೆ ಒಳಗೊಳಗೇ ಖುಷಿ ತಂದರೂ ಕಾಂಗ್ರೆಸ್‌ನ ಕೆಲ ರಾಜ್ಯ ನಾಯಕರಿಗೆ ಸಂಕಟ ತಂದಿರುವುದು ಸುಳ್ಳಲ್ಲ. ಅದರಲ್ಲೂ ವಿಶೇಷವಾಗಿ ದೇವೇಗೌಡರ ಕುಟುಂಬವನ್ನು ಕಂಡರಾಗದ, ಜೆಡಿಎಸ್ ಜತೆ ಸರಕಾರ ರಚನೆಯನ್ನು ವಿರೋಧಿಸಲು ಸಾಧ್ಯವಾಗದೆ ಒಳಗೊಳಗೆ ಒದ್ದಾಡಿಕೊಂಡವರು ಸೋನಿಯಾಗಾಂಧಿ ಮತ್ತು ವೇಣುಗೋಪಾಲ್ ಮಾತಿನಿಂದ ದಸಮುಸಗೊಂಡಿದ್ದಾರೆ. ಎಷ್ಟೇ ರೋಷಾವೇಶ ಇದ್ದರೂ ಏನೂ ಮಾಡಲಾಗದ ಸ್ಥಿತಿ. ಇದರಿಂದ ಅವರು ಮಾನಸಿಕವಾಗಿ ಮತ್ತಷ್ಟು ಜರ್ಝರಿತರಾಗಬಹುದೇ ಹೊರತು ವರಿಷ್ಠರ ನಿರ್ಣಯವನ್ನು ಧಿಕ್ಕರಿಸಲು ಆಗುವುದಿಲ್ಲ, ಅದಕ್ಕೆ ವ್ಯತಿರಿಕ್ತ ಪರಿಸ್ಥಿತಿಯನ್ನು ಸೃಷ್ಟಿ ಮಾಡಲೂ ಆಗುವುದಿಲ್ಲ. ಮೈತ್ರಿ ಸಂದರ್ಭದಲ್ಲಿ ಏರ್ಪಟ್ಟಿರುವ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ 28 ಲೋಕಸಭೆ ಕ್ಷೇತ್ರಗಳ ಪೈಕಿ ಒಂಬತ್ತನಾದರೂ ಜೆಡಿಎಸ್‌ಗೆ ಬಿಟ್ಟುಕೊಡಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ಮೂರ್ನಾಲ್ಕು ಸ್ಥಾನಗಳಿಗಿಂತ ಹೆಚ್ಚೇನೂ ಗೆದ್ದಿಲ್ಲ. ಈಗದರ ಸಂಖ್ಯೆ 2. ಹಳೇ ಮೈಸೂರು ಭಾಗದಲ್ಲಷ್ಟೇ ಅದರ ಪಾರುಪತ್ಯ. ಹೀಗಿರುವಾಗ ಒಂಬತ್ತು ಕ್ಷೇತ್ರಗಳನ್ನು ಬಿಟ್ಟುಕೊಡಬೇಕಾಗಿ ಬಂದಿರುವುದು ಅವರ ಕಣ್ಣು ಕೆಂಪು ಮಾಡಿದೆ.

ಇಲ್ಲಿ ಇನ್ನೊಂದು ವಿಚಾರ. ಬಿಜೆಪಿಯನ್ನು ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಒಗ್ಗೂಡಿ ಎದುರಿಸುವುದರಿಂದ ಉಭಯ ಪಕ್ಷಗಳಿಗೂ ಲಾಭವಾಗುವುದಾದರೂ ಹೆಚ್ಚಿನಾಂಶ ಜೆಡಿಎಸ್ ಪಾಲಾಗಲಿದೆ. ಕಾಂಗ್ರೆಸ್ ಪ್ರಾಬಲ್ಯ ಇರುವೆಡೆಯೂ ಜೆಡಿಎಸ್‌ಗೇ ಸ್ಥಾನ ಬಿಟ್ಟುಕೊಡುವುದರ ಜತೆಗೆ ಆ ಪಕ್ಷದ ಅಭ್ಯರ್ಥಿಯನ್ನೇ ಬೆಂಬಲಿಸಬೇಕಾದ್ದರಿಂದ ಜೆಡಿಎಸ್ ಸಂಖಾಬಲ ಮೂರ್ನಾಲ್ಕನ್ನು ದಾಟುವ ಲಕ್ಷಣಗಳೂ ಇವೆ. ಜತೆಗೆ ಕುಮಾರಸ್ವಾಾಮಿ ಅವರು ಮುಖ್ಯಮಂತ್ರಿ ಆಗಿರುವುದರಿಂದ, ಆಡಳಿತದ ಸೂತ್ರ ಅವರ ಕೈಯಲ್ಲೇ ಇರುವುದರಿಂದ, ಅಧಿಕಾರಬಲ ಜೆಡಿಎಸ್‌ಗೆ ಮತ್ತಷ್ಟು ಹುರುಪು ತಂದುಕೊಡುತ್ತದೆ. ಅದೇ ರೀತಿ ಕಾಂಗ್ರೆಸ್ ಕೂಡ ಮೈತ್ರಿ ಸರಕಾರದ ಮುಖ್ಯಪಾಲುದಾರ ಆಗಿರುವುದರಿಂದ ಅಧಿಕಾರಬಲ ಆ ಪಕ್ಷಕ್ಕೂ ಇದ್ದರೂ, ಅದರ ಲಾಭ ಸಿಗುತ್ತದೆಯಾದರೂ ಹೊಂದಾಣಿಕೆ ಸೂತ್ರದಲ್ಲಿ ಕಾಂಗ್ರೆಸ್‌ಗೆ ಹೋಲಿಸಿದರೆ ಹೆಚ್ಚಿನ ಫಲಾನುಭವಿ ಜೆಡಿಎಸ್. ಈಗಾಗಲೇ ಉಸ್ತುವಾರಿ ಸಚಿವರ ಪಟ್ಟಿ ಸಿದ್ಧವಾಗಿದ್ದು, ಆ ಪೈಕಿ ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಆ ಪಕ್ಷದವರನ್ನೇ ನಿಯೋಜಿಸಲಾಗುತ್ತಿಿದೆ. ಹಾಸನದಲ್ಲಿ ಎಚ್.ಡಿ. ರೇವಣ್ಣ, ಮಂಡ್ಯದಲ್ಲಿ ಪುಟ್ಟರಾಜು, ಮೈಸೂರಿನಲ್ಲಿ ಜಿ.ಟಿ. ದೇವೇಗೌಡ, ತುಮಕೂರಿನಲ್ಲಿ ಗುಬ್ಬಿ ಶ್ರೀನಿವಾಸ್ – ಹೀಗೆ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖವಾಗಿ ಜೆಡಿಎಸ್ ಕೈಹಿಡಿದ ಭಾಗಗಳಲ್ಲಿ ಆ ಪಕ್ಷದವರೇ ಇರುವಂತೆ ಎಚ್ಚರ ವಹಿಸಲಾಗಿದೆ. ರಾಮನಗರದಲ್ಲಿ ಡಿ.ಕೆ. ಶಿವಕುಮಾರ್, ಬೆಂಗಳೂರು ಗ್ರಾಾಮಾಂತರದಲ್ಲಿ ಡಿ.ಕೆ. ಸುರೇಶ್ ನಿಯೋಜಿರಾಗುತ್ತಿದ್ದರೂ ಸಿಎಂ ಕುಮಾರಸ್ವಾಮಿ ಜತೆಗೆ ಇವರ ಒಳನೆಂಟು ಈಗ ಗುಟ್ಟಾಗೇನೂ ಉಳಿದಿಲ್ಲ. ಇವರೆಲ್ಲರೂ ಈಗ ಬಹಿರಂಗವಾಗಿಯೇ ‘ಅಪೂರ್ವ ಸಹೋದರ’ರಂತಾಗಿದ್ದಾರೆ. ಇದಲ್ಲದೆ ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲೂ ಜೆಡಿಎಸ್ ಉಸ್ತುವಾರಿ ಮಂತ್ರಿಗಳಿದ್ದಾರೆ. ಹೊಂದಾಣಿಕೆ ರಾಜಕೀಯಕ್ಕೆ ಇವೆಲ್ಲವೂ ಸಕಾರಾತ್ಮಕ ಅಂಶಗಳೇ. ಇದು ಕಾಂಗ್ರೆಸ್‌ನಲ್ಲಿರೋ ದೇವೇಗೌಡರ ವಿರೋಧಿಗಳ ಹೊಟ್ಟೆಕಿಚ್ಚಿಗೆ ಕಾರಣವಾಗಿರುವ ಅಂಶ. 37 ಸ್ಥಾನ ಗೆದ್ದು ಕರ್ನಾಟಕದ ಚುಕ್ಕಾಾಣಿ ಹಿಡಿದಿರುವ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲೂ ತನ್ನ ಪ್ರಾಬಲ್ಯವನ್ನೆಲ್ಲಿ ವಿಸ್ತರಿಸಿಕೊಳ್ಳುತ್ತದೋ ಎಂಬ ಈರ್ಷೆ ಅವರನ್ನು ಕಾಡುತ್ತಿದೆ.

ಹಾಗೆಂದು ಕಾಂಗ್ರೆಸ್‌ಗೆ ಲಾಭ ಆಗುವುದೇ ಇಲ್ಲ ಎಂದೇನೂ ಇಲ್ಲ. ಹಳೇ ಮೈಸೂರು, ಮಧ್ಯ ಕರ್ನಾಟಕದಲ್ಲಷ್ಟೇ ಅಲ್ಲದೆ ಜೆಡಿಎಸ್ ವಿರಳವಾಗಿರುವೆಡೆಯೂ ಕಾಂಗ್ರೆಸ್‌ಗೆ ಲಾಭವಾಗಲಿದೆ. ಚದುರಿದಂತೆ ಆದ ಮಳೆ, ಹನಿ ನೀರಾವರಿಯಲ್ಲೂ ಉತ್ತಮ ಬೆಳೆ ತೆಗೆಯುವ ಹಾಗೆ. ಹಿಂದಿನ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಜೆಡಿಎಸ್ ಗೆಲ್ಲಲಾಗದಿದ್ದರೂ ಕೆಲವು ಕಡೆ ಕಾಂಗ್ರೆಸ್ ಸೋಲಿಗೆ ಕಾರಣವಾಗಿರುವುದು ಉಂಟು. ಆಗಲೇ ಹೇಳಿದಂತೆ ಜಾತ್ಯತೀತ ಮತಗಳ ವಿಭಜನೆ ಇದಕ್ಕೆ ಕಾರಣ. ಈಗ ಹೊಂದಾಣಿಕೆ ಆದರೆ ಆ ಭಯ ಇರದು. ಅದರಲ್ಲೂ 2014 ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈಗ ಮೋದಿ ಅವರ ವರ್ಚಸ್ಸು ಹಿಂದಿನ ಗಡಸುತನ ಉಳಿಸಿಕೊಂಡಿಲ್ಲ. ಕೊಟ್ಟ ಎಲ್ಲ ಭರವಸೆ ಈಡೇರಿಸದಿರುವುದರಿಂದ ಅದು ಕೊಂಚ ತಗ್ಗಿರುವುದು ಸುಳ್ಳಲ್ಲ. ಇಂಥ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಮೈತ್ರಿ ಲಾಭ ತರಬಹುದು. ಆದರೆ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಿಂದ ಚಾಲ್ತಿಯಲ್ಲಿರುವ ಗೊಂದಲ ಹೀಗೆಯೇ ಮುಂದುವರಿದರೆ ಅದೇ ಮಾತನ್ನು ಹೇಳಲು ಬಾರದು.

ಇನ್ನು ಬಿಜೆಪಿ ವಿಚಾರ. ಕಳೆದ ವಿಧಾನಸಭೆ ಚುನಾವಣೆಯಲ್ಲಾಗಲಿ, ಈಗ ಬರಲಿರುವ ಲೋಕಸಭೆ ಚುನಾವಣೆಲ್ಲಾಗಲಿ ಮೋದಿ ಮಂತ್ರವೇ, ಮೋದಿ ನಾಮಬಲವೇ ಆ ಪಕ್ಷದ ಆಸ್ತಿ. ಬರೀ ಒಳಜಗಳ, ದ್ವೇಷಾಸೂಯೆಯನ್ನೇ ಅಮೃತವಾಗಿಸಿಕೊಂಡಿದ್ದ ಬಿಜೆಪಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳನ್ನು ದಾಟುವ ಲಕ್ಷಣಗಳು ಇರಲಿಲ್ಲ. ಆದರೆ ಕೊನೆಯ ಹತ್ತು ದಿನ ಮೋದಿ ಅವರು ಕರ್ನಾಟಕ ತುಂಬ ಓಡಾಡಿ, ಜಿಲ್ಲಾವಾರು ವಿಷಯಾಧರಿತ ಭಾವನಾತ್ಮಕ ಭಾಷಣಗಳನ್ನು ಜಡಿದು ಬಿಜೆಪಿಯನ್ನು ನೂರರ ಗಡಿ ದಾಟಿಸಿದರು. ಅವರು ಇನ್ನೊಂದು ವಾರ ಕರ್ನಾಟಕ ಸುತ್ತಿದ್ದರೆ ಬಿಜೆಪಿಗೆ ಸರಳ ಬಹುಮತ ಬರುತ್ತಿದ್ದುದು ಸುಳ್ಳಲ್ಲ. ಈಗಲೂ ಅಷ್ಟೇ. ಬಿಜೆಪಿಗೆ ಮೋದಿ ಅವರದೇ ಶ್ರೀರಕ್ಷೆ. ಯಡಿಯೂರಪ್ಪನವರು ಆತುರಕ್ಕೆ ಬಿದ್ದು ಸರಕಾರ ರಚನೆ ಮಾಡಲು ಹೋಗಿ ಮೈಸುಟ್ಟುಕೊಂಡರು. ಅದೂ ರಾಷ್ಟ್ರೀಯ ನಾಯಕರ ಇಚ್ಛೆಗೆ ವಿರುದ್ಧವಾಗಿ. ವಿರುದ್ಧ ಮನಸ್ಸಿನ ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆ ಮಾಡಲು ಬಿಟ್ಟು, ಆ ಸರಕಾರದ ಹುಳುಕುಗಳನ್ನೇ ಲೋಕಸಭೆ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎನ್ನುವುದು ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ತಂತ್ರವಾಗಿತ್ತು. ಆದರೆ ಎರಡೇ ದಿನದ ಸಿಎಂ ಸ್ಥಾನ ಕಳೆದುಕೊಳ್ಳುವ ಸಂದರ್ಭದಲ್ಲಾಗಲಿ, ಬಜೆಟ್ ಅಧಿವೇಶನ ಕಲಾಪಲ್ಲಾಗಲಿ ಯಡಿಯೂರಪ್ಪನವರ ಭಾಷಣ ತಮ್ಮ ಅಧಿಕಾರ ಲುಕ್ಸಾನು ಕುರಿತಂತೆ ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ನಿಂದನೆಗೆ ಸೀಮಿತವಾಯಿತೇ ಹೊರತು ಮೈತ್ರಿ ಸರಕಾರದ ನೀತಿ-ನಿರೂಪಣೆಗಳನ್ನು ದಂಡಿಸುವುದಕ್ಕಾಗಲಿ, ಬಿಜೆಪಿ ವರ್ಚಸ್ಸು ಹಿಗ್ಗಿಸುವುದಕ್ಕಾಗಲಿ, ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೆಲಸಗಳನ್ನು ಬಿಂಬಿಸುವುದಕ್ಕಾಗಲಿ ಬಳಕೆ ಆಗಲಿಲ್ಲ. ಹೊರಗೂ ಅಷ್ಟೇ. ಮೋದಿ ಸರಕಾರದ ನಾಲ್ಕು ವರ್ಷಗಳ ಸಾಧನೆ ಹೊತ್ತಿಗೆಯನ್ನು ಉದ್ಯಮಿಗಳು, ಬ್ಯಾಂಕ್ ಮೇನೇಜರ್‌ಗಳು, ಸ್ವಾಮೀಜಿಗಳಂಥ  ‘ಆಯ್ದವರ್ಗ’ಕ್ಕೆ ತಲುಪಿಸಿದರೆ ಹೊರತು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಲಿಲ್ಲ. ಜತೆಗೆ ಚಕಮಕಿ ಬೆಂಕಿಯಂತೆ ಆಗಾಗ್ಗೆ ಕಾಣಿಸಿಕೊಳ್ಳುವ ಒಳಜಗಳ ಬಿಜೆಪಿ ಮೈಸುಡುತ್ತಿದೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಿಜೆಪಿಗೆ ವರವಾಗುವ ಬದಲು ಮುಳುವಾಗುವ ಲಕ್ಷಣಗಳೇ ಹೆಚ್ಚು.

ಚುನಾವಣೆಗೆ ಇನ್ನೂ ಐದಾರು ತಿಂಗಳುಗಳಿವೆ. ನಾಳೆ ಹೀಗೆ ಎಂದು ಹೇಳಲು ಸಾಧ್ಯವಿಲ್ಲವಾದರೂ, ಅನ್ನದ ಅಗುಳನ್ನು ಹಿಸುಕಿ ನೋಡಲಷ್ಟೇ ಈಗ ಸಾಧ್ಯ. ಆದರೆ ಒಂದೇ ಪಾತ್ರೆಯಲ್ಲಿ ಎಲ್ಲ ಪಕ್ಷಗಳ ಅಕ್ಕಿ ಬೇಯುತ್ತಿರುವುದರಿಂದ ಒಂದೊಂದು ಅಗುಳನ್ನೂ ಹಿಸುಕಿ ನೋಡಬೇಕಾದ ಸನ್ನಿವೇಶವಿದೆ. ಈ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಲೋಕಸಭೆ ಚುನಾವಣೆ ಬಂದಿರುತ್ತದೆ. ಇಡೀ ಅಡುಗೆಯ ರುಚಿ ಗೊತ್ತಾಗಿರುತ್ತದೆ!

ಲಗೋರಿ:  ಮನಸ್ಸಿನ ಜತೆ ಕ್ರಿಯೆಯೂ ಇದ್ದರಷ್ಟೇ ಗೆಲವು ಸಾಧ್ಯ.

Leave a Reply