‘ಫ್ರೀ ಪಾಸ್ ಕೊಡ್ತೀವಿ ಸರ್ಕಾರಿ ಶಾಲೆಗೆ ಬನ್ನಿ’

ಡಿಜಿಟಲ್ ಕನ್ನಡ ಟೀಮ್:

ಉಚಿತವಾಗಿ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೂಡ ಬೆಂಬಲ ನೀಡಿದ್ದು, ಕೆಲವು ಕಡೆ ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯು‌ಐ ಕೂಡ ಉಚಿತ ಬಸ್‌ ಪಾಸ್‌ಗಾಗಿ ಆಗ್ರಹ ಮಾಡಿದೆ. ಸಾರಿಗೆ ಸಚಿವರು ಶೇಕಡಾ 25ರಷ್ಟು ಹಣ ಭರಿಸಲು ಸಿದ್ಧವಿರುವುದಾಗಿ ಹೇಳಿದ್ದು ಶಿಕ್ಷಣ ಇಲಾಖೆ ಕೂಡ ಶೇಕಡಾ 25ರಷ್ಟು ಹಣ ಭರಿಸುವುದಾಗಿ ಶಿಕ್ಷಣ ಸಚಿವ ಎನ್ ಮಹೇಶ್ ತಿಳಿಸಿದ್ದರು. ಆ ಬಳಿಕ ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ತೇವೆ ಅಂತಾನೂ ಡಿ.ಸಿ ತಮ್ಮಣ್ಣ ಹೇಳಿದ್ದರು.

ಸಿಎಂ ಕುಮಾರಸ್ವಾಮಿ ಜೊತೆಗಿನ ಸಭೆ ಚರ್ಚಿಸಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಪಾಸ್ ನೀಡುವ ಬಗ್ಗೆ ಸಿಎಂ ಘೋಷಣೆ ಮಾಡಲಿದ್ದಾರೆ. ಆದ್ರೆ ನಿನ್ನೆಯೇ ಚನ್ನಪಟ್ಟಣದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಸುಳಿವು ನೀಡಿದ್ದು, ಲಕ್ಷ ಲಕ್ಷ ಡೊನೇಷನ್ ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುವ ಪೋಷಕರಿಗೆ ಉಚಿತ ಪಾಸ್ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ. ಅವರ ಮಾತಿನಲ್ಲಿ ಸತ್ಯಾಂಶವಿದೆ. ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಕಳುಹಿಸುವ ಪೋಷಕರಿಗೆ ಸಾವಿರ ರೂಪಾಯಿ ಕೊಟ್ಟು ಬಸ್ ಪಾಸ್ ಖರೀದಿಸುವುದು ಯಾವ ಭಾರ ಅಲ್ಲವೇ? ಆದರೆ ಸರ್ಕಾರಿ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಕಷ್ಟದಿಂದ ಬರುತ್ತಾರೆ ಅವರಿಗೆ ಸರ್ಕಾರ ಉಚಿತ ಬಸ್ ಪಾಸ್ ಕೊಡುವುದರಲ್ಲಿ ಅರ್ಥವಿದೆ. ಜೊತೆಗೆ ಆರ್‌ಟಿಇ ಮೂಲಕ ಖಾಸಗಿ ಶಾಲೆ ಸೇರಿರುವ ಮಕ್ಕಳನ್ನೂ ಸರ್ಕಾರ ಪರಿಗಣಿಸಿದ್ರೆ ಉತ್ತಮ.

ಸರ್ಕಾರದ ವಿರುದ್ಧ ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ ಸರ್ಕಾರ ಈ ಮೂಲಕ ಒಂದು ಸಂದೇಶ ಕೊಡಬೇಕಿದ್ದು, ನಿಮಗೂ ಉಚಿತ ಬಸ್ ಪಾಸ್ ಕೊಡ್ತೇವೆ. ನೀವೂ ಕೂಡ ಸರ್ಕಾರಿ ಶಾಲಾ ಕಾಲೇಜಿಗೆ ಬನ್ನಿ ಎಂದು ಆಹ್ವಾನ ಕೊಡಬೇಕಿದೆ. ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಸಂಚಾರ ಮಾಡಬೇಕಿದ್ರೆ ಶಾಲಾ ಕಾಲೇಜಿಗೆ ಬರಲಿ. ಆ ಮೂಲಕವಾದರೂ ಶಾಲಾ ಕಾಲೇಜಿಗೆ ಬೇಡಿಕೆ ಬರಲಿ ಅನ್ನೋದು ಡಿಜಿಟಲ್ ಕನ್ನಡ ಆಶಯ ಕೂಡ.

Leave a Reply