ಲೋಕಸಭೆ ಮೈತ್ರಿ: ಎತ್ತು ಏರಿಗೆಳೆದರೆ ಕೋಣ ನೀರಿಗೆ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೆಲ ಕಾಂಗ್ರೆಸ್ ನಾಯಕರಲ್ಲಿ ಒಂದಲ್ಲ ಒಂದು ರೀತಿ ಅಸಮಾಧಾನ. ಅದರಲ್ಲೂ ಹಳೇ ಮೈಸೂರು ಭಾಗದ ನಾಯಕರಲ್ಲಿ ಹೈಕಮಾಂಡ್ ಬಗ್ಗೆಯೇ ರೇಜಿಗೆ. ಜೆಡಿಎಸ್ ಜತೆ ಸರ್ಕಾರ ರಚನೆಯಾದ ಬಳಿಕ ಹೈಕಮಾಂಡ್ ಆದೇಶಗಳನ್ನು ವಿರೋಧಿಸುವಂತಿಲ್ಲ, ಅದೇ ಕಾಲಕ್ಕೆ ರಾಜ್ಯದಲ್ಲಿ ಜೆಡಿಎಸ್ ದರ್ಬಾರ್ ಸಹಿಸಿಕೊಳ್ಳುವಂತೆಯೂ ಇಲ್ಲ. ಸಂಕಟವೋ ಸಂಕಟ. ಎಷ್ಟು ಅಂಥ ಒಳಗಿಟ್ಟುಕೊಂಡಾರು. ಹೀಗಾಗಿ ಮನಸ್ಸಿಗೆ ಬಂದಂತೆ ಕಕ್ಕುತ್ತಿದ್ದಾರೆ. ಸರ್ಕಾರದ ಸ್ಥಿರತೆಗೆ ಮತ್ತಷ್ಟು ಡ್ಯಾಮೇಜ್ ಮಾಡುತ್ತಿದ್ದಾರೆ.

ಅತ್ತ ಜೆಡಿಎಸ್ ಮುಖಂಡ ದೇವೇಗೌಡರು ಎಏಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲೋಸುಗ ಲೋಕಸಭೆ ಮೈತ್ರಿಗೆ ಸಿದ್ಧ ಎನ್ನುತ್ತಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಭಾರವಾದ ಮನಸ್ಸಿನಿಂದ ಒಪ್ಪಿದ್ದಾರೆ. ಆದರೆ ಅವರ ಶಿಷ್ಯರಾದ ಮಾಜಿ ಸಚಿವ ಎ. ಮಂಜು, ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರಂಥವರು ಚುನಾವಣೆ ಸೋಲಿನ ಬಳಿಕ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ತುಮಕೂರು ಲೋಕಸಭೆ ಕ್ಷೇತ್ರವನ್ನು ಆ ಪಕ್ಷಕ್ಕೆ ಬಿಟ್ಟುಕೊಡಬಾರದು. ಒಂದು ವೇಳೆ ಜೆಡಿಎಸ್‌ಗೆ ತುಮಕೂರು ಬಿಟ್ಟುಕೊಟ್ಟರೆ ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ರಾಜಣ್ಷ ಗುಡುಗಿದ್ದಾರೆ. ಅಷ್ಟೇ ಅಲ್ಲ ಇಂದಿನ ಮೈತ್ರಿ ಸರ್ಕಾರದ ಆಡಳಿತ ವೈಖರಿ ನೋಡಿದ್ರೆ, ಈ ಸರ್ಕಾರ ಹೆಚ್ಚು ದಿನ ಬಾಳಲ್ಲ ಎಂದೂ ಭವಿಷ್ಯ ಹೇಳಿದ್ದಾರೆ. ಇದೊಂದು ರೀತಿ ಕುತೂಹಲ ಮೂಡಿಸಿದೆ.

ಅತ್ತ ಹಾಸನದಲ್ಲಿ ಮಾಜಿ ಸಚಿವ ಎ ಮಂಜು, ಮಂಡ್ಯ ಹಾಗೂ ಹಾಸನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್ ಗೆ ನಷ್ಟವಾಗಲಿದೆ. ಮಂಡ್ಯವನ್ನು ಕಾಂಗ್ರೆಸ್ ಪಡೆದುಕೊಳ್ಳುವುದಾದರೆ ಹಾಸನ ಬಿಟ್ಟುಕೊಡಲು ಅಭ್ಯಂತರ ಇಲ್ಲ. ಎರಡೂ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಆಗ್ರಹಿಸಿದ್ದಾರೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವಾಗ ನಮ್ಮ ಮಾತಿಗೆ ಹೈಕಮಾಂಡ್ ಯಾವುದೇ ಮನ್ನಣೆ ನೀಡಿಲ್ಲ. ಸಂಸತ್ ಚುನಾವಣೆಯಲ್ಲಾದರೂ ನಮ್ಮ ಮಾತಿಗೆ ಬೆಲೆ ಕೊಡಲೇಬೇಕು ಎಂದು ಆಗ್ರಹ ಮಾಡಿದ್ದಾರೆ.

ಕಾಂಗ್ರೆಸ್ ಗೆ ತನ್ನ ನಾಯಕರನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾಯಕರಲ್ಲೇ ಗಿಂದಲ ಇದೆ. ಹೀಗಾಗಿ ತನ್ನದೇ ರೀತಿಯಲ್ಲಿಆದ್ರೆ ಕಾಂಗ್ರೆಸ್ ಗೆ ಕಡಿವಾಣ ಹಾಕಲು ಜೆಡಿಎಸ್ ತಂತ್ರ ರೂಪಿಸುತ್ತಿರುವಂತೆ ಕಾಣ್ತಿದೆ. ಯಾಕಂದ್ರೆ ಇಷ್ಟು ದಿನ ಮಿತ್ರಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡದೆ ಸುಮ್ಮನಿದ್ದ ನಾಯಕರು, ಇದೀಗ ತರಾಟೆ ತೆಗೆದುಕೊಳ್ಳಲು ಶುರುಮಾಡಿದ್ದಾರೆ. ಕಾರವಾರದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ದೇಶದಲ್ಲಿ ಮೋದಿ ವಿರುದ್ಧ ಭಾವನೆ ಕ್ರೋಡೀಕೃತವಾಗುತ್ತಿದೆ. ಹಿಂದಿನಂತೆ ಬಿಜೆಪಿಯೊಂದಕ್ಕೆ ಸ್ಷಷ್ಟ ಬಹುಮತ ಸಿಗೋದು ಕಷ್ಟ. ಹಾಗೆಂದ ಮಾತ್ರಕ್ಕೆ ರಾಹುಲ್ ಗಾಂಧಿ ಅಧಿಕಾರಕ್ಕೆ ಬರ್ತಾರೆ ಎಂದು ಅರ್ಥವಲ್ಲ. ಯಾವುದೇ ಕಾರಣಕ್ಕೂ ರಾಹುಲ್ ಪ್ರಧಾನಿ ಆಗುವುದಿಲ್ಲ ಎಂದಿದ್ದಾರೆ. ತೃತೀಯ ರಂಗದ ನಾಯಕರೊಬ್ಬರು ಪ್ರಧಾನಿ ಆಗಲಿದ್ದಾರೆ ಎಂದೂ ಭವಿಷ್ಯ ನುಡಿದಿದ್ದಾರೆ. ಪ್ರಧಾನಿ ಯಾರಾಗ್ತಾರೆ ಅನ್ನೋ ಹೇಳಿಕೆಗಿಂತಾ ಇಲ್ಲಿ ಮುಖ್ಯವಾಗುವ ವಿಚಾರ ಅಂದ್ರೆ, ಕಾಂಗ್ರೆಸ್ ನಾಯಕರ ಲಗಾಮಿಲ್ಲದ ಹೇಳಿಕೆಗೆ ಕಡಿವಾಣ ಹಾಕುವುದು ಜೆಡಿಎಸ್ ತಂತ್ರ.

Leave a Reply