ಬಿಜೆಪಿಗೆ ಬಲವಾಗುತ್ತಾ ಮೈತ್ರಿ ಬಿರುಕು?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ರಾಜ್ಯ ಬಿಜೆಪಿ ಕೂಡ ಭರ್ಜರಿ ಯೋಜನೆ ಹಾಕಿಕೊಂಡಿದ್ದು, ಮಿಷನ್ 20 ಪ್ಲಸ್ ಜೊತೆ ಅಖಾಡಕ್ಕೆ ಇಳಿಯುತ್ತಿದೆ. ವಿಧಾನಸಭೆಯ ಚುನಾವಣೆಯಲ್ಲಿ ಮಿಷನ್ 150 ಅನ್ನೋ ಘೋಷಣೆ ಜೊತೆ ಹೋಗಿದ್ದ ಬಿಎಸ್ ಯಡಿಯೂರಪ್ಪ, 104 ಸ್ಥಾನಗಳನ್ನು ಗಳಿಸಿ ಅತ್ಯಧಿಕ ಸ್ಥಾನ ಗಳಿಸಿದ್ರೂ ವಿಪಕ್ಷ ನಾಯಕನಾಗಿದ್ದಾರೆ. ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ. ಇದೀಗ ಲೋಕಸಭಾ ಚುನಾವಣೆಗೆ ಮತ್ತದೇ ಫಾರ್ಮುಲಾ ಇಟ್ಟುಕೊಂಡಿರುವ ಬಿಎಸ್ ಯಡಿಯೂರಪ್ಪ, ಹೊಸ ಗುರಿ ನಿಗದಿ ಮಾಡಿಕೊಂಡಿದ್ದಾರೆ. ಬಿಎಸ್‌ವೈ ಶಕ್ತಿಯನ್ನು ಅರಿತಿರುವ ಅಮಿತ್ ಶಾ, ಸಂಪೂರ್ಣ ಹೊಣೆಗಾರಿಕೆ ನೀಡಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ನೀಡಿದ್ದಾರೆ. ಇದೀಗ ಯಡಿಯೂರಪ್ಪ ಮೈತ್ರಿ ಪಕ್ಷಗಳ ಒಡಕನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಲೋಕಸಭೆ ಹೊಂದಾಣಿಕೆಗಾಗಿಯೇ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಮೂಲಕ ಶಕ್ತಿ ವೃದ್ಧಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ದೇಶಾದ್ಯಂತ ಬಿಜೆಪಿಗೆ ಪರ್‍ಯಾಯ ಶಕ್ತಿಯ ಗುಂಪನ್ನು ಹುಟ್ಟು ಹಾಕಲು ದೇವೇಗೌಡರನ್ನು ಬಳಸಿಕೊಳ್ತಿದ್ದಾರೆ. ತೃತೀಯ ರಂಗವನ್ನು ಒಟ್ಟು ಮಾಡಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ದೇವೇಗೌಡರ ಸಲಹೆ ಪಡೆದುಕೊಳ್ತಿದ್ದಾರೆ. ಆದರೆ ಪಕ್ಷದ ನಾಯಕರು ಮಾತ್ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಬೇಡ ಅನ್ನೋ ಮಾತನಾಡ್ತಿದ್ದಾರೆ.

ಲೋಕಸಭೆ ಸೀಟು ಹಂಚಿಕೆ ಗೊಂದಲಕ್ಕೆ ಸಿಲುಕಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಭದ್ರಕೋಟೆಯಾಗಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ. ಮೈಸೂರು, ಮಂಡ್ಯ, ಹಾಸನ ಕ್ಷೇತ್ರದಲ್ಲೂ ಕಾಂಗ್ರೆಸ್ ಬಲಿಷ್ಠವಾದ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಮೈಸೂರಿನಲ್ಲಿ ಒಮ್ಮೆಯೂ ಜೆಡಿಎಸ್ ಗೆದ್ದಿಲ್ಲ, ಈ ಭಾರಿ ಕೂಡ ಜೆಡಿಎಸ್ ಮೈಸೂರಿನಲ್ಲಿ ಗೆಲ್ಲುವುದು ಕಷ್ಟ. ಈಗಾಗಲೇ ತಳಮಟ್ಟದ ಕಾರ್ಯಕರ್ತರು ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಸಿಟ್ಟಾಗಿದ್ದಾರೆ ಎನ್ನುವ ಮಾಹಿತಿಯನ್ನು ರವಾನಿಸಿದ್ದು, ಅಧಿಕಾರದಲ್ಲಿರುವ ಕ್ಷೇತ್ರಗಳನ್ನು ಬಿಟ್ಟು ಕೊಟ್ಟರೆ ಪಕ್ಷ ಸಂಘಟನೆಗೆ ಸಮಸ್ಯೆ ಆಗುತ್ತೆ ಎಂದು ಅಳಲು ತೋಡಿಕೊಂಡಿದ್ದಾರಂತೆ. ಈ ಎಲ್ಲಾ ಬೆಳವಣಿಗೆಗಳಿಂದ ಜೆಡಿಎಸ್ ಜೊತೆಗಿನ ಮೈತ್ರಿಯಲ್ಲಿ ಬಿರುಕು ಮೂಡುವ ಸಾಧ್ಯತೆ ಜಾಸ್ತಿಯಾಗಿದ್ದು, ಸಹಜವಾಗಿ  ಇದು  ಬಿಜೆಪಿಗೆ ನೆರವಾಗಲಿದೆ.

Leave a Reply