ರಕ್ತ ಚಂದ್ರ ಗ್ರಹಣ ಎಫೆಕ್ಟ್ ಏನು?

ಡಿಜಿಟಲ್ ಕನ್ನಡ ಟೀಮ್:

ಇಂದು ರಾತ್ರಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ವಿಲಂಭಿ ನಾಮ ಸಂವತ್ಸರ ಆಷಾಢ ಶುಕ್ಲ ಪೌರ್ಣಮಿಯಂದು ಆಗಸದಲ್ಲಿ ಕಪ್ಪು ಬಿಳುಪಿನ ಚದುರಂಗ ನಡೆಯಲಿದೆ. ಗ್ರಹಣ ರಾತ್ರಿ 11.54ಕ್ಕೆ ಆರಂಭವಾಗಿ ಬೆಳಗ್ಗಿನ ಜಾವ 3 ಗಂಟೆ 55 ನಿಮಿಷಕ್ಕೆ ಅಂತ್ಯವಾಗಲಿದೆ. ಗ್ರಹಣ ಕಾಲದಲ್ಲಿ ಏನೇನು ಮಾಡಬೇಕೆಂದು ಕೆಲವರು ಸಾಮಾಜಿಕ ಜಾಲ ತಾಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಮಾಡ್ತಿದ್ದಾರೆ. ಅದರಲ್ಲಿ ಕೆಲವು ಹೀಗಿವೆ..

  • ಗ್ರಹಣ ಕಾಲದಲ್ಲಿ ಸ್ನಾನ ಮಾಡುವುದು ಸ್ನಾನ ಮಾಡುವುದು.
  • ಮನೆಯಲ್ಲಿ ದೀಪ ಹಚ್ಚಿಟ್ಟು ದೇವರಿಗೆ ನಮಸ್ಕಾರ ಮಾಡುವುದು.
  • ದೇವರ ಸೋತ್ರಗಳನ್ನು ಪಠಿಸುವುದು
    ಗ್ರಹಣ ಮುಕ್ತಾಯವಾದ ಬಳಿಕ ಮತ್ತೊಮ್ಮೆ ಸ್ನಾನ ಮಾಡುವುದು.
  • ಗ್ರಹಣ ದೋಷ ರಾಶಿ ನಿಮ್ಮದಾಗಿದ್ದರೆ, ಬೆಳಗ್ಗಿನ ಜಾವ ದೇವಸ್ಥಾನಕ್ಕೆ ಹೋಗುವುದು.
  • ದೀಪಕ್ಕೆ ಎಣ್ಣೆ ಸುರಿದು, ದೇಗುಲಪ್ರದಕ್ಷಿಣೆ ಹಾಕುವುದು

ಇವಿಷ್ಟು ಜ್ಯೋತಿಷಿಗಳು ಹೇಳಿರುವ ಸಲಹೆ. ಆದ್ರೆ ವಿಜ್ಞಾನಿಗಳು ಹೇಳುವುದೇ ಬೇರೆ, ಇದು ಪ್ರಕೃತಿಯಲ್ಲಿ ನಡೆಯುವ ಖಗೋಳ ವಿಸ್ಮಯ ಅಷ್ಟೇ. ಇದು ನೂರಾರು ವರ್ಷಗಳಿಗೆ ಒಮ್ಮೆ ನಡೆಯುವ ಬೆಳಕು ಕತ್ತಲಿನ ವಿಸ್ಮಯವನ್ನು ಕಣ್ತುಂಬಿಕೊಳ್ಳಿ ಎಂದು ಕರೆ ನೀಡಿದ್ದಾರೆ. ಕರ್ನಾಟಕದಲ್ಲಿ ಮೋಡ ಮುಸುಕಿದ ವಾತಾವರಣ ಇರುವ ಸಾಧ್ಯತೆ ಹೆಚ್ಚಾಗಿದೆ.

ರಕ್ತ ಚಂದ್ರ ಗ್ರಹಣ ಎಂದರೆ…?

ಈ ಗ್ರಹಣದ ವೇಳೆ ಸೂರ್ಯ, ಭೂಮಿ ಹಾಗೂ ಚಂದ್ರ ಒಂದೇ ಸಾಲಿನಲ್ಲಿ ನಿಲ್ಲುತ್ತವೆ. ಸೂರ್ಯನ ಕಿರಣಗಳು ಭೂಮಿಯ ವಾತಾವರಣ ಸ್ಪರ್ಶಿಸಿ ಚಂದ್ರನ ಮೇಲೆ ನೇರವಾಗಿ ಬೀಳದೆ ಮೇಲ್ಭಾಗದಲ್ಲಿ ಹಾದು ಹೋಗಲಿದೆ. ಹರಿಣಾಮ ಚಂದ್ರನ ಮೇಲೆ ನೆರಳು ಬಿದ್ದು ಕೆಂಪು ಬಣ್ಣ ಗೋಚರಿಸುತ್ತದೆ. ಹೀಗಾಗಿ ಇದನ್ನು ರಕ್ತ ಚಂದ್ರ ಗ್ರಹಣ ಎಂದು ಕರೆಯುತ್ತಾರೆ. ಇನ್ನು ಮೂರು ಗ್ರಹಗಳು ಒಂದೇ ಸಾಲಿನಲ್ಲಿ ನಿಲ್ಲುವುದರಿಂದ ಚಂದ್ರ ಸಾಗುವ ಗತಿ ಮಂದವಾಗುತ್ತದೆ ಹೀಗಾಗಿ ಇದು ಸುದೀರ್ಘ ಗ್ರಹಣವಾಗಿದೆ. ಈ ಗ್ರಹಣ ಭಾರತದ ಎಲ್ಲಾ ಭಾಗಗಳಿಂದ ಪೂರ್ಣ ಪ್ರಮಾಣದಲ್ಲಿ ಗೋಚರಿಸುತ್ತದೆ.

ಈ ಮಧ್ಯೆ ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದಲೂ ನಾನು ದೇವರ ದಯೆಯಿಂದ ಸಿಎಂ ಆಗಿದ್ದೇನೆ ಎನ್ನುವ ಸಿಎಂ ಕುಮಾರಸ್ವಾಮಿ, ಕುಟುಂಬ ಸಮೇತ ಯಾತ್ರೆ ಹೊರಟಿದ್ದಾರೆ. ಬೆಳಗ್ಗಿನ ಜಾವ ಸುಪ್ರಭಾತ ದರ್ಶನ ಪಡೆಯುವ ಮೂಲಕ ತಿಮ್ಮಪ್ಪನ ಮೊರೆ ಹೋಗುತ್ತಿದ್ದು, ರಾಜ್ಯದ ಆಡಳಿತ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸು ಎಂದು ಏಳುಕೊಂಡಲವಾಡನ ಪಾದ ಹಿಡಿದಿದ್ದಾರೆ.

ಆದ್ರೆ ವಿಶೇಷ ಅಂದ್ರೆ ಈ ಚಂದ್ರಗ್ರಹಣ ಒಂದು ವೈಜ್ಞಾನಿಕ ಕ್ರಿಯೆ ಎಂದು ಜನತೆಗೆ ತಿಳಿ ಹೇಳಬೇಕಿದ್ದ ರಾಜ್ಯ ಸರ್ಕಾರವೇ ಮೂಢ ನಂಬಿಕೆಗೆ ಅಂಟಿಕೊಂಡಿರೋದು ವಿಪರ್‍ಯಾಸವಾಗಿದೆ. ಪೂಜೆ ಮಾಡುವುದು ಮೂಢ ನಂಬಿಕೆಯಲ್ಲ, ಆದ್ರೆ ಗ್ರಹಣ ಕಾಲದಲ್ಲಿ ಸಂಕಷ್ಟ ಹೆಚ್ಚಾಗುವ ಸಂಗತಿ ಇದೆ ಅನ್ನೋ ನಂಬಿಕೆಯಲ್ಲಿ ಈ ರೀತಿ ದೇವರು ದಿಂಡರ ಮೊರೆ ಹೋದರೆ ಅಧಿಕಾರ ನಡೆಸೋದು ಸುಲಭವಾಗುತ್ತಾ? ಅನ್ನೋ ಪ್ರಶ್ನೆಯನ್ನು ಮೂಡಿಸುತ್ತದೆ.

Leave a Reply