ಟೀಕೆಗೆ ಗೋಲಿ ದೋಸ್ತಿಗೆ ಜೈ ಅಂತಿದ್ದಾರೆ ಟ್ರಂಪ್- ಪುಟಿನ್!

ಡಿಜಿಟಲ್ ಕನ್ನಡ ಟೀಮ್:

ಎರಡು ವಾರಗಳ ಹಿಂದೆ ಹೆಲೆನ್ಸ್ಕಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿಗೆ ಸಂಬಂಧಿಸಿದಂತೆ ಅಪಾಸ್ವರಗಳು ಕೇಳಿಬರುತ್ತಿರುವ ಹೊತ್ತಲ್ಲಿ, ಈ ಇಬ್ಬರೂ ನಾಯಕರು ತಮ್ಮ ದೋಸ್ತಿ ಮುಂದುವರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಅಮೆರಿಕ ಚುನಾವಣೆ ವೇಳೆ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬುದರ ಬಗ್ಗೆ ಟ್ರಂಪ್ ಚಕಾರ ಎತ್ತದೇ ಇರುವುದು ಅಮೆರಿಕನ್ನರಿಗೆ ಬೇಸರ ತಂದಿದೆ. ಇನ್ನು ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿ ಹಿಲರಿ ಕ್ಲಿಂಟನ್ ಅವರನ್ನು ನೋಡಲು ಇಚ್ಚಿಸದ ರಷ್ಯಾ ಟ್ರಂಪ್ ಆಯ್ಕೆಯಿಂದ ಒಳಗೊಳಗೆ ಸಂತೋಷ ಪಟ್ಟಿದ್ದು ನಿಜ. ಹೀಗಾಗಿ ಟ್ರಂಪ್ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಬದ್ಧ ವೈರಿಗಳಾಗಿರುವ ಅಮೆರಿಕ ಹಾಗೂ ರಷ್ಯಾ ಸಂಬಂಧ ಸುಧಾರಿಸುವ ನಿರೀಕ್ಷೆ ಮೂಡಿದ್ದವು. ಈಗ ಅದು ನಿಜವಾಗುತ್ತಿವೆ.

ಹೆಲೆನ್ಸ್ಕಿಯ ಐತಿಹಾಸಿಕ ಸಭೆ ಬಳಿಕ ಮತ್ತೆ ಮತ್ತೆ ಇಂತಹ ಸಭೆ ನಡೆಸುವ ಬಗ್ಗೆ ಉಭಯ ನಾಯಕರು ಇಂಗಿತ ವ್ಯಕ್ತಪಡಿಸಿದ್ದರು. ಅದಕ್ಕೆ ಪುಷ್ಠಿ ನೀಡುವಂತೆ ಕಳೆದ ವಾರ ಟ್ರಂಪ್ ಅವರು ವಾಷಿಂಗ್ಟನ್ ಗೆ ಆಗಮಿಸುವಂತೆ ಪುಟಿನ್ ಗೆ ಆಮಂತ್ರಣ ನೀಡಿದ್ದರು. ದಕ್ಷಿಣ ಆಫ್ರಿಕಾದಲ್ಲಿನ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಿರುವ ಪುಟಿನ್ ಈ ಆಮಂತ್ರಣ ಸ್ವೀಕರಿಸಿದ್ದು, ಮಾಸ್ಕೋಗೆ ಆಗಮಿಸುವಂತೆ ಟ್ರಂಪ್ ಗೆ ಕರೆ ನೀಡಿದ್ದಾರೆ.

ಈ ವಿಚಾರವಾಗಿ ಟ್ರಂಪ್ ಹೇಳಿರೋದಿಷ್ಟು… ‘ಟ್ರಂಪ್ ಅವರು ಮತ್ತಷ್ಟು ಸಭೆ ನಡೆಸಲು ಇಚ್ಚಿಸಿದ್ದು, ನಾನು ಅದಕ್ಕೆ ಸಿದ್ಧ. ಇಂತಹ ಸಭೆಗಳಿಂದ ಎರಡು ದೇಶಗಳ ನಡುವೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಹೀಗಾಗಿ ಅವರನ್ನು ನನ್ನ ಅತಿಥಿಯಾಗಲು ಆಹ್ವಾನಿಸುತ್ತೇನೆ. ಉತ್ತಮ ಪರಿಸ್ಥಿತಿ ನಿರ್ಮಾಣವಾದರೆ ನಾನು ವಾಷಿಂಗ್ಟನ್ ಗೆ ಹೋಗಲು ಸಿದ್ಧ.’

Leave a Reply