ಎಚ್ಡಿಕೆ ಮಾತು ತಪ್ಪಿದ ಮಗ- ಡಿಕೆಶಿ ದಾರಿ ತಪ್ಪಿದ ಮಗ: ತೇಜಸ್ವಿನಿ

ಡಿಜಿಟಲ್ ಕನ್ನಡ ಟೀಮ್:

‘ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮಾತು ತಪ್ಪಿದ ಮಗ, ಅವರ ಬೆಂಬಲಕ್ಕೆ ನಿಂತಿರುವ ಡಿ.ಕೆ. ಶಿವಕುಮಾರ್​ ದಾರಿ ತಪ್ಪಿದ ಮಗ…’ ಇದು ಬಿಜೆಪಿ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ರಮೇಶ್​ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಪರಿ.

ಸಂಪೂರ್ಣ ಸಾಲಮನ್ನಾ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಯಲ್ಲಿ ಸಮ್ಮಿಶ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ತೇಜಸ್ವಿನಿ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರ ಟೀಕೆಯ ಸಾರಾಂಶ ಹೀಗಿದೆ…

‘ಡಿಕೆಶಿ ತೊಡೆ ತಟ್ಟಿದ್ದು ನಮಗೆ ನೆನಪಿದೆ. ಬಳ್ಳಾರಿ ಪಾದಯಾತ್ರೆಯಲ್ಲಿ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ನಡೆದು ಮತ್ತೆ ಸ್ವಲ್ಪ ದೂರ ಕಾರಿನಲ್ಲಿ ಸಾಗಿದ ಕಾಂಗ್ರೆಸ್​ ನಾಯಕರ ಕಳ್ಳಾಟ ನಮಗೆ ಗೊತ್ತಿದೆ. ಕುಮಾರಸ್ವಾಮಿ ಅವರ ಜೊತೆ ಕಳ್ಳತನದಿಂದ ಒಪ್ಪಂದ ಮಾಡಿಕೊಂಡು ಡಿಕೆಶಿ ನೀರಾವರಿ ಖಾತೆ ಪಡೆದಿದ್ದಾರೆ. ರೈತರ ಬಗ್ಗೆ ಡಿಕೆಶಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು, ರೈತರ ಪಾದಯಾತ್ರೆಯಲ್ಲಿ ಕಾಂಗ್ರೆಸ್​ ರಾಜಕಾರಣ ಮಾಡಬಾರದು.

ಕುಮಾರಸ್ವಾಮಿ ನನಗೆ ಮಹಾಭಾರತದ ದುರ್ಯೋಧನನ ಹಾಗೆ ಕಾಣುತ್ತಾರೆ, ಡಿ.ಕೆ. ಶಿವಕುಮಾರ್​ ದುಶ್ಯಾಸನನ ಹಾಗೆ ಕಾಣುತ್ತಾರೆ. ಸದ್ಯಕ್ಕೆ ಅವರಿಬ್ಬರೂ ಒಂದಾಗಿದ್ದಾರೆ. ಮುಂದೆ ಏನಾಗುತ್ತದೋ ಗೊತ್ತಿಲ್ಲ.

ಡಿಕೆಶಿ ಕೂಡ ಕಾಂಗ್ರೆಸ್ ಶಾಲು ಹಾಕಿದ್ದಾರೆ. ಕಾಂಗ್ರೆಸ್​ನಿಂದ ಗಾಂಧೀಜಿ ರಾಮರಾಜ್ಯ ಆಗಬೇಕು ಅಂದಿದ್ದರು. ಆದರೆ, ಇವರು ಕೆರೆ, ಬೆಟ್ಟ, ಭೂಮಿ ಎಲ್ಲ ನುಂಗಿದರು. ಇಂಥವರು ರಾಮರಾಜ್ಯ ನಿರ್ಮಿಸುತ್ತಾರಾ? ರಾಮನಗರ ರಾವಣ ನಗರವಾಗಿದೆ.’

Leave a Reply