ಹಳೇ ಮೈಸೂರು ಭಾಗಕ್ಕೆ ಕಮಲ ಹೊಸತಂತ್ರ!

ಡಿಜಿಟಲ್ ಕನ್ನಡ ಟೀಮ್:

2019ಕ್ಕೆ ಎದುರಾಗಲಿರುವ ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕಮಲ ಪಾಳಯ ಈಗಾಗಲೇ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಇರೋದ್ರಿಂದ ಬಿಜೆಪಿಗೆ ಸ್ವಲ್ಪ ಹಿನ್ನಡೆ ಆಗುವ ಭೀತಿ ಇದ್ದರೂ ಸಹ, ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಗೆಲ್ಲುವುದು, ಜೊತೆಗೆ ಎಲ್ಲೆಲ್ಲಿ ಸಾಧ್ಯವಾಗುವುದಿಲ್ಲವೋ ಕ್ಷೇತ್ರಗಳಲ್ಲಿ ಶಕ್ತಿ ಮೀರಿ ಪ್ರಯತ್ನ ನಡೆಸುವುದು ಬಿಜೆಪಿ ಅಜೆಂಡ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ತೊಂದರೆ ಕಾಣಿಸುವುದಿಲ್ಲ. ಆದರೆ ದಕ್ಷಿಣ ಕರ್ನಾಟಕದಲ್ಲಿ ಅದರಲ್ಲೂ ಹಳೇ ಮೈಸೂರಿನ ನಾಲ್ಕೈದು ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಾಗಲಿದೆ. ಇದೀಗ ಆ ಕ್ಷೇತ್ರಗಳ ಮೇಲೂ ಕಣ್ಣಿಟ್ಟಿರುವ ನಾಯಕರು, ಸಖತ್ ಪ್ಲಾನ್ ಮಾಡಿದ್ದಾರೆ.

ಕಾಂಗ್ರೆಸ್ ಹಾಗು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ಮಾಡಿದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧೆ ಮಾಡೋದು ಸಹಜ. ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಭರ್ಜರಿ ಜಯಭೇರಿ ಬಾರಿಸಲಿದೆ ಅನ್ನೋದು ಜೆಡಿಎಸ್ ಕಾರ್ಯಕರ್ತರ ಆತ್ಮವಿಶ್ವಾಸ. ಆದರೆ ಈ ಬಾರಿ ಹಳೆಯ ಇತಿಹಾಸ ಮರುಕಳಿಸುವ ಸಾಧ್ಯತೆ ತೀರಾ ಕಡಿಮೆ ಯಾಕಂದ್ರೆ ಬಿಜೆಪಿ‌ ಮಾಡಿರೋ ಮಾಸ್ಟರ್ ಪ್ಲಾನ್ ಆಗಿದೆ. ಮಾಜಿ ಸಚಿವರುಗಳು ಬಿಜೆಪಿ ಬಾಗಿಲು ಬಡಿಯುವ ಮೂಲಕ ದಕ್ಷಿಣದಲ್ಲೂ ಕಮಲ ಅರಳುವ ಮುನ್ಸೂಚನೆ ಸಿಗುತ್ತಿದೆ. ಅದರಲ್ಲೂ ಜೆಡಿಎಸ್ ಭದ್ರಕೋಟೆ ಬೇಧಿಸಲು ಬಿಜೆಪಿ ಜೆಡಿಎಸ್‌ ಮಾಜಿ ನಾಯಕರುಗಳಿಗೆ ಗಾಳ ಹಾಕಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜೆಡಿಎಸ್ ಕೋಟೆಯಲ್ಲಿ ಕಮಲದ ಪೈಪೋಟಿ ಅನುಮಾನವೇ ಇಲ್ಲ.

ಚೆಲುವರಾಯಸ್ವಾಮಿ ಸೇರಿದಂತೆ ಇತರೆ ನಾಯಕರು ಜೆಡಿಎಸ್ ಪಕ್ಷ ತೊರೆಯಲು ಮನಸ್ಸಿಲ್ಲದಿದ್ದರೂ ಬೇರೆಯವರ ಮಾತು ನಂಬಿ ಕೆಟ್ಟೆವು ಎಂದು ಇತ್ತೀಚಿಗೆ ಆಪ್ತರ ಬಳಿ ಹೇಳಿಕೊಂಡಿದ್ದರೂ ಅನ್ನೋ ಸುದ್ದಿ ಬಂದಿತ್ತು. ಆ ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಅವರ ಮನೆಗೆ ತೆರಳಿ ಭೇಟಿ ಮಾಡಿದ್ರು. ಆದ್ರೀಗ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿದ್ದು, ಬಹುತೇಕ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ. ದೇವೇಗೌಡರ ಮಾತನ್ನು ಚಾಚೂ ತಪ್ಪದೆ ರಾಹುಲ್ ಗಾಂಧಿ ಪಾಲಿಸುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ನಂಬಿ ಜೆಡಿಎಸ್ ವಿರುದ್ಧ ತೊಡೆ ತಟ್ಟಿದ್ದವರು, ಇದೀಗ ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾರೆ. ಜೆಡಿಎಸ್‌ನಲ್ಲಿ ಪ್ರಬಾವಿ ನಾಯಕರಾಗಿದ್ದವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ರು. ಇದೀಗ ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ಪಡೆಯುವಷ್ಟು ಬಲವಿಲ್ಲ. ಜೊತೆಗೆ ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧೆ ಮಾಡುವಂತಿಲ್ಲ. ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಯಾರೆಲ್ಲಾ ಕಮಲಕ್ಕೆ ಜೈ ಅಂತಾರೆ ಅನ್ನೋದು ಬಯಲಾಗಲಿದೆ. ಇದು ಸಾಧ್ಯವಾದರೆ ದಕ್ಷಿಣದಲ್ಲಿ ಅದರಲ್ಲೂ ಹಳೇ ಮೈಸೂರು ಭಾಗದ ಜೆಡಿಎಸ್ ಕೋಟೆಯಲ್ಲೂ ಕಮಲ ಅರಳಲು ಶತಾಯಗತಾಯ ಪ್ರಯತ್ನ ಮಾಡಲಿದೆ.

Leave a Reply