ಮೋದಿ ವಿದೇಶ ಪ್ರವಾಸ ಟೀಕಿಸುತ್ತಿದ್ದವರ ಬಾಯಿಗೆ ಬೀಗ! ನಿಜವಾದ ವೆಚ್ಚ ಎಷ್ಟು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಭಾರತದ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ವಿದೇಶ ಪ್ರವಾಸಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬುದು ವಿರೋಧ ಪಕ್ಷಗಳ ಟೀಕೆ. ಈ ಮಧ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಅವರ ಪ್ರವಾಸಕ್ಕೆ 1400 ಕೋಟಿ ಖರ್ಚಾಗಿದೆ ಎಂಬ ಮಾಧ್ಯಮಗಳ ವರದಿ ಬಂದಮೇಲೆ ವಿರೋಧ ಪಕ್ಷಗಳ ಟೀಕೆ ಮತ್ತಷ್ಟು ಹೆಚ್ಚಾಗಿದೆ. ಮೋದಿ ವಿದೇಶ ಪ್ರವಾಸಕ್ಕೆ ಇಷ್ಟು ದುಡ್ಡು ಖರ್ಚಾಗಿದ್ದು ನಿಜವೇ? ಈ ಹಿಂದಿನ ಸರ್ಕಾರಗಳಿಗಿಂತ ಮೋದಿ ಪ್ರವಾಸಕ್ಕೆ ಹೆಚ್ಚು ಖರ್ಚಾಗಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಈಗ ಸ್ಪಷ್ಟ ಅಂಕಿಅಂಶಗಳ ಬಿಡುಗಡೆಯಾಗಿದ್ದು, ಟೀಕಾಕಾರರ ಬಾಯಿಗೆ ಬೀಗ ಬಿದ್ದಂತಾಗಿದೆ.

ಮೋದಿ ಅವರ ಕಳೆದ ನಾಲ್ಕು ವರ್ಷಗಳ ವಿದೇಶ ಪ್ರವಾಸಕ್ಕೂ ಯುಪಿಎ 2ನೇ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿದೇಶ ಪ್ರವಾಸದ ವೇಳೆ ಖರ್ಚಾದ ಹಣದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಅಂಕಿಅಂಶಗಳ ಪ್ರಮುಖ ಅಂಶಗಳು ಹೀಗಿವೆ…

  • ಕಳೆದ ನಾಲ್ಕು ವರ್ಷಗಳಲ್ಲಿ 36 ಪ್ರವಾಸ ಮಾಡಿದ್ದು ಅದರಲ್ಲಿ 31 ಪ್ರವಾಸ ಏರ್ ಇಂಡಿಯಾ ವಿಮಾನಗಳಲ್ಲಿ ಮಾಡಿ, ₹387.24 ಕೋಟಿ ವೆಚ್ಚವಾಗಿದೆ. ಅದೇ ಮನಮೋಹನ್ ಸಿಂಗ್ ಅವರು ಆರಂಭಿಕ ನಾಲ್ಕು ವರ್ಷಗಳಲ್ಲಿ 31 ವಿದೇಶ ಪ್ರವಾಸ ಮಾಡಿದ್ದು ₹386.35 ಕೋಟಿ ವೆಚ್ಚವಾಗಿದೆ.
  • ಮೋದಿ ನಾಲ್ಕು ವರ್ಷಗಳ ವಿದೇಶ ಪ್ರವಾಸದಲ್ಲಿ 155 ದಿನ ಕಳೆದರೆ, ಮನಮೋಹನ್ ಸಿಂಗ್ ನಾಲ್ಕು ವರ್ಷಗಳಲ್ಲಿ 131 ದಿನ ಕಳೆದಿದ್ದರು.

1400 ಕೋಟಿ ಲೆಕ್ಕ ಹೇಗೆ?
ಮೋದಿ ಪ್ರವಾಸಕ್ಕೆ 1400 ಕೋಟಿ ವೆಚ್ಚವಾಗಿದೆ ಎಂಬ ಮಾಧ್ಯಮ ವರದಿಗಳು ಸುಳ್ಳೇ? ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಪಡೆಯುವುದಕ್ಕೂ ಮುನ್ನ ಈ ₹1400 ಕೋಟಿಯ ಲೆಕ್ಕ ಹೇಗೆ ಎಂಬುದನ್ನು ನೋಡೋಣ…

ಏರ್ ಇಂಡಿಯಾ ತನ್ನ ವಿವಿಐಪಿ ವಿಮಾನಗಳ ನಿರ್ವಹಣೆಗಾಗಿ ಪ್ರತಿ ವರ್ಷ ₹220 ಕೋಟಿ ಶುಲ್ಕ ವಿಧಿಸುತ್ತಿದೆ. ಇದರ ಜತೆಗೆ ಹಾಟ್ ಲೈನ್ ಸೌಲಭ್ಯಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುತ್ತಿದೆ. ಈ ಕಳೆದ ನಾಲ್ಕು ವರ್ಷಗಳಲ್ಲಿ ಈ ಶುಲ್ಕಗಳೆಲ್ಲಾ ಸೇರಿ ₹1400 ಕೋಟಿಯಾಗುತ್ತದೆ. ಅಂದಹಾಗೆ, ಈ ನಿರ್ವಹಣಾ ವೆಚ್ಚ ಮತ್ತು ಹಾಟ್ ಲೈನ್ ವೆಚ್ಚವನ್ನು ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲೂ ಪಾವತಿ ಮಾಡಲಾಗುತ್ತಿತ್ತು.

ವಿರೋಧ ಪಕ್ಷಗಳು ಈ ಶುಲ್ಕವನ್ನು ಮೋದಿ ವಿದೇಶ ಪ್ರವಾಸದ ಲೆಕ್ಕದಲ್ಲಿ ಮಾತ್ರ ಸೇರಿಸಿಕೊಂಡು ಟೀಕೆ ಮಾಡುತ್ತಿವೆ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಇದ್ದ ಬೆಳೆಗಳಿಗಿಂತ ಈಗ ಬೆಲೆ ಪ್ರಮಾಣ ಹೆಚ್ಚಾಗಿದೆ. ಇನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರಿಗಿಂತ ಮೋದಿ ಹೆಚ್ಚು ಪ್ರವಾಸ ಮಾಡಿದ್ದಾರೆ. ಆದರೆ ವೆಚ್ಚಗಳ ವ್ಯತ್ಯಾಸದಲ್ಲಿ ಮೋದಿ ಸ್ವಲ್ಪ ಪ್ರಮಾಣದಲ್ಲಿ ಮುಂದಿದ್ದಾರೆ. ಹೀಗಾಗಿ ವಿದೇಶ ಪ್ರವಾಸವನ್ನು ಮುಂದಿಟ್ಟುಕೊಂಡು ಟೀಕೆ ಮಾಡುತ್ತಿದ್ದ ವಿರೋಧ ಪಕ್ಷಗಳು, ಈ ಅಂಕಿಅಂಶಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

Leave a Reply