ಒಡೆದು ಆಳುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾ ಬಿಜೆಪಿ?

ಡಿಜಿಟಲ್ ಕನ್ನಡ ಟೀಮ್:

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ ಗಳಿಕೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ದೊಡ್ಡ ನಿರ್ಧಾರಕ್ಕೆ ಮುಂದಾಗಿತ್ತು. ಇಲ್ಲಿ ಬಿಜೆಪಿ ಮತ ಬ್ಯಾಂಕ್ ಒಡೆದು ಲಾಭ ಪಡೆಯುವ ಉದ್ದೇಶವಿತ್ತು. ಈಗ ಬಿಜೆಪಿ ಇಂತಹುದೇ ದುಸ್ಸಾಹಸಕ್ಕೆ ಮುಂದಾಗಿದೆ. ಅದು ಪ್ರತ್ಯೇಕ ರಾಜ್ಯ ವಿಚಾರದಲ್ಲಿ.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ಕೇಳುತ್ತಿದ್ದವರ ಬೆಂಬಲಕ್ಕೆ ನಿಂತಿತ್ತು. ಯಾವುದೇ ಭಾಗದ ಜನರಿಗೂ ಲಿಂಗಾಯತ ವೀರಶೈವ ಅನ್ನೊ ಬೇಧಭಾವ ಬೇಕಿರಲಿಲ್ಲ. ಆದರೆ ಕೆಲವು ರಾಜಕಾರಣಿಗಳು ತಮ್ಮ ಸಮುದಾಯದಲ್ಲಿ ಮೇಲುಗೈ ಸಾಧಿಸಲು, ಸಮುದಾಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಇದರಿಂದ ಕಾಂಗ್ರೆಸ್ ಗೆ ವಿಧಾನಸಭಾ ಚುನಾವಣೆ ಫಲಿತಾಂಶ ಪಾಠ ಕಲಿಸಿತ್ತು. ಇದೀಗ ಆ ಹೋರಾಟಕ್ಕೆ ಬೆಂಬಲ ನೀಡಿದ್ದ ನಾಯಕರಿಗೆ ಬಿಸಿ ಮುಟ್ಟಿದೆ. ಕಾಂಗ್ರೆಸ್ ಪರಿಸ್ಥಿತಿ ಕಣ್ಣಾರೆ ಕಂಡಿದ್ದರು ಬಿಜೆಪಿ ಇದೇ ರೀತಿ ಒಡೆದು ಆಳುವ ಪ್ರಯತ್ನ ಮಾಡುತ್ತಿರುವುದು ರಾಜ್ಯ ಬಿಜೆಪಿ ನಾಯಕರ ಮೂರ್ಖತನಕ್ಕೆ ಸಾಕ್ಷಿ.

ಉತ್ತರ ಕರ್ನಾಟಕವನ್ನು ಕುಮಾರಸ್ವಾಮಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಶ್ರೀರಾಮುಲು, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ ಅಂತಾ ಆಗ್ರಹ ಮಾಡಿದ್ರು. ಬಳಿಕ ಉಮೇಶ್ ಕತ್ತಿ ಸೇರಿದಂತೆ ಸಣ್ಣಪುಟ್ಟ ನಾಯಕರೂ, ಮಾಜಿ ಮುಖ್ಯಮಂತ್ರಿಗಳೂ ಪ್ರತ್ಯೇಕ ರಾಜ್ಯದ ಮಾತಿಗೆ ದನಿಗೂಡಿಸಿದ್ರು. ಆ ಬಳಿಕ ಬಿಜೆಪಿ ಕೋರ್‌ಕಮಿಟಿಯಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಯಾರೂ ಕೂಡ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲಿಸಿ ಹೇಳಿಕೆ ನೀಡಬೇಡಿ ಎಂದರು. ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಬಿಎಸ್ ಯಡಿಯೂರಪ್ಪ ಭಾಗಿಯಾಗುವ ಮೂಲಕ ಇದರ ಸೂತ್ರಧಾರಿ ಬಿಜೆಪಿ ಅನ್ನೋದನ್ನು ಸಾರಿ ಹೇಳುತ್ತಿದ್ದಾರೆ.

ಮಗು ಚಿವುಟೋದು.. ತೊಟ್ಟಿಲು ತೂಗೋದು.. ಅನ್ನೋ ಗಾಧೆ ಮಾತಿನಂತೆ ಬಿಜೆಪಿ ಪ್ರತ್ಯೇಕ ರಾಜ್ಯ ಕೂಗು ಹಾಕಿ, ಸರ್ಕಾರ ರಾಜ್ಯ ಒಡೆದು ಆಳುವ ಪ್ರಯತ್ನ ಮಾಡುತ್ತಿದೆ ಅಂತ ಗೂಬೆ ಕೂರಿಸುತ್ತಿದೆ.

ಪ್ರತ್ಯೇಕ ರಾಜ್ಯ ಹೋರಾಟವನ್ನು ಪರೋಕ್ಷವಾಗಿ ಬೆಂಬಲಿಸಿ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶ ಬಿಜೆಪಿಯದ್ದು. ವಿಧಾನಸಭಾ ಚುನಾವಣೆಯಲ್ಲಿ ಉತ್ತರ‌ ಕ ರ್ನಾಟಕ ಜನ ಬೆಂಬಲಿಸಿದನ್ನು ಹಾಗೇ ಉಳಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದು, ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿರುವ ಕೆಲವು ಹೋರಾಟಗಾರರನ್ನು ಬೆಂಬಲಿಸುವ ಮೂಲಕ ಭಾವನಾತ್ಮಕ ಕೆಲಸಕ್ಕೆ ಕೈ ಹಾಕಿದೆ.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅನ್ನೋದು ಕೇವಲ ದಿಕ್ಕುಗಳ ಆಧಾರದ ಮೇಲೆಯೇ ಹೊರತು, ಯಾವುದೇ ಭಾಗದ ಆಧಾರದಲ್ಲಿ ಅಲ್ಲ. ಕರ್ನಾಟಕದ ಜನ ಎಂದೆಂದಿಗೂ ಕನ್ನಡಿಗರು‌ ಎಂದು ಗರ್ವದಿಂದ ಹೇಳಿಕೊಳ್ತಾರೆ. ಯಾರಿಗೂ ರಾಜ್ಯ ಒಡೆಯುವ ಉದ್ದೇಶ ಇಲ್ಲ. ಅಭಿವೃದ್ಧಿ ಆಗಿಲ್ಲ ಅನ್ನೋದನ್ನು ದಕ್ಷಿಣ ಕರ್ನಾಟಕ ಜನರೂ ಒಪ್ಪಿಕೊಳ್ತಾರೆ. ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರು‌ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದರೆ ಅಭಿವೃದ್ಧಿ ಸಾಧ್ಯವೇ? ಈ ಸತ್ಯ ಎರಡೂ ಕಡೆಯ ಜನರಿಗೂ ಗೊತ್ತಿದೆ. ಇದೀಗ ಉತ್ತರ‌ ಕರ್ನಾಟಕದ ಮೇಲೆ ಅಸ್ತಿತ್ವ ಸಾಧಿಸಲು ಮುಂದಾಗಿರುವ ಬಿಜೆಪಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ‌ ಕಾಂಗ್ರೆಸ್ ಅನುಭವಿಸಿದ್ದನ್ನೇ ಅನುಭವಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ರಾಜಕಾರಣದಲ್ಲಿ ಕೆಲವೊಂದು ಹೇಳಿಕೆಗಳನ್ನು ಎಲ್ಲಾ ಪಕ್ಷದ ನಾಯಕರೂ ನೀಡ್ತಾರೆ. ಆ ಹೇಳಿಕೆಗಳನ್ನು ಆಧರಿಸಿ ಹೋರಾಟ ರೂಪಿಸುವುದು, ಜನರನ್ನು ಸಳೆಯುವುದು, ಮತವಾಗಿ ಪರಿವರ್ತನೆ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಈ ಹಿಂದೆಯೂ ಸಾಕಷ್ಟು ನಾಯಕರ ಮಾತುಗಳು ಆ ಪಕ್ಷಕ್ಕೆ ಶಾಪವಾಗಿ ಪರಿಣಮಿಸಿರುವ ಉದಾಹರಣೆಗಳಿವೆ. ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರದ ವಿರುದ್ಧ ಹೋರಾಟ ಮಾಡಲಿ. ಆದರೆ ಭಾವನೆಗಳ ಜತೆ ಆಟವಾಡುವುದು ಸರಿಯಲ್ಲ. ಸರ್ಕಾರದ ಹೋರಾಟ ಮಾಡುವುದನ್ನು ಬಿಟ್ಟು ರಾಜ್ಯವನ್ನು ಇಬ್ಭಾಗ ಮಾಡಲು ಹೊರಟಿರೋದು ಎಷ್ಟು ಸರಿ‌ ಅನ್ನೋ ಪ್ರಶ್ನೆ ಉತ್ತರ ಕರ್ನಾಟಕ ಭಾಗದಲ್ಲೇ ಕೇಳಿಸುತ್ತಿದೆ. ಒಟ್ಟಾರೆ ಲಿಂಗಾಯತ ಧರ್ಮ ಮಾನ್ಯತೆ ವಿಚಾರದಲ್ಲಿ ಲಾಭ ಮಾಡಿಕೊಳ್ಳಲು ಹೋದ ಕಾಂಗ್ರೆಸ್ ಮುಗ್ಗರಿಸಿ ಬಿದ್ದ ಹಾಗೆ ಬಿಜೆಪಿ ಕೂಡ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ‌ ಮುಗ್ಗರಿಸಿ ಬೀಳುತ್ತಾ ಅನ್ನೋದು 2019ರ ಚುನಾವಣೆ ಫಲಿತಾಂಶ ತಿಳಿಸಿದೆ.

Leave a Reply