13 ವರ್ಷಗಳಲ್ಲಿ ಬಾಂಗ್ಲಾ ವಲಸಿಗರ ಬಗ್ಗೆ ಬದಲಾಯ್ತು ಮಮತಾ ವಾದ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇವಲ ಅಸ್ಸಾಂ ಜನರಷ್ಟೇ ಅಲ್ಲದೇ ದೇಶದ ಬಹುತೇಕರ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಅಸ್ಸಾಂನಲ್ಲಿ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ಆಕ್ಷೇಪಿಸುತ್ತಿರುವುದು.

ಹೌದು, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಹಾಗೂ ಅಸ್ಸಾಂ ರಾಜ್ಯ ಸರ್ಕಾರ ಇಲ್ಲಿನ ಪ್ರಜೆಗಳ ನೋಂದಣಿ ನಡೆಸಿದ್ದು, ಅದರಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ಅಕ್ರಮವಾಗಿ ನೆಲೆಸಿರುವ ಸೂಚನೆ ನೀಡಿದೆ. ಸರ್ಕಾರದ ಈ ಕ್ರಮವನ್ನು ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸುತ್ತಿದ್ದು, ರಕ್ತಪಾತ ಹಾಗೂ ಹಿಂಸಾಚಾರದ ಎಚ್ಚರಿಕೆ ನೀಡಿದ್ದಾರೆ. ದೇಶದ ಭದ್ರತೆ ವಿಚಾರವಾಗಿ ನಡೆಯುತ್ತಿರುವ ಈ ಪ್ರಕ್ರಿಯೆ ವಿರೋಧಿಸುತ್ತಿರುವ ಮಮತಾ ಸಹಜವಾಗಿ ವಿಲನ್ ರೀತಿ ಬಿಂಬಿತರಾಗುತ್ತಿದ್ದಾರೆ.

ಮಮತಾ ಅವರ ಟೀಕೆಗೆ ಪ್ರತಿಯಾಗಿ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದು, 2005ರಲ್ಲಿ ಇದೇ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾದೇಶಿಗರು ವಲಸೆ ಬರುವುದನ್ನು ಖಂಡಿಸಿದ್ದನ್ನು ಈಗ ನೆನಪಿಸಿದ್ದಾರೆ.

2005ರಲ್ಲಿ ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಮಮತಾ ಆಗಿನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಭಾರತಕ್ಕೆ ಅಕ್ರಮವಾಗಿ ವಲಸೆ ಬರುತ್ತಿರುವುದು ದುರಂತ ಎಂದೇ ಬಣ್ಣಿಸಿದ್ದ ಮಮತಾ ಆಗಿನ ಸಿಪಿಎಂ ಸರ್ಕಾರದ ವಿರುದ್ಧ ಸವಾಲೆಸೆದಿದ್ದರು. ಅಲ್ಲದೆ ಇದೊಂದು ಗಂಭೀರ ವಿಚಾರವಾಗಿರುವುದರಿಂದ ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ನಿಲುವಳಿ ಮಂಡಿಸಿದ್ದರು. ಇದಕ್ಕೆ ಸಿಪಿಎಂ ಬೆಂಬಲಿತ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಅವಕಾಶ ನೀಡಲಿಲ್ಲ. ಆಗ ಆಕ್ರೋಶಗೊಂಡ ಮಮತಾ ಉಪ ಸ್ಪೀಕರ್ ಹಾಗೂ ಕಲಾಪ ಪ್ರಕ್ರಿಯೆ ಉಸ್ತುವಾರಿ ಹೊತ್ತಿದ್ದ ಚರಣ್ಜಿತ್ ಸಿಂಗ್ ಅತ್ವಾಲ್ ಅವರತ್ತ ಕಾಗದ ಎಸೆದು ರಂಪಾಟ ಮಾಡಿದ್ದರು. ದೀದಿಯ ಆಕ್ರೋಶಕ್ಕೆ ಇಡೀ ವಿಧಾನಸಭೆ ದಂಗಾಗಿತ್ತು. ಇನ್ನು ಮಮತಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆ ಸರಿಯಾದ ಕ್ರಮದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ಸ್ವೀಕಾರವಾಗಲಿಲ್ಲ.

ಹೀಗೆ ಅಕ್ರಮ ವಲಸಿಗರ ವಿರುದ್ಧ ಕೆಂಡಕಾರಿದ್ದ ಮಮತಾ ಈಗ ಅಸ್ಸಾಂ ವಿಚಾರದಲ್ಲಿ ವಲಸಿಗರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದಾಗ ತೋರಿದ ವರಸೆ ಅಧಿಕಾರ ಸಿಕ್ಕ ಮೇಲೆ ಬದಲಾಗಿದೆ. ಇದಕ್ಕೆ ಕಾರಣವೂ ಇದೆ.

2006ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಬೇಕಿತ್ತು. ಅಧಿಕಾರದಲ್ಲಿದ್ದ ಸಿಪಿಎಂ ಪ್ರಬಲ ಪಕ್ಷವಾಗಿ ಬೆಳೆದಿತ್ತು. ಹೀಗಾಗಿ 2005ರಲ್ಲಿ ಮಮತಾ ಬಾಂಗ್ಲಾ ವಲಸಿಗರ ವಿರುದ್ಧ ಕಿಡಿಕಾರಿದ್ದರು. ಪಶ್ಚಿಮ ಬಂಗಾಳದಲ್ಲಿ ಮುಸಲ್ಮಾನರು ಹಾಗೂ ಅಕ್ರಮ ಬಾಂಗ್ಲಾ ವಲಸಿಗರ ವೋಟ್ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಟಿಎಂಸಿಗೆ ಈ ಅಕ್ರಮ ವಳಸಿಗರೆ ಪ್ರಮುಖ ವೋಟ್ ಬ್ಯಾಂಕ್ ಆಗಿದ್ದು ಅಸ್ಸಾಂ ಅಕ್ರಮ ವಲಸಿಗರ ವಕಾಲತ್ತು ವಹಿಸುವಂತೆ ಮಾಡಿದೆ.

1 COMMENT

  1. ಸರ್ ಈ ಆರ್ಟಿಕಲ್​ ನಲ್ಲಿ ಅರುಣ್ ಜೇಟ್ಲಿ ಅವರನ್ನ ಮಾಜಿ ಸಚಿವ ಎಂದು ಬರೆಯಲಾಗಿದೆ. ದಯವಿಟ್ಟು ಕರೆಕ್ಷನ್ ಮಾಡಿ. ಅವರು ಕೇಂದ್ರದ ಹಾಲಿ ಹಣಕಾಸು ಸಚಿವ.

Leave a Reply