ಇಮ್ರಾನ್ ಖಾನ್ ಆಹ್ವಾನ ಕೊಟ್ಟರೂ ಮೋದಿ ಪಾಕಿಸ್ತಾನಕ್ಕೆ ಹೋಗೋದು ಡೌಟ್ ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದಲ್ಲಿ ನವಾಜ್ ಶರೀಫ್ ಸರ್ಕಾರದ ಅವಧಿ ಮುಗಿದು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊಹೊಮ್ಮಿದೆ. ಹೊಸ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗ್ತಿದೆ. ಇದೇ ಆಗಸ್ಟ್ 11 ರಂದು ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಾರ್ಕ್ ರಾಷ್ಟಗಳ ನಾಯಕರಿಗೆ ಆಹ್ವಾನ ನೀಡಲಾಗುತ್ತಿದ್ದು ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲು ನಿರ್ಧರಿಸಿದ್ದಾರೆ. ಆದರೆ ಪಾಕ್ ಆಹ್ವಾನ ಕೊಟ್ಟ ತಕ್ಷಣ ಮೋದಿ ಪಾಕ್ ಗೆ ಕುಣಿದುಕೊಂಡು ಹೋಗುತ್ತಾರಾ? ಆ ಸಾಧ್ಯತೆ ಕಡಿಮೆ. ಆದರೂ ಮೋದಿ ಪಾಕಿಸ್ತಾನ ಭೇಟಿ ವಿಚಾರದ ಹಿಂದೆ ಅನೇಕ ಲೆಕ್ಕಾಚಾರಗಳು ನಡೆಯುತ್ತಿವೆ. ಅವುಗಳನ್ನು ನೋಡುವುದಾದರೆ…

  • ಮೋದಿಗೆ ಭಯೋತ್ಪಾದಕರಿಂದ ಬೆದರಿಕೆ ಇರುವ ಕಾರಣಕ್ಕೆ ಇತ್ತೀಚಿಗೆ ಭದ್ರತೆ ಹೆಚ್ಚಳ ಮಾಡಲಾಗಿದೆ. ಈ ಸಮಯದಲ್ಲಿ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆ ಕಡಿಮೆ.
  • ಇನ್ನು ಇಮ್ರಾನ್ ಖಾನ್ ಪಾಕ್ ಸೇನಾ ಬಲದಿಂದ ಅಧಿಕಾರಕ್ಕೆ‌ ಬಂದಿದ್ದಾರೆ ಅನ್ನೋ ಮಾತಿದೆ. ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿರುವ ಸಂದರ್ಭದಲ್ಲಿ ಪಾಕ್ ಪ್ರವಾಸ ಸಾಧ್ಯತೆ ಕ್ಷೀಣಿಸಿದೆ.
  • ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ನಡೆಯಲಿದ್ದು ಪಾಕಿಸ್ತಾನಕ್ಕೆ ಭೇಟಿ ನೀಡಿ ವಿರೋಧ ಪಕ್ಷಗಳಿಗೆ ಟೀಕೆ ಮಾಡಲು ಅಸ್ತ್ರ ಕೊಡಲು ಬಿಜೆಪಿ ಸಿದ್ಧವಿಲ್ಲ. ನವಾಜ್ ಶರೀಫ್ ಭೇಟಿಯಾದ ನಂತರ ವಿರೋಧ ಪಕ್ಷಗಳು ಮೋದಿಯನ್ನು ಟೀಕೆ ಮಾಡಿದ್ದು ಇನ್ನು ಹಸಿಯಾಗಿಯೇ ಇದೆ.
  • ಭಯೋತ್ಪಾದನೆ ವಿರುದ್ಧ ಹೋರಾಡಿ ಆನಂತರ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡೋಣ ಎಂದು ಭಾರತ ಕಡ್ಡಿ ಮುರಿದಂತೆ ಹೇಳಿ ಪಾಕಿಸ್ತಾನದ ವಿಚಾರದಲ್ಲಿ ದಿಟ್ಟ ನಿಲುವು ತಳೆದಿದೆ. ಈ ಹಂತದಲ್ಲಿ ಭಾರತ ತನ್ನ ಪಟ್ಟು ಸಡಿಲಗೊಳಿಸುವ ಸಾಧ್ಯತೆ ಕಡಿಮೆ ಇದೆ.
  • ಇಮ್ರಾನ್ ಖಾನ್ ಗೆದ್ದ ಮೇಲೆ ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆಗೆ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ ಎಂದು ಹೇಳಿದ್ದರು, ಈ ಹಿಂದೆ ಇಮ್ರಾನ್ ಭಾರತದ ವಿರುದ್ಧ ಆಡಿದ ರೋಷಾವೇಷದ ಮಾತುಗಳನ್ನು ಭಾರತ ಮರೆತಿಲ್ಲ.
  • ಈ ಎಲ್ಲದರ ಮಧ್ಯೆ ಪಾಕಿಸ್ತಾನಕ್ಕೆ ನಿಜಕ್ಕೂ ಭಾರತದ ಜತೆಗಿನ ಸಂಬಂಧ ಸುಧಾರಿಸುವ ಆಸಕ್ತಿ ಇದ್ದರೆ, ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ನಿಲ್ಲಿಸಿ, ತನ್ನ ನೆಲದಲ್ಲಿರುವ ಉಗ್ರರ ದಮನ ಮಾಡಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಬೇಡಿಕೆಯನ್ನು ಭಾರತ ಮುಂದಿಡುವ ಸಾಧ್ಯತೆ ಹೆಚ್ಚಾಗಿದೆ.

Leave a Reply