ಬೆಂಗ್ಳೂರಿಂದಾಚೆಗೂ ಹೂಡಿಕೆ ಮಾಡಿ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

‘ಹೂಡಿಕೆದಾರರು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು’ ಇದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ ಹೂಡಿಕದಾರರ ಬಳಿ ಮಾಡಿಕೊಂಡ ಮನವಿ.

ಬೆಂಗಳೂರಿನಲ್ಲಿ ಇಂದು ನಡೆದ ಟೆಕ್ ಸಮ್ಮಿಟ್ 2018 (ತಂತ್ರಜ್ಞಾನ ಸಮಾವೇಶ) ರ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಐಟಿ ಬಿಟಿ ಕಂಪನಿಗಳ ಸಿಇಒಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಿಎಂ, ರಾಜ್ಯದ ಇತರೆ ಭಾಗಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕಂಪನಿಗಳಿಗೆ ಮನವಿ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗಿನ ಬೆನ್ನಲ್ಲೇ ಕುಮಾರಸ್ವಾಮಿ ಅವರು ಈ ಸಭೆಯಲ್ಲಿ ಬೆಂಗಳೂರಿಂದ ಹೊರ ಭಾಗಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪಿಸುವ ಬಗ್ಗೆ ವಿವಿಧ ಕಂಪನಿಗಳ ಸಿಎಒಗಳ ಬಳಿ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದ್ದಿಷ್ಟು…

‘ರಾಜ್ಯ ಸರ್ಕಾರ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮಗಳ ಸ್ಥಾಪನೆ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಲು ಉತ್ಸುಕವಾಗಿದೆ. ಈ ಹಿನ್ನೆಲೆಯಲ್ಲಿ ಈ ನಗರಗಳಲ್ಲಿ ಹೂಡಿಕೆ ಮಾಡುವ ಕಂಪೆನಿಗಳಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ. ಕೌಶಲ್ಯ ತರಬೇತಿಗೂ ಆದ್ಯತೆ ನೀಡಲಿದೆ. ಈ ವರ್ಷ ಆಯವ್ಯಯದಲ್ಲಿ ಇದಕ್ಕಾಗಿ 500 ಕೋಟಿ ರೂ. ಮೀಸಲಿಡಲಾಗಿದೆ. ಈ ಭಾಗದಲ್ಲಿ ಉದ್ಯಮಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ನೆರವಾಗಬೇಕು. ಸರ್ಕಾರ ನಿಮ್ಮ (ಕಂಪನಿಗಳ) ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಿದ್ಧವಿದೆ. ಕೈಗಾರಿಕೆಗಳ ಸ್ಥಾಪನೆಗೆ ಇರುವ ತೊಡಕುಗಳನ್ನು ನಿವಾರಿಸಲು ಮುಖ್ಯಮಂತ್ರಿಗಳ ಕಚೇರಿಯಲ್ಲಿಯೇ ವಿಶೇಷ ಘಟಕ ಸ್ಥಾಪಿಸಲಾಗುವುದು.

ರಾಜ್ಯ ಸರ್ಕಾರವು ಈ ವರ್ಷ ಆಯವ್ಯಯದಲ್ಲಿ ಘೋಷಿಸಿದಂತೆ ಚೀನಾದೊಂದಿಗೆ ಆರೋಗ್ಯಕರ ಸ್ಪರ್ಧೆ ಎಂಬ ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಬೀದರ್‍ನಲ್ಲಿ ಕೃಷಿಗೆ ಪೂರಕ ಯಂತ್ರೋಪಕರಣಗಳ ತಯಾರಿಕೆ, ಕಲಬುರಗಿಯಲ್ಲಿ ಸೌರ ವಿದ್ಯುತ್ ಉಪಕರಣಗಳ ಉದ್ಯಮ, ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿತ್ರದುರ್ಗದಲ್ಲಿ ಎಲ್‍ಇಡಿ ಹೀಗೆ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕೆಗಳ ಕ್ಲಸ್ಟರ್ ಸ್ಥಾಪಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಉದ್ಯಮಗಳನ್ನು ಸ್ಥಾಪಿಸಲು ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುವುದು.

ಕರ್ನಾಟಕ ಇನ್ನೋವೇಷನ್ ಹಬ್ ಎಂದು ಹೆಸರಾಗಿದೆ. ಈ ವಲಯಕ್ಕೆ ಬೆಂಬಲ ನೀಡಲು, ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ಇನ್ನೊವೇಷನ್ ಅಥಾರಿಟಿಯನ್ನು ಸ್ಥಾಪಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು.’

ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕೆ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್ ಉಪಸ್ಥಿತರಿದ್ದರು.

 

 

Leave a Reply