ನಗರ ಸ್ಥಳೀಯ ಸಂಸ್ಥೆ ಚುನಾವಣೆಗಿಲ್ಲ ಮೈತ್ರಿ! ಬುಡ ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿನ ದೋಸ್ತಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಬೇಡವೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಒಮ್ಮತದ ನಿರ್ಧಾರಕ್ಕೆ ಬಂದಿವೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಮೈತ್ರಿ ವಿಚಾರವಾಗಿ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿಯನ್ನು ಲೋಕಸಭೆಯಲ್ಲಿ ಬೇಕಾದರೆ ಒಟ್ಟಿಗೆ ಎದುರಿಸೋಣ ಆದರೆ ಈ ಚುನಾವಣೆಗೆ ಮೈತ್ರಿ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದು, ಮೈತ್ರಿ ಮಾತಿಗೆ ಪೂರ್ಣ ವಿರಾಮ ಬಿದ್ದಿದೆ.

ಈ ವಿಚಾರದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಇಚ್ಚಿಸದ ದಿನೇಶ್ ಅವರು ‘ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ದೇವೇಗೌಡರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಇಂದು ಭೇಟಿ ಮಾಡಿದೆ. ಇದು ಕೇವಲ ಸೌಹಾರ್ದ ಭೇಟಿ’ ಎಂದರು.

ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಆಂತರಿಕ ಅಸಮಾಧಾನವಿರುವ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೂ ಮೈತ್ರಿ ಎಂದರೆ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇನ್ನು ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ನೇರವಾಗಿ ತಮ್ಮ ಪಕ್ಷಕ್ಕಾಗಿ ಶ್ರಮಿಸಲು ಅವಕಾಶ ಸಿಗುತ್ತದೆ. ಮೈತ್ರಿಯಲ್ಲಿ ಇಷ್ಟವಿಲ್ಲದಿದ್ದರೂ ಬೇರೆ ಪಕ್ಷದ ಅಭ್ಯರ್ಥಿಗಾಗಿ ದುಡಿಯಲು ಒಲ್ಲದ ಮನಸ್ಸಿನಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹೀಗಾಗಿ ಸದ್ಯಕ್ಕೆ ಈ ಮೈತ್ರಿ ವಿಚಾರ ಕೈ ಬಿಟ್ಟಿರುವುದು ಈ ಸಮಸ್ಯೆ ಉದ್ಭವಿಸಲು ಅವಕಾಶ ಇಲ್ಲದಂತಾಗಿದೆ.

ಇದರ ಮೂಲಕ ಎರಡೂ ಪಕ್ಷಗಳು ಸ್ಥಳೀಯವಾಗಿ ತಮ್ಮ ಬೇರು ಮತ್ತಷ್ಟು ಬಲಪಡಿಸಿಕೊಳ್ಳುವುದಲ್ಲದೆ, ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗುತ್ತದೆ.

Leave a Reply