ಮೈತ್ರಿ ಬಿರುಕಲ್ಲೇ ಅಧಿಕಾರದ ಬಿಲ ಹುಡುಕುತ್ತಿರೋ ಬಿಜೆಪಿ!

ತಿನ್ನೋಕೆ ಅನ್ನ ಇಲ್ಲದಿದ್ದರೂ, ಕುಡಿಯೋದಿಕ್ಕೆ ನೀರು ಸಿಗದಿದ್ದರೂ ಎರಡುಮೂರು ದಿನ ಹೇಗೋ ಹಸಿವು, ನೀರಡಿಕೆ ತಡೆದುಕೊಂಡು ಕಾಲ ತಳ್ಳಿಬಿಡಬಹುದು. ಆದರೆ ಈ ಅಧಿಕಾರದ ಹಸಿವು ಇದೆಯಲ್ಲ, ಅದನ್ನು ಮಾತ್ರ ಒಂದು ದಿನವೂ ತಡೆದುಕೊಂಡು ಬದುಕೋದಿಕ್ಕೆ ಸಾಧ್ಯವಿಲ್ಲ. ಅಧಿಕಾರದ ಹಸಿವು ಅಂತಿಂಥದ್ದಲ್ಲ. ಕ್ಷಣಕ್ಷಣಕ್ಕೂ ಇಮ್ಮಡಿ ಆಗುತ್ತದೆ, ಮುಮ್ಮಡಿ ಆಗುತ್ತದೆ. ಅದೊಂಥರಾ ರಣಹಸಿವು. ಸಿಕ್ಕಷ್ಟು ಬೇಕು, ಬೇಕು ಎನ್ನುವ ಹಪಾಹಪಿ ಸೃಷ್ಟಿಸುವ ಈ ಅಧಿಕಾರವೆಂಬ ಮಾಯೆ, ಸಿಗದಿದ್ದರೆ ಏನೆಲ್ಲ ಅವಾಂತರಗಳನ್ನು ಉಕ್ಕಿಸಬೇಡ?!

ಎಲ್ಲ ಕ್ಷೇತ್ರಗಳಲ್ಲೂ ಪಾರಮ್ಯ ಮೆರೆವ ಈ ಅಧಿಕಾರ ರಾಜಕೀಯ ರಂಗದಲ್ಲಂತೂ ಗೆಜ್ಜೆ ಬಿಚ್ಚುವ ಮಾತೇ ಇಲ್ಲ. ಅಲ್ಲಾವುದ್ದೀನನ ಅದ್ಭುತ ದೀಪವನ್ನೂ ಮಸುಕಾಗಿಸುವ ಈ ಮಾಯಾಜಾಲಕ್ಕೆ ಸಿಗದವರೇ ಇಲ್ಲ. ಅದು ಯಾವುದೇ ರಾಜಕೀಯ ಪಕ್ಷ ಇರಬಹುದು. ಎಲ್ಲರಿಗೂ ಅಧಿಕಾರ ಬೇಕು. ಆದರೆ ಇರುವುದು ಮಾತ್ರ ಸೀಮಿತ ಅವಕಾಶ. ಸಿಗದವರು ಪರದಾಡುತ್ತಾರೆ. ಸಿಕ್ಕವರು ನೆಗೆದಾಡುತ್ತಾರೆ. ಒಮ್ಮೆ ಅದರ ರುಚಿ ಅನುಭವಿಸಿದವರು, ಸಿಕ್ಕಿ ಕಳೆದುಕೊಂಡವರ ಕಾಲ್ಗಳಂತೂ ಭೂಮಿ ಮೇಲೆ ನಿಲ್ಲುವುದೇ ಇಲ್ಲ. ಗಾಳಿಯಲ್ಲೇ ಥೈ, ಥಕ ಮಾಡುತ್ತಿರುತ್ತಾರೆ. ಕೈಗೆ ಸಿಕ್ಕಾಗ ಅಧಿಕಾರದ ಬೆಲೆ ಅರ್ಥವಾಗುವುದಿಲ್ಲ. ಕಳೆದುಕೊಂಡಾಗ ಗೊತ್ತಾಗಿರುತ್ತದೆ. ಆದರೆ ಏನೂ ಮಾಡಲಾಗುವುದಿಲ್ಲ. ಆಗೇನು ಮಾಡಿದರೂ ಗಾಳಿಗುಳ್ಳೆ ಹಿಡಿವವರ ವ್ಯರ್ಥಪ್ರಲಾಪದಂತಾಗುತ್ತದೆ.

ಪ್ರಚಲಿತ ರಾಜಕೀಯ ವಿದ್ಯಮಾನಕ್ಕೆ ಬೆಸೆದುಕೊಂಡಿರುವ ಅಧಿಕಾರ ಬೇಟೆಯ ಸುತ್ತ ಈ ಪೀಠಿಕೆ ಸುತ್ತುತ್ತದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮೂರು ತಿಂಗಳು ಕಳೆದರೂ ತೆವಳುತ್ತಲೇ ಮುಗ್ಗರಿಸುತ್ತಾ ಸಾಗುತ್ತಿದೆ. ಜೆಡಿಎಸ್ ಏರಿಗೇಳಿದರೆ ಕಾಂಗ್ರೆಸ್ ನೀರಿಗಿಳಿಯುತ್ತಿದೆ. ಮೈತ್ರಿ ಗಾಡಿ ನೊಗ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎರಡೂ ಚಕ್ರಗಳಿಗೆ (ಕಾಂಗ್ರೆಸ್, ಜೆಡಿಎಸ್) ಕೀಲೆಣ್ಣೆ ಹಾಕುವಷ್ಟೊತ್ತಿಗೆ ತಮ್ಮ ಕೀಲುಗಳೇ ಮುರಿದಂತೆ ಭಾಸವಾಗುತ್ತಿದೆ. ಸ್ವಪಕ್ಷ, ಮಿತ್ರಪಕ್ಷದಲ್ಲಿ ಸತತ ಅನಾವರಣಗೊಳ್ಳುತ್ತಿರುವ ನಾನಾ ಸ್ವರೂಪ, ಬಣ್ಣದ ರಗಳೆ, ವರಾತವೇ ಸಾಕು-ಬೇಕಾಗಿ ಹೋಗಿದೆ. ಅದರ ಮಧ್ಯೆ ಪ್ರತಿಪಕ್ಷ ಬಿಜೆಪಿ ತನ್ನ ಸ್ಥಾನ ಮತ್ತು ಕಾಯಕನಿಷ್ಠೆಗೆ ಅನುಗುಣವಾಗಿ ನಾನಾ ವಿಚಾರಗಳಲ್ಲಿ ಒಡ್ಡುತ್ತಿರುವ ಪ್ರತಿರೋಧ, ಕೊಡುತ್ತಿರುವ ಕಾಟ, ಹೊಡತ ಅವರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ. ಆಡಳಿತ ಪಕ್ಷದ್ದೂ ತಪ್ಪಿಲ್ಲ, ಪ್ರತಿಪಕ್ಷದ್ದೂ ತಪ್ಪಿಲ್ಲ. ಅಸ್ತಿತ್ವ ರಕ್ಷಣೆ, ಭವಿಷ್ಯ ದೃಷ್ಟಿಕೋನ ಅವರವರ ಪಾತ್ರಗಳ ಪೋಷಣೆ, ಪಾಲನೆಗೆ ಅನಿವಾರ್ಯ ಪ್ರೇರಕ. ಹೀಗಾಗಿ ಯಾರೂ ಸುಮ್ಮನಿರುವಂತಿಲ್ಲ. ಅದು ರಾಜಕೀಯದ ಜಾಯಮಾನವೂ ಅಲ್ಲ. ಹೀಗಾಗಿ ರಾಜ್ಯ ರಾಜಕಾರಣ ಸೂರ್ಯಗೆಂಪಿನಂತೆ ರಂಗು-ರಂಗಾಗಿ ಕಾಣುತ್ತಿದೆ. ಆದರೆ ಅದು ಮೂಡಣದ್ದೋ ಅಥವಾ ಪಡುವಣದ್ದೋ ಎಂದು ಗೊತ್ತಾಗದಿರುವಷ್ಟು ಗೊಂದಲದ ಮೋಡಗಳ ತೆರೆಮರೆ ಆಟದಲ್ಲಿ!

ಕೆಲವೇ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಕೋರ್ ಕಮಿಟಿ ಸಭೆಯ ವೃತ್ತಾಂತದ ಮೂಲಕ ಹೈಕಮಾಂಡ್‌ಗೆ ಒಂದು ಸಂದೇಶ ರವಾನೆ ಮಾಡಿದ್ದರು. ‘ನೀವು ಹೂಂ ಅಂದರೆ ಆಪರೇಷನ್ ಕಮಲ ಮಾಡಿ, ಅಧಿಕಾರ ಹಿಡಿಯಲು ಸಿದ್ಧ’ಎಂದು. ಅದೇ ರೀತಿ ಮೊನ್ನೆ ನಡೆದ ಬೆಂಗಳೂರು ಕಾರ್ಯಕಾರಿಣಿಯಲ್ಲಿ ಸಿಎಂ ಕುಮಾರಸ್ವಾಮಿ ಅಗ್ರಜ ಎಚ್.ಡಿ. ರೇವಣ್ಣನವರ ಮಿತಿಮೀರಿದ ಹಸ್ತಕ್ಷೇಪದಿಂದ ಕಾಂಗ್ರೆಸ್-ಜೆಡಿಎಸ್ ನಡುವೆ ಹೊಗೆಯಾಡುತ್ತಿರುವ ಕಿಡಿ ಕೌರವ-ಪಾಂಡವರ ಸ್ವರೂಪದ ಕಾಳಗಕ್ಕೆ ನಾಂದಿಯಾಗಿ ಈ ಸರಕಾರವನ್ನು ಆಪೋಶನ ತೆಗೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಧೃತರಾಷ್ಟ್ರ ತಬ್ಬುಗೆಯಂತಿರುವ ಈ ಮೈತ್ರಿ ಸರಕಾರವೂ ಯಾವಾಗ ಬೇಕಾದರೂ ಪುಡಿಪುಡಿಯಾಗಿ ಉದುರಿ ಹೋಗಬಹುದು. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು, ಯಡಿಯೂರಪ್ಪನವರು ಸಿಎಂ ಆಗಬಹುದು ಎಂದಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳದಿರುವ ತೀರ್ಮಾನಕ್ಕೆ ಬಂದ ಹೊತ್ತಿನಲ್ಲೇ ಈ ನಾಯಕರು ಆಡಿರುವ ಮಾತುಗಳಲ್ಲಿ ಎಷ್ಟು ಸತ್ಯವಿದೆಯೋ, ಮಿಥ್ಯೆಯಿದೆಯೋ ಅದು ಬೇರೆ ಮಾತು. ಆದರೆ ಅವರು ಹಾಗೆ ಯೋಚನೆ ಮಾಡುವ ತಾಕತ್ತನ್ನು ಮೈತ್ರಿ ಸರಕಾರದ ಗೊಂದಲಗಳು ಪ್ರಸಾದ ಸ್ವರೂಪದಲ್ಲಿ ವಿನಿಯೋಗ ಮಾಡುತ್ತಿರುವುದಂತೂ ಸತ್ಯ.

ಪ್ರತಿಯೊಬ್ಬ ರಾಜಕಾರಣಿಗೂ, ರಾಜಕೀಯ ಪಕ್ಷಕ್ಕೂ ತನ್ನದೇ ಆದ ಚಿಂತನೆಗಳು ಇರುತ್ತವೆ, ತಂತ್ರಗಳು ಇರುತ್ತವೆ, ಪ್ರತಿತಂತ್ರಗಳೂ ಇರುತ್ತದೆ. ಅವರವರ ಜ್ಞಾನ ವಿಸ್ತಾರಕ್ಕೆ, ಮೂಗಿನ ನೇರಕ್ಕೆ, ಅವಕಾಶಗಳ ಹರಿವಾಣಕ್ಕೆ ಅನುಗುಣವಾಗಿ ಲೆಕ್ಕಾಚಾರಗಳನ್ನು ಹೆಣೆಯುತ್ತಿರುತ್ತಾರೆ. ಹೀಗಾಗಿ ಯಡಿಯೂರಪ್ಪನವರು, ಸದಾನಂದಗೌಡರು ಈ ವಾಗ್ದಾಳಗಳನ್ನು ಸುಖಾಸುಮ್ಮನೆ ಉರುಳಿಸಿಲ್ಲ. ಅವರು ಎತ್ತಿರುವ ಅಂಶಗಳು, ಗರಿಗೆರಿರುವ ರಾಜಕೀಯ ಬೆಳವಣಿಗೆಗಳು ಅವರ ಆಶಯಕ್ಕೆ ಇಂಬುಗೊಟ್ಟಿದ್ದರೆ ಅದರಲ್ಲಿ ಅತಿಶಯವೇನೂ ಇಲ್ಲ. ಇದು ಪ್ರತಿಪಕ್ಷದ ಆತ್ಮವಿಶ್ವಾಸವನ್ನು ಎಷ್ಟರಮಟ್ಟಿಗೆ ಹೆಚ್ಚಿಸಿದೆಯೆಂದರೆ ಯಡಿಯೂರಪ್ಪನವರು ಮೇಲಿಂದ ಮೇಲೆ ಬಿಜೆಪಿ ವರಿಷ್ಠರಲ್ಲಿ ಪ್ರಸ್ತಾಪವನ್ನಿಡುತ್ತಾ ಒಂದೇ ಒಂದು ಹುಕುಂಗಾಗಿ ಕಾಯುತ್ತಿದ್ದಾರೆ. ಲೋಕಸಭೆ ಚುನಾವಣೆ ಒಂದಿಲ್ಲದೆ ಹೋಗಿದಿದ್ದರೆ ಅದು ಸಕಾರಾತ್ಮಕವೋ, ನಕಾರಾತ್ಮಕವೋ ಅದನ್ನೊಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನವನ್ನಂತೂ ಅವರು ಮಾಡದೇ ಇರುತ್ತಿರಲಿಲ್ಲ.

ಹಾಗೆ ನೋಡಿದರೆ ಯಡಿಯೂರಪ್ಪನವರು ಎತ್ತಿರುವ ಬಹುಮುಖ್ಯ ಹಾಗೂ ಸತ್ಯಪ್ರಚೋದಕವೂ ಆದ ಅಂಶ ಕುಮಾರಸ್ವಾಮಿ ಸಹೋದರ ರೇವಣ್ಣನವರು ತಮ್ಮ ಖಾತೆಗಳಲ್ಲದೇ ಅನ್ಯ ಇಲಾಖೆಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು. ಪ್ರತಿಪಕ್ಷ ಬಿಜೆಪಿಗೇ ಇದು ಮೈತ್ರಿ ಸರಕಾರದ ಮಾರಕ ಅಂಶವಾಗಿ ಕಂಡಿದ್ದರೆ, ಇನ್ನು ಸರಕಾರದ ಭಾಗವಾಗಿರುವ ಕಾಂಗ್ರೆಸ್ಸಿಗೆ ಯಾವ ರೀತಿ ಗೋಚರಿಸಿರಬೇಡ? ಹೀಗಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಚಿವ ಡಿ.ಕೆ. ಶಿವಕುಮಾರ್ ಈ ಬಗ್ಗೆ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಜೆಡಿಎಸ್ ಪಾಲನಲ್ಲಿ ಮಂತ್ರಿಗಳಾಗಿರುವ ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು, ಮಹೇಶ್ ಕೊನೆಗೆ ತಮ್ಮ ಸಂಬಂಧಿಕರೇ ಆದ ಡಿ.ಸಿ. ತಮ್ಮಣ್ಣ ಇಲಾಖೆಗಳಲ್ಲೂ ಮೂಗು ತೂರಿಸುತ್ತಿದ್ದಾರೆ. ತೀರಾ ಇತ್ತೀಚೆಗೆ ಡಿ.ಕೆ. ಶಿವಕುಮಾರ್, ಜಿ.ಟಿ. ದೇವೇಗೌಡ ಹಾಗೂ ಮಹೇಶ್ ಪ್ರತಿನಿಧಿಸುವ ಕ್ರಮವಾಗಿ ವೈದ್ಯ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ಇತ್ತು. ಈ ಸಭೆಗೂ ಎಚ್.ಡಿ. ರೇವಣ್ಣನವರಿಗೂ ಯಾವುದೇ ಸಂಬಂಧ ಇರಲಿಲ್ಲ. ಅವರದು ಲೋಕೋಪಯೋಗಿ ಮತ್ತು ಇಂಧನ ಖಾತೆ. ಆದರೆ ರೇವಣ್ಣ ಈ ಸಭೆಯಲ್ಲಿ ಹಾಜರ್. ಜತೆಗೆ ತಾವು ಪ್ರತಿನಿಧಿಸೋ ಹಾಸನ ಶಿಕ್ಷಣ ಸಂಸ್ಥೆಗಳನ್ನು ಮಾದರಿಯಾಗಿಟ್ಟುಕೊಂಡು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕೆಂಬ ಬಿಟ್ಟಿ ಬೋಧನೆ. ಸಂಬಂಧಪಡದ ರೇವಣ್ಣನವರ ಈ ವರ್ತನೆ ಅಲ್ಲಿದ್ದ ಸಂಬಂಧಪಟ್ಟ ಸಚಿವರ ಮೈಮನಗಳಲ್ಲಿ ಆಕ್ರೋಶದ ಜ್ವಾಲೆ ಸ್ಫುರಿಸಿತ್ತು. ಆದರೆ ಹಲ್ಲು ಅದುಮಿ ತಡೆದುಕೊಂಡರು, ಈ ಜ್ವಾಲೆ ಎಲ್ಲಿ ಮೈತ್ರಿ ಸರಕಾರವನ್ನು ಸುಡುತ್ತದೋ ಎಂದು. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಇಂಥ ಅನೇಕ ಪ್ರಸಂಗಗಳು ದೂರು ಸ್ವರೂಪದಲ್ಲಿ ಸಿಎಂ ಕುಮಾರಸ್ವಾಮಿ ಕಿವಿಗೆ ಬಿದ್ದಿದೆ. ದೇವೇಗೌಡರ ಗಮನಕ್ಕೂ ಬಂದಿದೆ. ಈ ರೀತಿಯ ಮುಜುಗರ ಪರಿಸ್ಥಿತಿಗೆ ಅವಕಾಶ ಕೊಡಬಾರದೆಂಬ ಕುಮಾರಸ್ವಾಮಿ ಅವರ ಹಿತನುಡಿಗಳು ರೇವಣ್ಣನವರ ಭಂಡಕಿವುಡಿಗೆ ತಾಕುತ್ತಿಲ್ಲ. ಆದರೆ ಎಲ್ಲಕ್ಕೂ ಒಂದು ಮಿತಿ ಇರುತ್ತದೆ. ಜೆಡಿಎಸ್‌ನವರು ಭಿಡೆಗೆ ಬಿದ್ದು ಸಹಿಸಿಕೊಳ್ಳಬಹುದು. ಆದರೆ ಕಾಂಗ್ರೆಸ್‌ನವರಿಗೆ ಇದೇ ಮಾತು ಹೇಳುವಂತಿಲ್ಲ. ಒಳಗೊಳಗೇ ಕೊತಕೊತ ಕುದಿಯುತ್ತಿರುವುದು ಯಾವುದೇ ಸಂದರ್ಭದಲ್ಲೂ ಸ್ಫೋಟಿಸಬಹುದು. ಹೀಗಾಗಿ ಸಚಿವರ ವಲಯದಲ್ಲಿ ಒಂದು ಮಾತು ಹಬ್ಬಿದೆ. ಈ ಸರಕಾರಕ್ಕೆ ನಾಳೆಯೇನಾದರೂ ಗಂಡಾಂತರ ಬಂದರೆ ಅದಕ್ಕೆ ರೇವಣ್ಣನವರೇ ಕಾರಣರಾಗಿರುತ್ತಾರೆ ಎಂದು. ಅದು ಪ್ರತಿಪಕ್ಷ ನಾಯಕ ಯಡಿಯೂರಪ್ಪನವರ ಮಾತಿನಲ್ಲೂ ಪ್ರತಿಫಲನವಾಗಿದೆ ಎಂದರೆ ರೇವಣ್ಣನವರ ಅನ್ಯ ಇಲಾಖೆಗಳಲ್ಲಿ ಕೈಯಾಡಿಸುವಿಕೆ ಇನ್ನೆಂಥ ಮಟ್ಟಕ್ಕಿರಬೇಡ?!

ಯಡಿಯೂರಪ್ಪ ಮತ್ತು ಸದಾನಂದಗೌಡರಂಥವರ ಬಿಜೆಪಿ ಸರಕಾರ ಮರುಸ್ಥಾಪನೆ ವಿಶ್ವಾಾಸಕ್ಕೆ ಕಾರಣ ಕಾಂಗ್ರೆಸ್ ಪಾಳೆಯದಲ್ಲಿ ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯನವರ ವಲಯದಲ್ಲಿ ಸುಪ್ತವಾಗಿ ಹೆಪ್ಪುಗಟ್ಟುತ್ತಿರುವ ಹತಾಶೆ, ಅಸಹಿಷ್ಣುತೆ. ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಸೋಲನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಾದಾಮಿ ಗೆಲುವು ಈ ನೋವನ್ನು ಮರೆಸಿಲ್ಲ. ನೋವಿನ ಮಂಥನದಲ್ಲಿ ಹೈರಾಣಾಗಿ ಹೋಗಿದ್ದಾರೆ. ಯಾರಲ್ಲೂ ಹೇಳಿಕೊಳ್ಳಲಾಗದ, ಒಳಗೆ ಅನುಭವಿಸಲಾಗದ ಸ್ಥಿತಿ. ನಾನಾ ಭಾಗ್ಯಗಳನ್ನು ಕೊಟ್ಟರೂ ಕಾಂಗ್ರೆಸ್‌ಗೆ ಏಕಾಂಗಿಯಾಗಿ ಅಧಿಕಾರ, ತಮಗೆ ಸಿಎಂ ಪಟ್ಟ ಮತ್ತೆ ಸಿಗದೇ ಹೋದದ್ದು ಒಂದು ಕಡೆಯಾದರೆ, ತಮ್ಮ ರಾಜಕೀಯ ಕಡುವೈರಿ ದೇವೇಗೌಡರ ಪುತ್ರ ಕುಮಾರಸ್ವಾಾಮಿ ಆ ಪೀಠದಲ್ಲಿ ಕೂತದ್ದು ಅವರನ್ನು ಒಳಗೊಳಗೆ ಕೊತಕೊತನೆ ಕುದಿಯುವಂತೆ ಮಾಡಿದೆ. ಇಂಥ ಸನ್ನಿವೇಶದಲ್ಲಿ ದೇವೇಗೌಡರ ಕುಟುಂಬ ಕಂಡರಾಗದ ಕಾಂಗ್ರೆಸ್ ಶಾಸಕರು, ಮಾಜಿ ಸಚಿವರು, ಸಚಿವ ಸ್ಥಾನ ವಂಚಿತರಾದವರು ಹೇಳುವ ದೂರು ಅವರಿಗೆ ಅಪ್ಯಾಯಮಾನವಾಗಿ ಕಾಣುತ್ತದೆ.

ವರ್ಗಾವಣೆ, ನೀತಿ-ನಿರೂಪಣೆ ವಿಚಾರ, ರೇವಣ್ಣನವರ ಹಸ್ತಕ್ಷೇಪ ಕುರಿತು ಅವರೆತ್ತುವ ಆಕ್ಷೇಪಗಳು ಸಿದ್ದರಾಮಯ್ಯನವರ ಅಸಹನೆಯನ್ನು ಮುಮ್ಮಡಿ ಮಾಡುತ್ತವೆ. ಇಂಥ ಸಿದ್ದರಾಮಯ್ಯನವರು ಇಂದಲ್ಲ ನಾಳೆ ಮೈತ್ರಿ ಸರಕಾರಕ್ಕೆ ಮುಳುಗು ನೀರಾಗುತ್ತಾಾರೆ ಎಂಬುದು ಬಿಜೆಪಿ ಅಧಿಕಾರ ವಿಶ್ವಾಸದ ಮುಖ್ಯಅಂಶಗಳಲ್ಲಿ ಒಂದು. ಅಧಿಕಾರಸ್ಥರು ಮಾಡುವ ತಪ್ಪು ಒಂದು ಕಡೆಯಾದರೆ, ಅಧಿಕಾರ ವಂಚಿತರ ಹತಾಶೆ ಮತ್ತೊಂದು ಕಡೆ – ಇವೆರಡು ಎಲ್ಲೋ ಒಂದು ಕಡೆ ಮಿಳಿತಗೊಂಡು ಬಿಜೆಪಿ ಸರಕಾರದ ಪ್ರತಿಷ್ಠಾಪನೆಗೆ ಎರಕ ಹೊಯ್ಯುತ್ತದೆ ಎಂಬುದು ಅವರ ನಿರೀಕ್ಷೆ. ಹೀಗಾಗಿಯೇ ಯಡಿಯೂರಪ್ಪನವರು ಅಧಿಕಾರದ ಕನಸನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಸದಾನಂದಗೌಡರಂಥವರು ಆ ಕನಸಿಗೆ ಮತ್ತಷ್ಟು ಬಣ್ಣ ತುಂಬುತ್ತಿದ್ದಾರೆ.

ಇನ್ನೊಂದು ಕಡೆ ಸಾಲ ಮನ್ನಾ ವಿಚಾರವನ್ನು ನುಂಗಿ ನೀರು ಕುಡಿದ ಪ್ರತ್ಯೇಕ ರಾಜ್ಯ ಕೂಗು ಹುಟ್ಟಿದಲ್ಲೇ ಸತ್ತು ಹೋಯಿತಾದರೂ ಉತ್ತರ ಕರ್ನಾಟಕ ಭಾಗದ ಜನರ ಮನಪಲ್ಲಟ ಮಾಡುವ ಬಿಜೆಪಿ ಹುನ್ನಾರವನ್ನು ಕೊಂಚ ಮಟ್ಟಿಗೆ ಯಶಗೊಳಿಸಿದೆ. ಅದರ ಜತೆಜತೆಗೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸತ್ವ ಕಳೆದುಕೊಂಡಿರುವುದರ ಹಿಂದೆ ಬಿಜೆಪಿಗೆ, ಅದರಲ್ಲೂ ಯಡಿಯೂರಪ್ಪನವರಿಗೆ ಅಧಿಕಾರ ಕೈತಪ್ಪಿ ಹೋದದ್ದರ ಪಶ್ಚಾತ್ತಾಪದ ಅರಿವು ಕೆಲಸ ಮಾಡಿದೆ. ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದು ಕಡೆ ಯಡಿಯೂರಪ್ಪ ಇಬ್ಬರ ಅಧಿಕಾರಕ್ಕೂ ಮುಳುವಾದದ್ದು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ. ಈಗ ಸಿದ್ದರಾಮಯ್ಯನವರಿಗೆ ಅಧಿಕಾರ ದಕ್ಕದೇ ಹೋಗಿದ್ದರೂ ಕಾಂಗ್ರೆಸ್‌ಗೆ ಪಾಲು ಸಿಕ್ಕಿರುವುದರಿಂದ ಅಲ್ಪ ಸಮಾಧಾನಕ್ಕೆ ಕಾರಣವಾಗಿದೆ. ಆದರೆ ಅಧಿಕಾರದ ಹೊಸ್ತಿಲಲ್ಲಿ ಎಡವಿ ಬಿದ್ದ ಯಡಿಯೂರಪ್ಪನವರ ಬಗ್ಗೆ ಲಿಂಗಾಯತ ವಲಯದಲ್ಲಿ ಸೃಷ್ಟಿಯಾದ ಅನುಕಂಪದ ತಾಪ ಹಾಗೇ ಮುಂದುವರಿದಿದೆ. ಇದರೊಳಗೆ ಅಧಿಕಾರದ ತಾವು ಹುಡುಕಿಕೊಳ್ಳಲು ಯಡಿಯೂರಪ್ಪನವರು ನೋಡುತ್ತಿದ್ದಾರೆ.

ಇಲ್ಲಿ ಇನ್ನೂ ಒಂದು ವಿಚಾರ. ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಾಳೆಯದಲ್ಲೂ ಒಲವಿಲ್ಲ. ಲೋಕಸಭೆ ಚುನಾವಣೆ ಮೈತ್ರಿ ಬಗ್ಗೆ ಮಾತಾನಾಡುತ್ತಲೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೈಕೈ ಮಿಲಾಯಿಸಲು ಮಸಲತ್ತು ನಡೆದಿದೆ. ಒಮ್ಮೆ ಬೇಡ ಎನ್ನುತ್ತಾರೆ, ಇನ್ನೊಮ್ಮೆ ‘ಸ್ನೇಹ ಸಂಘರ್ಷ’ ಎನ್ನುತ್ತಾರೆ. ಮಗದೊಮ್ಮೆ ಅಸ್ತಿತ್ವದ ಪ್ರಶ್ನೆ ಆಗಿರುವುದರಿಂದ ಬಡಿದಾಡೋಣ ಎನ್ನುತ್ತಾರೆ. ಈಗಲೇ ಏರ್ಪಡದ ಮೈತ್ರಿ ಇನ್ನೂ ಲೋಕಸಭೆಯಲ್ಲಿ ಏರ್ಪಡುವುದೇ ಎಂಬ ಅನುಮಾನವೇ ಬಿಜೆಪಿಯಲ್ಲಿ ಪುಳಕ ಮೂಡಿಸಿದೆ. ಆ ಪುಳಕವನ್ನು ಆಪರೇಷನ್ ಕಮಲದ ಮೂಲಕ ಸರಕಾರ ರಚನೆಯಲ್ಲಿ ಪರಿಸಮಾಪ್ತಿ ಮಾಡಬೇಕೆಂಬುದು ಯಡಿಯೂರಪ್ಪನವರ ತವಕ. ಆದರೆ ವರಿಷ್ಠರು ಅದಕ್ಕೆ ಒಪ್ಪುುತ್ತಿಲ್ಲ. ಲೋಕಸಭೆ ಚುನಾವಣೆ ಮುಗಿಯುವವರೆಗೂ ಕಾಯಿರಿ ಎಂದು ಹುಕುಂ ಚಲಾಯಿಸಿದ್ದಾರೆ. ಲೋಕಸಭೆ ಚುನಾವಣೆ ನಂತರ ಪರ್ಯಾಯ ಸರಕಾರ ರಚನೆಗೆ ಬೇಕಾದ ‘ಮಾರ್ಗೋಪಾಯ’ಗಳ ನೀಲನಕ್ಷೆ ಈಗಾಗಲೇ ಸಿದ್ಧವಾಗಿದೆ. ಅನುಷ್ಠಾಾನಕ್ಕೆ ಬರುವುದೊಂದು ಬಾಕಿ. ಅದಕ್ಕೆ ಲೋಕಸಭೆ ಚುನಾವಣೆಯೇ ಕಾಲಮಿತಿ. ಹೀಗಾಗಿ ಮೈತ್ರಿ ಸರಕಾರದಲ್ಲಿ ಏರ್ಪಡುವ ಒಂದೊಂದೇ ಬಿರುಕಿನಲ್ಲಿ ಅಧಿಕಾರದ ಬಿಲ ಹುಡುಕಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಈಗಿನ ಪರಿಸ್ಥಿತಿಯೇ ಮುಂದುವರಿದರೆ ಸಾಕಾರ. ಒಂದೊಮ್ಮೆ ಮೈತ್ರಿ ಸರಕಾರದ ಕಾರುಬಾರಿನಲ್ಲಿ ಸುಧಾರಣೆಯಾದರೆ ಅದಕ್ಕೆ ಸಂಚಕಾರ. ಅದರೆ ನಾಳೆ ಹೀಗೇ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅಸಾಧ್ಯಗಳ ನಡುವೆ ಸಾಧ್ಯತೆಯನ್ನು ಸಾಕಾರಗೊಳಿಸುವುದೇ ರಾಜಕಾರಣ. ಏನೂ ಬೇಕಾದರೂ ಆಗಬಹುದು.

ಲಗೋರಿ: ಸಿಕ್ಕ ಅವಕಾಶಗಳೆಲ್ಲ ಸಫಲವಾಗದೆಂದು ಬಂದ ಅವಕಾಶ ತಿರಸ್ಕರಿಸುವುದು ಮೂರ್ಖತನ.

Leave a Reply