ಸಿದ್ದರಾಮಯ್ಯ ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್:

‘ನಾನು ಇನ್ಮುಂದೆ ಯಾವುದೇ ಕಾರಣಕ್ಕೂ ಚುನಾವಣಾ ರಾಜಕೀಯ ಮಾಡೋದಿಲ್ಲ, ಆದರೆ ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ…’ ಇದು ದೆಹಲಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆ ಅನೌಪಚಾರಿಕ ಮಾತುಕತೆ ವೇಳೆ ಹೇಳಿದ ಮಾತು.

ಹೀಗೆ ಚುನಾವಣಾ ರಾಜಕೀಯದಿಂದ ದೂರವಿರುವುದಾಗಿ ಘೋಷಣೆ ಮಾಡಲು ಕಾರಣ ಇದೆ. ಸದ್ಯ ಬಾದಾಮಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಈ ಶಾಸಕ ಸ್ಥಾನದ ಅವಧಿ ಮುಗಿಯುವ ವೇಳೆಗೆ 75 ವರ್ಷ ಪೂರ್ಣವಾಗಲಿದೆ ಅನ್ನೋದು ಅವರ ನಿರ್ಧಾರಕ್ಕೆ ಕಾರಣ. ಆದ್ರೆ ಈ ಹಿಂದೆಯೂ ಸಿಎಂ ಆಗಿದ್ದಾಗ ನಾನು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದಿದ್ರು, ಆದರೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡು, ಬಾದಾಮಿ ಕ್ಷೇತ್ರದಲ್ಲಿ ತೀರ ಕಡಿಮೆ ಹಂತರದಲ್ಲಿ ಜಯ ಸಾಧಿಸಿದ್ರು. ಆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎದುರಾಳಿಯಾಗಿದ್ದ ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡುವ ಸಂದರ್ಭ ಒದಗಿಬಂತು. ಇದೀಗ ಮತ್ತೆ ರಾಜಕೀಯ ನಿವೃತ್ತಿ ಮಾತನಾಡಿದ್ದಾರೆ.

ಸಿದ್ದರಾಮಯ್ಯ ವೈಯಕ್ತಿಕವಾಗಿ ರಾಜಕೀಯ ಇಷ್ಟವಿಲ್ಲದ ಕೆಲಸವನ್ನು ಮಾಡಿದ್ದಾರೆ. ಅದರಲ್ಲೂ ಜೆಡಿಎಸ್ ಭಾರೀ ಲೆಕ್ಕಾಚಾರ ಮಾಡಿ ಸೋಲುಣಿಸಿದ್ದು ಸಿದ್ದರಾಮಯ್ಯ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಜೊತೆಗೆ ಬಾದಾಮಿಯಲ್ಲೂ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಸಿದ್ದರಾಮಯ್ಯ ಎರಡೂ ಕಡೆ ಸೋಲು ಕಾಣುವ ಸಾಧ್ಯತೆಯೇ ಹೆಚ್ಚಾಗಿತ್ತು. ರಾಜಕೀಯದ ಕೊನೆಯ ದಿನಗಳಲ್ಲಿ ಸೋಲುಂಡು ಅಖಾಡದಿಂದ ಸರಿಯುವುದು ಯಾಕೆ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಈ ನಿಲುವು ತೆಗೆದುಕೊಂಡಿರಬಹುದು ಅನ್ನೋದು ವಿಶ್ಲೇಷಣೆ. ಆದರೆ ಯಾವಾಗಲು ರಾಜಕಾರಣಿಗಳು ಯಾವುದನ್ನು ಹೇಳ್ತಾರೆ ಅದನ್ನು ಮಾಡೋದಿಲ್ಲ ಎನ್ನುವ ಮಾತಿದೆ. ಯಾಕಂದ್ರೆ ದೇವೇಗೌಡರು ಕಳೆದ ನಾಲ್ಕು ಚುನಾವಣೆಗಳಿಂದಲೂ ನನ್ನ ಕಡೇ ಚುನಾವಣೆ ಎಂದೇ ಪ್ರಚಾರ ಮಾಡ್ತಿದ್ದಾರೆ. ಆದ್ರೆ ಕಡೇ ಕ್ಷಣದಲ್ಲಿ ಕಾರ್ಯಕರ್ತರು ಬಂದು ಒತ್ತಡ ಹಾಕುತ್ತಾರೆ. ಆ ಬಳಿಕ ಸ್ಪರ್ಧೆ ನಿರ್ಧಾರ ಹೊರಬೀಳುತ್ತೆ. ಇದೇ ರೀತಿ ಈ ಬಾರಿಯೂ ಸ್ಪರ್ಧೆ ಮಾಡ್ತಾರೆ ಅನ್ನೋ ಗಾಳಿ ಸುದ್ದಿ ಹರಿದಾಡ್ತಿದೆ. ಆದ್ರೆ ಸಿದ್ದರಾಮಯ್ಯ ಮೊದಲ ಬಾರಿಗೆ ಮಾತು ತಪ್ಪಿದ್ರು, ಈಗ ಎರಡನೇ ಬಾರಿ ಹೇಳಿಕೊಂಡಿದ್ದು, ಈಗ ಹೇಳಿದಂತೆ ನಡೆಯುತ್ತಾರೋ ಇಲ್ಲ ರಾಜಕೀಯ ಸನ್ನಿವೇಶದ ಕಾರಣ ಕೊಟ್ಟು ಮತ್ತೆ ಅಖಾಡಕ್ಕೆ ಇಳಿಯುತ್ತಾರೋ ಎನ್ನೋದು ಮುಂದಿನ ಚುನಾವಣೆವರೆಗೂ ಪ್ರಶ್ನೆ ಯಾಗೇ ಉಳಿಯಲಿದೆ. ಈ ಬಾರಿ ನಿರ್ಧಾರಕ್ಕೆ ಮತ್ತೊಂದು ಪ್ರಮುಖ ಕಾರಣವೂ ಇದೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳೋದು ಸತ್ಯ. ಅದೇ ರೀತಿ ಆದರೆ ಮೈಸೂರು, ಮಂಡ್ಯ, ಹಾಸನ ಸೇರಿದಂತೆ ಜೆಡಿಎಸ್ ಪ್ರಾಬಲ್ಯದ ಹಳೇ ಮೈಸೂರು ಜಿಲ್ಲೆಗಳ ಕ್ಷೇತ್ರವನ್ನು ಜೆಡಿಎಸ್ ಪಡೆದುಕೊಳ್ಳೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ತವರು ಕ್ಷೇತ್ರ ಮೈಸೂರು ಬಿಟ್ಟು ಸಿದ್ದರಾಮಯ್ಯ ಬೇರೆ ಕಡೆ ಸ್ಪರ್ಧೆ ಮಾಡಿದ್ರೆ ಗೌರವ ಕಡಿಮೆ, ಒಂದು ವೇಳೆ ನಾನು ಮೈಸೂರಿನಿಂದಲೇ ಸ್ಪರ್ಧೆ ಮಾಡ್ತೇನೆ, ಕ್ಷೇತ್ರ ಬಿಟ್ಟು ಕೊಡೋದಿಲ ಎಂದರೆ ಜೆಡಿಎಸ್ ಜೊತೆಗಿನ ಮೈತ್ರಿಗೆ ಭಂಗ ಅಥವಾ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್‌ ಜೊತೆಗಿನ ಮೈತ್ರಿಗೆ ತೊಡಕು ಉಂಟುಮಾಡಲು ಇಷ್ಟವಿಲ್ಲ. ಹೀಗಾಗಿ ಚುನಾವಣಾ ಅಖಾಡಕ್ಕೆ ಹೋಗಿ ನಂತರ ಟಿಕೆಟ್‌ಗಾಗಿ ಫೈಟ್ ಮಾಡಿ ಅವಮಾನ ಮಾಡಿಸಿಕೊಳ್ಳುವ ಬದಲು ಎಲ್ಲಾ ಅಧಿಕಾರ ಅನುಭವಿಸಿರು ಸಿದ್ದರಾಮಯ್ಯ, ಚುನಾವಣಾ ಅಖಾಡದಿಂದ ದೂರ ಉಳಿದು ಮಾರ್ಗದರ್ಶಕನಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ಒತ್ತಡ ಹೇರಿದರೂ ನಾನು ಸ್ಪರ್ಧೆ ಮಾಡೋದಿಲ್ಲ ಎಂದಿದ್ದಾರೆ. ರಾಜಕೀಯದಲ್ಲಿ ಯಾರೂ ಶತ್ರುವಲ್ಲ.. ಯಾರೂ ಮಿತ್ರರಲ್ಲ ಅನ್ನೋ‌ ಮಾತಿನಂತೆ ಯಾವ ಮಾತು ಅಂತಿಮವಲ್ಲ ಅನ್ನೋ ಮಾತೂ ಕೂಡ ಅಷ್ಟೇ ಸತ್ಯ.

Leave a Reply