ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಸ್ಥಿತಿ ಚಿಂತಾಜನಕ

ತಮಿಳುನಾಡಿನ ರಾಜಕೀಯದಲ್ಲಿ ಚಾಪು ಮೂಡಿಸಿದ್ದ ಕರುಣಾನಿಧಿ ಸ್ಥಿತಿ ಚಿಂತಾಜನಕವಾಗಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ತಜ್ಞ ವೈದ್ಯರ ತಂಡವೇ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದೆ. ಕಳೆದ ಕೆಲವು ಗಂಟೆಗಳ ತನಕ ತುಂಬಾ ಚೆನ್ನಾಗಿದ್ದ ಕರುಣಾನಿಧಿ ಅವರ ಆರೋಗ್ಯ ಏಕಾ ಏಕಿ ಕ್ಷೀಣಿಸುತ್ತಿದ್ದು, ಯಾವುದೇ ಚಿಕಿತ್ಸೆ ಫಲ ನೀಡುತ್ತಿಲ್ಲ.

ಜೀವ ರಕ್ಷಕ ಯಂತ್ರದ ಸಹಾಯ ಕೊಡಲಾಗಿದೆ ಎಂದಿದ್ದಾರೆ. ಕರುಣಾನಿಧಿ ಅವರ ದೇಹದ ಅಂಗಾಗಗಳು ಕಾರ್ಯ ಚಟುವಟಿಕೆ ನಿಲ್ಲಿಸುವ ಹಂತಕ್ಕೆ ತಲುಪುತ್ತಿವೆ ಎಂದಿರೋದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಚೆನ್ನೈನ ಕಾವೇರಿ ಆಸ್ಪತ್ರೆ ಮುಂಭಾಗ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಏನಾಗುತ್ತೋ‌ ಅನ್ನೋ‌ ಭೀತಿಯಲ್ಲಿ ಕಣ್ಣೀರು ಇಡುತ್ತಿದ್ದಾರೆ. ಈ ನಡುವೆ ಸಿಎಂ ಪಳನಿಸ್ವಾಮಿ ಭೇಟಿ ಮಾಡಿದ ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್ ಹಾಗೂ ಕನ್ನಿಮೋಳಿ ಮಹತ್ವದ ಚರ್ಚೆ ನಡೆಸಿರೋದು ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಇನ್ನೊಂದು ಕಡೆ ತಮಿಳುನಾಡು ಡಿಜಿ, ಐಜಿ ಸಿಎಂ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿ ತುರ್ತು ಸಭೆ ನಡೆಸಿದ್ದಾರೆ. ಬಳಿಕ ಎಲ್ಲಾ ಪೊಲೀಸರು ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ. ಚೆನ್ನೈ ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದು, ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಡಿಎಂಕೆ ನಾಯಕರು ಒಬ್ಬೊಬ್ಬರೆ ಆಸ್ಪತ್ರೆ ಬಳಿಗೆ ದೌಡಾಯಿಸುತ್ತಿದ್ದು, ಆರೋಗ್ಯ ಸ್ಥಿತಿ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಇನ್ನು ತಮಿಳುನಾಡಿನ ಕೊವೈ ಜಿಲ್ಲೆಯಲ್ಲಿ ಎಂ ಕರುಣಾನಿಧಿ ಅವರ ನಿಧನದ ಬಗ್ಗೆ ಅಧಿಕೃತ ಘೋಷಣೆಗೂ ಮುನ್ನವೇ ಶ್ರದ್ಧಾಂಜಲಿ ಭಾವಚಿತ್ರಗಳು ಸಿದ್ಧವಾಗುತ್ತಿವೆ. ಒಟ್ಟಾರೆ ದಕ್ಷಿಣ ಭಾರತ ಕಂಡ ಹಿರಿಯ ರಾಜಕಾರಣಿ ಸ್ಥಿತಿ ತೀರಾ ಹದಗೆಟ್ಟಿದೆ ಅನ್ನೋದಂತು ಸತ್ಯ. ಆದ್ರೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳದ ಹೊರತು ಏನನ್ನೂ ಹೇಳುವಂತಿಲ್ಲ.

Leave a Reply