‘ಕೊನೆ ಬಾರಿ ನಿಮ್ಮನ್ನು ಅಪ್ಪ ಎಂದು ಕರೆಯಲೇ?!’ ಕರುಣಾನಿಧಿಗೆ ಪುತ್ರ ಸ್ಟಾಲಿನ್ ಪತ್ರ!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಸಾವಿನ ಹಿನ್ನೆಲೆಯಲ್ಲಿ ಇಡೀ ತಮಿಳುನಾಡೇ ಕಣ್ಣೀರು ಹಾಕುತ್ತಿದೆ. ಕರುಣಾನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆತಂಕಗೊಂಡಿದ್ದ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಧೈರ್ಯ ತುಂಬುತ್ತಿದ್ದ ಪುತ್ರ ಎಂ.ಕೆ ಸ್ಟಾಲಿನ್, ಮರಿಣಾ ಬೀಚ್ ನಲ್ಲಿ ಅಂತ್ಯಕ್ರಿಯೆ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ತಮ್ಮ ಪರವಾಗಿ ತೀರ್ಪು ನೀಡಿದ ಬಳಿಕ ಭಾವುಕರಾಗಿ ಕಣ್ಣೀರಿಟ್ಟರು. ಇನ್ನು ತಂದೆಯ ನಿರ್ಗಮನದಿಂದ ನೊಂದಿರುವ ಸ್ಟಾಲಿನ್ ‘ತಲೈವರೆ’ (ಕರುಣಾನಿಧಿ ಅವರನ್ನು ಸ್ಟಾಲಿನ್ ಕರೆಯುತ್ತಿದ್ದ ರೀತಿ. ಇದರ ಅರ್ಥ ನಾಯಕ)ಗೆ ಭಾವುಕ ಪತ್ರ ಬರೆದಿದ್ದಾರೆ. ಈ ಪತ್ರ ಹೀಗಿದೆ…

‘ಈಗಲಾದರೂ ನಿಮ್ಮನ್ನೊಮ್ಮೆ ‘ಅಪ್ಪ’ ಎಂದು ಕರೆಯಲೇ?’

‘ಇಷ್ಟು ದಿನ ನೀವು ಎಲ್ಲೇ ಹೋದರೂ ನನಗೆ ಹೇಳುತ್ತಿದ್ದಿರಿ. ಆದರೆ ಈಗ ನನಗೆ ಹೇಳದೇ ಎಲ್ಲಿಗೆ ಹೋದಿರಿ? ನಮ್ಮನ್ನು ಈ ಪರಿಸ್ಥಿತಿಯಲ್ಲಿಟ್ಟು ಎಲ್ಲಿಗೆ ಹೋಗಿದ್ದೀರಿ?

‘ತಮ್ಮ ಜೀನಪೂರ್ತಿ ಅವಿರತವಾಗಿ ಶ್ರಮಿಸಿದ ವ್ಯಕ್ತಿಯನ್ನು ಇಲ್ಲಿ ಮಲಗಿಸಲಾಗಿದೆ.’ ಎಂದು ನಿಮ್ಮ ಸ್ಮಾರಕದ ಮೇಲೆ ಬರೆಸಬೇಕು ಎಂದು 33 ವರ್ಷಗಳ ಹಿಂದೆ ನನ್ನ ಬಳಿ ಹೇಳಿದ್ದೀರಿ. ತಮಿಳುನಾಡಿಗೆ ಸಮಾಜಕ್ಕೆ ನಿಮ್ಮ ಕೊಡುಗೆ ಸಾಕಾಗಿದೆ ನೀವೇ ನಿರ್ಧರಿಸಿಬಿಟ್ಟಿರಾ?’

‘ನಿಮ್ಮ 8 ದಶಕಗಳ ಸಾರ್ವಜನಿಕ ಜೀವನದಲ್ಲಿ ಮಾಡಿದ ಸಾಧನೆಯನ್ನು ಬೇರೆ ಯಾರದರು ಮೀರಿಸುತ್ತಾರಾ ಎಂಬುದನ್ನು ನೋಡಲು ಕಾಯುತ್ತಿದ್ದೀರಾ? ಅನೇಕ ವರ್ಷಗಳ ಹಿಂದೆ ನೀವು ಅರಿಜ್ಞಾರ್ ಅಣ್ಣಾ ಅವರಿಂದ ನೀವು ಪಡೆದ ಧೈರ್ಯದ ಹೃದಯವನ್ನು ನನಗೆ ನೀಡುತ್ತೀರಾ? ಎಂದು ನಿಮ್ಮ ಬಳಿ ಕಡೆಯದಾಗಿ ಬೇಡುತ್ತೇನೆ. ನಿಮ್ಮ ಈ ಕಾಣಿಕೆಯಿಂದ ನಿಮ್ಮ ಬಾಕಿ ಇರುವ ಕನಸುಗಳನ್ನು ನಾವು ಸಾಕಾರಗೊಳಿಸುತ್ತೇವೆ.’

‘ನಿಮ್ಮ ಕೋಟ್ಯಂತರ ಉದನ್‌ಪಿರಪ್ಪುಕ್ಕಳ್ (ಕರುಣಾನಿಧಿ ತಮ್ಮ ಅಭಿಮಾನಿಗಳನ್ನು ಹೀಗೆ ಕರೆಯುತ್ತಿದ್ದರು.) ಪರವಾಗಿ ನಿಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ಇನ್ನೊಂದು ಬಾರಿ ‘ಉದನ್‌ಪಿರಪ್ಪೆ’ (ರಕ್ತ ಸಂಬಂಧಿ) ಎಂಬ ಮಾತನ್ನು ಉಚ್ಛರಿಸಿ. ಇದರಿಂದ ನಮಗೆ ಮುಂದಿನ ನೂರು ವರ್ಷಗಳ ಕಾಲ ಶ್ರಮಿಸಲು ಉತ್ತೇಜನ ಸಿಗುತ್ತದೆ! ನನ್ನ ಜೀವನದ ಬಹುತೇಕ ಕಾಲ ನಿಮ್ಮನ್ನು ‘ತಲೈವರೆ’ (ನಾಯಕ) ಎಂದೇ ಕರೆಯುತ್ತಿದ್ದೆ. ಆದರೆ ಈಗ ಕೊನೆಯ ಬಾರಿಗೆ ನಿಮ್ಮನ್ನು ‘ಅಪ್ಪ’ ಎಂದು ಕರೆಯಲೇ?’

‘ಎಂ.ಕೆ ಸ್ಟಾಲಿನ್’

Leave a Reply