ತಮಿಳುನಾಡಲ್ಲಿ ಮೋದಿ‌ ಕನಸು ಈಡೇರುತ್ತಾ?

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಲ್ಲಿ ಜಯಲಲಿತಾ ಹಾಗೂ ಕರುಣಾನಿಧಿ ಪೊಲಿಟಿಕಲ್ ಸ್ಟಾರ್ಸ್. ಇದೀಗ ಅವರಿಬ್ಬರೂ ಮರೀನಾ ಬೀಚ್‌ನ ಸಮಾಧಿಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಇದರಿಂದ ಈ ಹಿಂದಿನ ಚುನಾವಣೆಗಳಲ್ಲಿ ಅಬ್ಬರಿಸಿದ್ದ ದ್ರಾವಿಡ ಚಳುವಳಿಯ ಹುರಿಯಾಳುಗಳು ಮುಂದಿನ ಚುನಾವಣೆಗಳಲ್ಲಿ ಗೈರಾಗಲಿದ್ದಾರೆ.

ಈ ಮಧ್ಯೆ ಬಿಜೆಪಿ ತಮಿಳುನಾಡಿನಲ್ಲಿ ನೆಲೆಯೂರಲು ಅವಿರತ ಪ್ರಯತ್ನ ನಡೆಸಿದೆ. ಅದೇ ಕಾರಣಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ವೇದಿಕೆ ನಿರ್ಮಾಣ ಆಗಿರೋದು ಅನ್ನೋ ಮಾತು ಕೂಡ ಇದೆ. ಇದಕ್ಕೆ ಪುಷ್ಟಿ ಎನ್ನುವಂತೆ ರಜನಿಕಾಂತ್ ಬಿಜೆಪಿ ಪಕ್ಷದ ಅಂಗಪಕ್ಷ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ನಡುವೆ ಕಾಂಗ್ರೆಸ್ ಸ್ಥಿತಿಯೂ ಭಿನ್ನವಾಗಿಲ್ಲ. ತಮಿಳುನಾಡಿನ ಜನ ಕೇವಲ ಎರಡು ಪ್ರಾದೇಶಿಕ ಪಕ್ಷಗಳನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ರಾಷ್ಟ್ರದಲ್ಲಿ ಯಾವುದೇ ಸರ್ಕಾರ ರಚನೆ ಆದರೂ ತಮಿಳುನಾಡಿನ ಸರ್ಕಾರದ ಬೆಂಬಲ ಪಡೆದುಕೊಳ್ತಾರೆ. ಆ ಮೂಲಕ ಅಭಿವೃದ್ದಿ ಕೆಲಸ ಮಾಡಿಸಿಕೊಳ್ತಾರೆ.

ಜಯಲಲಿತಾ ತಮಿಳಿಗರ ಅಮ್ಮಾ ಎಂದೇ ಫೇಮಸ್. ಅದೇ ರೀತಿ ಕರುಣಾನಿಧಿ ತಮಿಳಿಗರ ಅಯ್ಯಾ ಎಂದೇ ಖ್ಯಾತಿ. ಇದೀಗ ಇಬ್ಬರ ದುನಿಯಾ ಮರದ ಪೆಟ್ಟಿಗೆ ಸೇರಿದೆ. ಅಮ್ಮ ಪಕ್ಷ ಒಡೆದು ಹೋಳಾಗಿದ್ದು, ಎಐಎಡಿಎಂ ಪಕ್ಷ ಮುಂದಿನ ಚುನಾವಣೆಯಲ್ಲಿ ಯಾವ ಪಾತ್ರ ವಹಿಸಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಯಾಕಂದ್ರೆ ಜಯಲಲಿತಾ ಆಪ್ತೆ ಶಶಿಕಲಾ ಜೈಲು ಪಾಲಾಗ್ತಿದ್ದ ಹಾಗೆ ತೆರೆ ಹಿಂದಿನ ರಾಜಕಾರಣಕ್ಕೆ ಕೈ ಹಾಕಿದ ಬಿಜೆಪಿ, ಸಿಎಂ ಪಳನಿಸ್ವಾಮಿ ಹಾಗು ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬಣವನ್ನು ಒಂದು ಮಾಡಿಸಿ ರಾಜಕೀಯ ತಂತ್ರಗಾರಿಕೆ ಮಾಡಿದ್ದು, ಎಐಡಿಎಂಕೆ ಹಾಗು ರಜನಿಕಾಂತ್ ಮೂಲಕ ತಮಿಳುನಾಡಿನಲ್ಲಿ ಮರಿಚಿಕೆ ಆಗಿರುವ ಅಧಿಕಾರ ಹಿಡಿಯಲು ಯೋಜನೆ ತಯಾರಾಗಿದೆ.

ಎಐಡಿಎಂಕೆ ಮೋದಿ ಎಂಬ ಮಾಂತ್ರಿಕನ ಕೈಗೆ ಸಿಕ್ಕಿ ದುರ್ಬಲವಾಗಿದೆ. ಆದ್ರೆ ಡಿಎಂಕೆ ಕರುಣಾನಿಧಿ ಇಲ್ಲದಿದ್ದರೂ ತನ್ನ ಕಾರ್ಯಕರ್ತರ ಪಡೆಯನ್ನು ಒಗ್ಗೂಡಿಸಬಲ್ಲ ಮಗ ಎಂ.ಕೆ ಸ್ಟಾಲಿನ್ ಹೆಗಲೇರಿದೆ. ಸ್ಟಾಲಿನ್ ಕಾರ್ಯಕರ್ತನ್ನು ಹುರಿದುಂಬಿಸಿ ಚುನಾವಣೆಗೆ ಅಣಿಮಾಡಬಹುದು. ಆದ್ರೆ ಪಕ್ಷದಲ್ಲಿ ಅಣ್ಣತಮ್ಮಂದಿರ ಜಗಳ ಬಿಜೆಪಿ ಕಾರ್ಯತಂತ್ರಕ್ಕೆ ಸಹಾಯವಾಗುತ್ತಾ ಅನ್ನೋ ಮಾತುಗಳು ಕೇಳಿ ಬಂದಿವೆ. ಯಾಕಂದ್ರೆ ಮಧುರೈ ಸೇರಿದಂತೆ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಹಿರಿಯ ಪುತ್ರ ಎಂ.ಕೆ ಅಳಗಿರಿ ಪಕ್ಷದ ಮೇಲೆ ಹಿಡಿತ ಹೊಂದಿದ್ದಾರೆ.

ತನ್ನ ವೈಯಕ್ತಿಕ ಪ್ರತಿಷ್ಟೆಗಾಗಿ ಏನಾದರೂ ಸ್ಟಾಲಿನ್ ಅಳಗಿರಿಯನ್ನು ಉದಾಸಿನ ಮಾಡಿ ಸೈಡ್‌ಲೈನ್ ಮಾಡಲು ಮುಂದಾದರೆ ಗೆಲುವನ್ನೇ ನೋಡದ ಬಿಜೆಪಿ ಅಧಿಕಾರ ಹಿಡಿದರೂ ಅಚ್ಚರಿಯಿಲ್ಲ. ಒಟ್ಟಾರೆ ತಮಿಳುನಾಡಲ್ಲಿ ದ್ರಾವಿಡ ಚಳವಳಿಯನ್ನೇ ಅಸ್ತ್ರವಾಗಿಸಿ ಅಧಿಕಾರ ಹಿಡಿದಿದ್ದ ದಿಗ್ಗಜರ ಕಾಲ ಅಂತ್ಯವಾಗಿದೆ. ಇನ್ಮುಂದೆ ಹೊಸದಾಗಿ ಬರುತ್ತಿರುವವರೂ ಕೂಡ ಸಿನಿಮಾ ಕ್ಷೇತ್ರದವರೇ ಆಗಿದ್ದು, ರಜನಿಕಾಂತ್ ಸಿಎಂ ಆಗ್ತಾರಾ ಅಥವಾ ಕಮಲ್ ಹಾಸನ್ ಸಿಎಂ ಆಗ್ತಾರಾ ಅನ್ನೋ ಕುತೂಹಲವನ್ನೂ ಮೂಡಿಸಿದೆ. ಇನ್ನು ತಂದೆಯಂತೆಯೇ ಮಗ ಸ್ಟಾಲಿನ್ ಕೂಡ ತಮಿಳು ಜನರ ಮನಸ್ಸನ್ನು ಗೆದ್ದು ಸಿಎಂ ಆದರೂ ಅಚ್ಚರಿ ಪಡಬೇಕಿಲ್ಲ. ಇದ್ರ ನಡುವೆ ಮೋದಿ ಯಾವ ಅಸ್ತ್ರ ಹೂಡಿ ಯಾರನ್ನು ಕೆಡವುತ್ತಾರೋ ಯಾರು ಬಲ್ಲರು. ಆದ್ರೆ ಒಂದಂತೂ ನಿಜ.. ತಮಿಳುನಾಡಿನ ರಾಜಕಾರಣಕ್ಕೆ ಎಂಟ್ರಿಯಾಗಲು ಬಿಜೆಪಿಗೆ ಇಂತಹ ಅವಕಾಶ ಮತ್ತೊಮ್ಮೆ ಸಿಗೋದು ಅನುಮಾನ.

Leave a Reply