ಮೋದಿಯನ್ನು ಕೆಣಕಿ ಪದೇ ಪದೆ ಕಾಂಗ್ರೆಸ್ ಸೋಲ್ತಿರೋದ್ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವಾಗ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಕೆಣಕುತ್ತಿದೆ. ಈ ಬಾರಿ ಏನಾದರೂ ಮಾಡಿ ಮೋದಿಯ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಇನ್ನಿಲ್ಲದ ಕಸರತ್ತು ಮಾಡ್ತಿದೆ. ಆದ್ರೆ‌ ಕಾಂಗ್ರೆಸ್ ಮಾಡ್ತಿರೋ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆಯುತ್ತಿವೆ. ಮೊದಲಿಗೆ ಅವಿಶ್ವಾಸ ನಿರ್ಣಯ ಮಂಡಿಸಿದ ವಿರೋಧ ಪಕ್ಷಗಳಿಗೆ ಭಾರೀ ಮುಖಭಂಗ ಆಗಿತ್ತು. ಇದೀಗ ಮತ್ತೊಮ್ಮೆ ಆಡಳಿತ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಯುಪಿಎ ಕೂಡ ಮುಖಭಂಗ ಅನುಭವಿಸಿದೆ. ಅದಕ್ಕೆ ಕಾರಣವಾಗಿರೋದು ರಾಜ್ಯಸಭಾ ಉಪ ಸಭಾಪತಿ ಸ್ಥಾನದ ಆಯ್ಕೆ ಪ್ರಕ್ರಿಯೆ.

ರಾಜ್ಯ ಸಭೆಯಲ್ಲಿ ಬಿಜೆಪಿ ಹಾಗೂ ಎನ್ ಡಿಎ ಬಳಿ ಬಹುಮತ ಇಲ್ಲದಿರುವುದನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಒಟ್ಟಾಗಿ ಸೇರಿಸಿ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಿತ್ತು. ಈ ಪ್ರಯತ್ನ ಈಗ ನೆಲ ಕಚ್ಚಿದೆ. ಎನ್‌ಡಿಎ ಅಭ್ಯರ್ಥಿ ಜೆಡಿಯುವಿನ ಹರಿವಂಶ ನಾರಾಯಣ್ ವಿರುದ್ಧ ಕರ್ನಾಟಕದ ಬಿ.ಕೆ ಹರಿಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿಕೊಂಡು ಬರೋಬ್ಬರಿ 20 ಮತಗಳ ಅಂತರದಿಂದ ಸೋತು ಕೈ ಸುಟ್ಟುಕೊಂಡಿದೆ.

ಕಾಂಗ್ರೆಸ್ ಮುಕ್ತ ಭಾರತ ಮಾಡುವ ಪ್ರಯತ್ನದಲ್ಲಿರುವ ಬಿಜೆಪಿಗೆ ಪ್ರತಿ ಹಂತದಲ್ಲೂ ಮಣಿಸಬೇಕು ಅಧಿಕಾರವನ್ನು ಕೇಸರಿ ಪಡೆಯಿಂದ ದೂರವಿರಿಸಬೇಕು ಎಂದು ಇನ್ನಿಲ್ಲದ ಯತ್ನ ಮಾಡುತ್ತಿದೆ. ಇದಕ್ಕಾಗಿ ತನ್ನ ಅಹಂ ಅನ್ನು ಗಂಟುಮೂಟೆ ಕಟ್ಟಿ ಬಿಸಾಡಿದೆ. ಇದಕ್ಕೆ ಉದಾಹರಣೆ, ಕರ್ನಾಟಕದಲ್ಲಿ‌ ಸೋಲುಂಡರೂ‌ ಜೆಡಿಎಸ್ ಮೂಲಕ ಅಧಿಕಾರ ಹಿಡಿಯುವಲ್ಲಿ‌ ಯಶಸ್ವಿಯಾಗಿರುವುದು.‌ ಇನ್ನು ಕೇಂದ್ರದಲ್ಲಿ ವಿರೋಧ ಪಕ್ಷಗಳನ್ನು ಗುಡ್ಡೆ ಹಾಕಲು ಪ್ರಯತ್ನಿಸುತ್ತಿದೆ. ಆದ್ರೆ ಕಾಂಗ್ರೆಸ್ ನ ಈ ತಂತ್ರಗಳು ಪರಿಣಾಮಕಾರಿಯಾಗಿ ಪ್ರಯೋಗವಾಗುತ್ತಿಲ್ಲ.

ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ದೇಶದ ಎಲ್ಲಾ ಪ್ರಾದೇಶಿಕ ನಾಯಕರೂ ಆಗಮಿಸಿದ್ರು. ಆ ವೇಳೆಯೂ ಮೋದಿ ವಿರುದ್ಧದ ವಿರೋಧ ಪಕ್ಷಗಳ ಶಕ್ತಿಯನ್ನು ಒಂದೇ ವೇದಿಕೆ‌ ಮೇಲೆ ಪ್ರದರ್ಶಿಸಿ ಲೋಕಸಭಾ ಚುನಾವಣೆಗೆ ಸಿದ್ಧ‌ ಎಂಬ ಸಂದೇಶ ರವಾಣಿಸಿತ್ತು. ಅದಾದ ಬಳಿಕ ವಿರೋಧ ಪಕ್ಷಗಳ ಒಗ್ಗಟ್ಟು ಎಷ್ಟು ಸಡಿಲವಾಗಿದೆ ಎಂಬುದನ್ನು ಅವಿಶ್ವಾಸ ನಿರ್ಣಯ ಹಾಗೂ ಲೋಕಸಭೆಯ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಗಳು ಬಟಾಬಯಲು ಮಾಡಿವೆ.

ಈ ಸೋಲು ಕಾಂಗ್ರೆಸ್ ಪಾಠ ಕಲಿತು ತನ್ನ ತಪ್ಪು ಹೆಜ್ಜೆಗಳನ್ನು ಹುಡುಕಿ ಸರಿಪಡಿಸಿಕೊಳ್ಳಲು ಉತ್ತಮ ಅವಕಾಶವಾಗಿವೆ. ಈ ಹಿನ್ನಡೆಗಳಿಂದ ಎನ್‌ಡಿಎ ಬಲವೆಷ್ಟು, ಯುಪಿಎ ಬಲವೆಷ್ಟು, ತಟಸ್ಥವಾಗಿ ಉಳಿಯುವ ಸ್ನೇಹಿತರು ಎಷ್ಟು ಅನ್ನೋ ಪಕ್ಕಾ ಲೆಕ್ಕಾಚಾರ ಸಿಗಲಿದ್ದು, ಮುಂದಿನ ಚುನಾವಣೆಗೆ ಪರಿಣಾಮಕಾರಿ ರಣತಂತ್ರ ರೂಪಿಸಲು ಅನುಕೂಲ ಆಗಲಿದೆ.

Leave a Reply