ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿಎಸ್ ವೈ ಪಲ್ಲಟ ಸಂಭವ

ಡಿಜಿಟಲ್ ಕನ್ನಡ ಟೀಮ್:

2019ಕ್ಕೆ ಎದುರಾಗಲಿರುವ ಲೋಕಸಭಾ ಚುನಾವಣೆ ಬಗ್ಗೆ ಬಿಎಸ್ ಯಡಿಯೂರಪ್ಪ ನಿರಾಸಕ್ತಿ ವಹಿಸಿದ್ದಾರೆ ಅನ್ನೋ ಆರೋಪ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದೇ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕರಾಗಿರುವ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಕಮಲ ಕಮಾಂಡ್ ಚಿಂತನೆ ನಡೆಸಿದೆ ಎಂಬ ಚರ್ಚೆ ಆರಂಭವಾಗಿದೆ.

ಹೀಗಾಗಿ ಕೂಡಲೇ ಎಚ್ಚೆತ್ತುಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಈ ಸ್ಥಾನ ಬದಲಾವಣೆ ಮಾಡದಿರಲು ಆಪ್ತ ಸಂಸದರ ಮೂಲಕ ಒತ್ತಡ ಹೇರಲು ಶುರುಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಮುಂದೆ ವಕಾಲತ್ತು ವಹಿಸಿರುವ 10 ಮಂದಿ ಸಂಸದರು, ಲೋಕಸಭಾ ಚುನಾವಣೆ ತನಕ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಇರಬೇಕು, ಅವರನ್ನ ಯಾವುದೇ ಕಾರಣಕ್ಕೂ ಈಗ ಇಳಿಸಬಾರದು. ಬೇರೆಯವರು ರಾಜ್ಯಾಧ್ಯಕ್ಷರಾದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಷ್ಟವಾಗಲಿದೆ ಎಂದು ವಾದ ಮಂಡಿಸಿದ್ದಾರೆ.

ಸದ್ಯ ಕರ್ನಾಟಕ ರಾಜಕಾರಣದಲ್ಲಿ ಯಡಿಯೂರಪ್ಪ ಫುಲ್ ಫಾರ್ಮ್‌ನಲ್ಲಿ ಇದ್ದಾರೆ ಎಂದಿರುವ ಸಂಸದರು, ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಮುಗಿ ಬೀಳ್ತಿರೋ ಯಡಿಯೂರಪ್ಪ ಅವರನ್ನು ಬಿಜೆಪಿ‌ ಹೈಕಮಾಂಡ್ ಯಾಕೆ ಬದಲಾವಣೆ ಮಾಡಲು ಮುಂದಾಗಿದೆ ಅನ್ನೋ ಚಿಂತೆ ಬಿಜೆಪಿ ಕಾರ್ಯಕರ್ತರನ್ನು ಕಾಡಿದ್ರೆ, ಯಡಿಯೂರಪ್ಪ ಅವರು ಇಲ್ಲದೇ ಹೋದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ಕಷ್ಟ ಅನ್ನೋದು ಈ ಸಂಸದರು ವಿವರಿಸಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ರಾಜಕಾರಣದ ಮೇಲೆ ಆಸಕ್ತಿ ಹೆಚ್ಚಾಗಿದ್ದು, ಏನಾದರೂ ಮಾಡಿ ಸರ್ಕಾರ ರಚನೆ ಮಾಡಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಅದಕ್ಕಾಗಿ ಆಪರೇಷನ್ ಕಮಲ ಮಾಡಿಯಾದರೂ ಸರಿ ಅಧಿಕಾರ ಹಿಡಿಯಬೇಕು ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸುವ ದುರುದ್ದೇಶ ಬಿಜೆಪಿಗೆ ಬೇಡ ಅನ್ನೋ ಉತ್ತರ ಆ ಕಡೆಯಿಂದ ಸಿಕ್ಕಿದೆ. ಇದ್ರಿಂದ ಮನಸ್ಸು ಕೆಡಿಸಿಕೊಂಡಿರುವ ಯಡಿಯೂರಪ್ಪ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಷ್ಟಾದರು ಸ್ಥಾನಗಳು ಬರಲಿ ನನಗೆ ಏನಾಗಬೇಕು. ಮುಂದಿನ ಬಾರಿ ನಾವು ವಿಧಾನಸಭೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುವ ವೇಳೆಗೆ ನನ್ನ ವಯಸ್ಸು ಮುಗಿದು ಹೋಗಿರುತ್ತದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅಧ್ಯಕ್ಷರಿಗೆ ಉತ್ಸಾಹ ಇಲ್ಲದಿದ್ರೆ ಕಷ್ಟ ಎಂದು ಅರಿತಿರುವ ಬಿಜೆಪಿ ಹೈಕಮಾಂಡ್ ಅಧ್ಯಕ್ಷರನ್ನು ಬದಲಾವಣೆ ಮಾಡಲು ಮುಂದಾಗಿದೆ ಎಂದು ಕಮಲ ಪಾಲಯದೊಳಗೆ ಲೆಕ್ಕಾಚಾರಗಳು ಆರಂಭವಾಗಿದೆ.

Leave a Reply