ಗದ್ದೆಯಲ್ಲಿ ಕುಮಾರಸ್ವಾಮಿ ನಾಟಿ! ಇದು ಮೆಚ್ಚುಗೆಗೆ ಅಲ್ಲ ಎಂದು ಟೀಕೆಗೆ ಸ್ಪಷ್ಟನೆ!

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಪಾಂಡಪುರ ತಾಲೂಕಿನ ಸೀತಾಪುರ ಗ್ರಾಮದ ಸಮೀಪದ ಜಮೀನಿನಲ್ಲಿ ಭತ್ತದ ನಾಟಿ ಮಾಡುವ ಮೂಲಕ ತಾವು ನಿಜವಾದ ಮಣ್ಣಿನ ಮಗ ಎಂಬ ಸಂದೇಶ ರವಾನಿಸಿದ್ದಾರೆ. ಈ ಹಿಂದೆ ಗ್ರಾಮ ವಾಸ್ತವ್ಯದ ಮೂಲಕ ಜನಮನ ಗೆದ್ದಿದ್ದ ಕುಮಾರಸ್ವಾಮಿ, ಈಗ ನಾಟಿ ಮಾಡಿ ರೈತರ ಗಮನ ಸೆಳೆದಿದ್ದಾರೆ.

ಗದ್ದೆಯಲ್ಲಿ ಕೆಲಸ ಮಾಡಿದ ವಿಶೇಷ ಅನುಭವವನ್ನು ರೈತರೊಂದಿಗೆ ಹಂಚಿಕೊಂಡ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು…

‘ನಾನು 25 ವರ್ಷಗಳ ನಂತರ ಗದ್ದೆಗೆ ಇಳಿದು, ಕೆಲಸ ಮಾಡಿದ್ದೇನೆ. ಈಗ ಜನಜಂಗುಳಿಯಿಂದ ಸರಿಯಾಗಿ ಹೊಲ ಉಳಲು ಆಗಲಿಲ್ಲ. ಈ ಹಿಂದೆ ಹೊಲ ಉತ್ತಿದ್ದೇನೆ. ಗೊಬ್ಬರ ಹೊತ್ತಿದ್ದೇನೆ. ಅದೆಲ್ಲವನ್ನೂ ಮಾಡಿಯೇ ಈ ಹಂತಕ್ಕೆ ಬಂದಿದ್ದೇನೆ. ಈಗ ಸ್ವಲ್ಪ ಸೋಂಬೇರಿಯಾಗಿದ್ದೇವೆ. ಆದರೆ, ರೈತರ ಪರಿಶ್ರಮ ತನಗೆ ಚೆನ್ನಾಗಿ ಗೊತ್ತು.

ತಾನು ಮಂಡ್ಯದಲ್ಲಿ ಭತ್ತದ ನಾಟಿ ಮಾಡಿದಾಕ್ಷಣ ಮಂಡ್ಯಕ್ಕಷ್ಟೇ ತಾನು ಸೀಮಿತವಾಗುವುದಿಲ್ಲ. ಉತ್ತರ ಕರ್ನಾಟಕ ಬೇರೆ ಅಲ್ಲ, ಹಳೆ ಕರ್ನಾಟಕ ಬೇರೆ ಅಲ್ಲ. ಇಡೀ ರಾಜ್ಯದ ಎಲ್ಲಾ 30 ಜಿಲ್ಲೆಗಳ ರೈತರ ಏಳ್ಗೆಯ ಜವಾಬ್ದಾರಿ ತನ್ನದು. ಎಲ್ಲಾ 30 ಜಿಲ್ಲೆಗೂ ತಾನು ಭೇಟಿ ಕೊಡುತ್ತೇನೆ. ತಿಂಗಳಲ್ಲಿ ಒಂದು ದಿನ ಪ್ರತೀ ಜಿಲ್ಲೆಗೂ ಪ್ರವಾಸ ಮಾಡುತ್ತೇನೆ. ರೈತರ ಜೊತೆ ಇರುತ್ತೇನೆ. ಅವರ ಸಮಸ್ಯೆಯನ್ನು ಆಲಿಸುತ್ತೇನೆ, ನೋಡುತ್ತೇನೆ. ರೈತರೊಂದಿಗೆ ಸಮಾಲೋಚನೆ ಮಾಡುತ್ತೇನೆ.

ನಾನು ವಿರೋಧ ಪಕ್ಷಗಳನ್ನಾಗಲೀ ಅಥವಾ ಬೇರೆಯವರನ್ನು ಮೆಚ್ಚಿಸಲು ಈ ಕೆಲಸ ಮಾಡುತ್ತಿಲ್ಲ. ಹೃದಯಪೂರ್ವಕವಾಗಿ ಕೆಲಸ ಮಾಡುತ್ತಿದ್ದೇನೆ. ತನಗೆ ಅಧಿಕಾರ ಸಿಕ್ಕು ಇನ್ನೂ 2 ತಿಂಗಳು ಆಗಿಲ್ಲ. ಆರೇಳು ತಿಂಗಳು ಸಮಯ ಕೊಡಿ. ರೈತರ ಬದುಕನ್ನು ಹಸನು ಮಾಡುವ ಅನೇಕ ಯೋಜನೆಗಳು ತನ್ನಲ್ಲಿವೆ. ಅವುಗಳನ್ನು ಜಾರಿಗೊಳಿಸುತ್ತೇನೆ. ಹೊಸ ರೀತಿಯ ಕೃಷಿ ಪದ್ಧತಿ ತರಬೇಕೆಂಬ ಕಲ್ಪನೆ ಇಟ್ಟುಕೊಂಡಿದ್ಧೇನೆ. ಅದರ ನೀಲನಕ್ಷೆ ತಯಾರಿಸಿದ್ಧೇನೆ. ಇಡೀ ರಾಜ್ಯದ 75 ಲಕ್ಷ ರೈತ ಕುಟುಂಬಗಳ ಏಳ್ಗೆ ಮಾಡುವ ಆಸೆ ನನ್ನದು.

ರೈತರೇ ನೀವು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಾಲ ಮನ್ನಾ ಮಾಡಿದ ತತ್​ಕ್ಷಣ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ತನಗೆ ಚೆನ್ನಾಗಿ ಗೊತ್ತು. ಸಾಲಗಾರರು ನಿಮ್ಮ ಮನೆಬಾಗಿಲಿಗೆ ಬರದಂತೆ ಮಾಡುತ್ತೇನೆ.

ತಾನು ಅಧಿಕಾರಕ್ಕೆ ಬಂದಾಗಿನಿಂದ ಯಥೇಚ್ಛವಾಗಿ ನೀರು ಹರಿಯುತ್ತಿದೆ. ಕೆರೆ ಕಟ್ಟೆಗಳೆಲ್ಲಾ ತುಂಬುತ್ತಿದೆ. ರಾಜ್ಯದ ರೈತರಿಗೆ ನೆಮ್ಮದಿಯಾಗಿದೆ. ನೆರೆಯ ತಮಿಳುನಾಡು ಜನರಿಗೂ ಸಾಕಷ್ಟು ಕಾವೇರಿ ನೀರು ಹರಿಯುತ್ತಿದೆ. ಅಲ್ಲಿನ ಜನರು ಖುಷಿಯಿಂದ “ದೇವೇಗೌಡ ವಾಳ್ಗೆ”, ”ಕುಮಾರಸ್ವಾಮಿ ವಾಳ್ಗೆ” ಎಂದು ಘೋಷಣೆ ಕೂಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಈ ಕಾವೇರಿ ಮಾತೆ.

 

Leave a Reply