ಕುಮಾರಸ್ವಾಮಿ ದಾಳಕ್ಕೆ ತಲೆಕೆಡಿಸಿಕೊಂಡ ಕಾಂಗ್ರೆಸ್.. ಕಮಲ!

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ರು. ಅದರಲ್ಲಿನ ಕೆಲವೊಂದು ಗೊಂದಲಗಳಿಂದ ರೈತ ಸಮುದಾಯವನ್ನು ಎದುರು ಹಾಕಿಕೊಂಡಿದ್ರು. ಇದೀಗ ಎಲ್ಲವನ್ನು ಸರಿ ಮಾಡಿಕೊಳ್ಳುವತ್ತ ಸಾಗುತ್ತಿದ್ದಾರೆ ಸಿಎಂ ಕುಮಾರಸ್ವಾಮಿ. ಇದರ ಮೊದಲ ಹೆಜ್ಜೆಯಾಗಿ ಶನಿವಾರ ಮಂಡ್ಯದಲ್ಲಿ ನಡೆದ ನಾಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಡೆದ ನಾಟಿ ಕಾರ್ಯಕ್ರಮದಲ್ಲಿ ಸಿಎಂ ಪಂಚೆಯುಟ್ಟು ಗದ್ದೆಗೆ ಇಳಿದ್ರು. ಭತ್ತದ ಪೈರನ್ನು ನೆಟ್ಟು ಅನ್ನದಾತರಿಗೆ ಶುಭಕೋರಿದ್ರು. ನಾಟಿ ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ರೈತ ಸಮುದಾಯಕ್ಕೆ ಕೆಲವೊಂದು ಮಾತುಗಳನ್ನು ಹೇಳಿದ್ರು.

‘ನಾನು ಅಧಿಕಾರದಲ್ಲಿ ಇರುವಷ್ಟೂ ದಿನ ರೈತರಿಗಾಗಿಯೇ ಕೆಲಸ ಮಾಡ್ತೇನೆ. ಯಾರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರಾಷ್ಟ್ರೀಯ ಬ್ಯಾಂಕ್ ಸಾಲ ಮನ್ನಾ ಮಾಡುವ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡ್ತೇವೆ. ನಿಮಗೆ ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಬಳಿ ಬನ್ನಿ, ಹೇಳಿಕೊಳ್ಳಿ’ ಎಂದು ಕರೆ ನೀಡಿದ್ರು.

ಇಷ್ಟೆಲ್ಲಾ ಒಂದು ಕಡೆ ನಡೆಯುತ್ತಿದ್ರೆ ಕಾಂಗ್ರೆಸ್ ಹಾಗು ಬಿಜೆಪಿಯಲ್ಲಿ ಬಿರುಗಾಳಿ ಶುರುವಾಗಿದೆ. ಸಾಲಮನ್ನಾ ಮಾಡಿರುವ ನಿರ್ಧಾರ ಜೆಡಿಎಸ್ ಪಕ್ಷದ್ದು ಎಂದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಮೈತ್ರಿ ಸರ್ಕಾರದಲ್ಲಿ ಭಾಗ ಆಗಿರೋದ್ರಿಂದ ಕಾಂಗ್ರೆಸ್ ಕೂಡ ಸಾಲಮನ್ನಾ ಕ್ರೆಡಿಟ್ ಪಡೆಯಲು ಯತ್ನ ಮಾಡ್ತಿದೆ. ಆದ್ರೆ ಸಿಎಂ ಕುಮಾರಸ್ವಾಮಿ ಮಾತ್ರ ಮಂಡ್ಯದಿಂದ ರೈತಯಾತ್ರೆ ಶುರು ಮಾಡಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡ್ತೇನೆ. ರೈತರನ್ನು ಭೇಟಿಯಾಗಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಎಂ ಈ ರೀತಿ ರೈತರ ಮನಸ್ಸನ್ನು ಗೆಲ್ಲುತ್ತಾ ಸಾಗಿದ್ರೆ, ಜನಾಭಿಪ್ರಾಯ ಜೆಡಿಎಸ್ ಪರವಾಗಿ ಬಿಡುತ್ತೆ ಅನ್ನೋದು ಕಾಂಗ್ರೆಸ್ ಕಂಗಾಲಾಗಲು ಕಾರಣ. ಜೊತೆಗೆ ಕಮಲ ಪಾಳಯ ಕೂಡ ಮುಖ್ಯಮಂತ್ರಿ ಕೆಲಸದಿಂದ ದಿಗಿಲುಗೊಂಡಿದೆ. ಇದೇ ರೀತಿ‌ ರಾಜ್ಯಾದ್ಯಂತ ಮುಖ್ಯಮಂತ್ರಿ ಪ್ರವಾಸ ಮಾಡಿದ್ರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ‌ ದುಪ್ಪಟ್ಟು ಆಗೋದ್ರಲ್ಲಿ‌ಅನುಮಾನವಿಲ್ಲ ಅನ್ನೋದು ಬಿಜೆಪಿ ನಾಯಕರ ಮಾತಾಗಿದೆ.

ಸಿಎಂ ಕುಮಾರಸ್ವಾಮಿ ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಮಾಡಿದ ವಿಚಾರ ರಾಜ್ಯ ಬಿಜೆಪಿಯಲ್ಲೂ ಟಾಕ್ ಶುರುವಾಗಿದ್ದು, ಸಿಎಂ ಕುಮಾರಸ್ವಾಮಿ ತಂತ್ರಕ್ಕೆ ಕಂಗಾಲಾಗಿದೆ ಎನ್ನಲಾಗಿದೆ. ಕೇಸರಿ ಪಾಳಯ ಸಿಎಂ ವಿರುದ್ಧ ಪ್ರಯೋಗಿಸುತ್ತಿರುವ ಎಲ್ಲಾ ಅಸ್ತ್ರಗಳೂ ವಿಫಲವಾಗಿದ್ದು, ರೈತರ ಜೊತೆ ಭತ್ತದ ಪೈರು ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ಪರವಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಒಬ್ಬ ಸಿಎಂ ಸ್ಥಾನದಲ್ಲಿರುವ ವ್ತಕ್ತಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ನಮ್ಮ ಜೊತೆ ನಾಟಿ ಮಾಡ್ತಾರೆ ಅಂದ್ರೆ ಸಾಮಾನ್ಯ ಸಂಗತಿಯಲ್ಲ ಅನ್ನೋದು ಜನರ ಮಾತಾಗಿದೆ. ನಿಮ್ಮ ಸಮಸ್ಯೆ ನಿವಾರಣೆಗೆ ನಾನಿದ್ದೀನಿ ಎಂದು ಧೈರ್ಯ ತುಂಬುವ ಸಿಎಂ ಸಿಕ್ಕಿರೋದು ಅನ್ನೋ ಮಾತುಗಳೂ ಕೇಳಿ ಬಂದಿರೋದು ಕಮಲ ಪಾಳಯವನ್ನು ಕಂಗಾಲಾಗಿಸಿದೆ. ಲೋಕಸಭಾ ಚುನಾವಣೆ ತನಕ ಹೀಗೇ ಆದರೆ ಕಷ್ಟ ಎಂದು ಸ್ವತಃ ಬಿ.ಎಸ್ ಯಡಿಯೂರಪ್ಪ ತಮ್ಮ ಆಪ್ತ ನಾಯಕರ ಬಳಿ ಅವಲತ್ತುಕೊಂಡಿದ್ದಾರಂತೆ.

ರಾಜಕೀಯವಾಗಿ ಮೇಲಾಟಕ್ಕೆ ಯಾರು ಏನನ್ನು ಬೇಕಾದರೂ ಮಾಡಬಹುದು. ಯಾರು ಯಾರ ಮೇಲಾದರೂ ಆರೋಪ ಮಾಡಬಹುದು. ಆದ್ರೆ ಸಿಎಂ ಆಗಿರುವ ವ್ಯಕ್ತಿ ಸಾಲಮನ್ನಾದಿಂದ ನಿಮ್ಮ ಬಾಳು ಅಸನಾಗುವುದಿಲ್ಲ ಅನ್ನೋದು ಗೊತ್ತಿದೆ. ಆದ್ರೆ ನನ್ನ ರೈತ ಬಾಂಧವರ ಉದ್ದಾರಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡ್ತೇನೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಜನರಿಗೆ ಧೈರ್ಯ ತುಂಬುತ್ತಿರೋದು ಉತ್ತಮ ಕೆಲಸ ಅನ್ನೋದು ಚರ್ಚೆಯಾಗುತ್ತಿದೆ.

Leave a Reply