2019ರ ಚುನಾವಣೆಯಲ್ಲಿ ಇನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ: ಮೋದಿ ವಿಶ್ವಾಸ

ಡಿಜಿಟಲ್ ಕನ್ನಡ ಟೀಮ್:

‘ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ…’ ಇದು ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ವಿಶ್ವಾಸ ವ್ಯಕ್ತಪಡಿಸಿದ ರೀತಿ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಲೋಕಸಭೆ ಚುನಾವಣೆ, ರಾಹುಲ್ ಗಾಂಧಿ, ಎನ್ಆರ್ ಸಿ, ಆರ್ಥಿಕ ನೀತಿ, ಗುಂಪು ಥಳಿತದ ವಿಚಾರವಾಗಿ ಮಾತನಾಡಿದ್ದಾರೆ. ಮೋದಿ ಅವರ ಸಂದರ್ಶನದ ಪ್ರಮುಖ ಅಂಶಗಳು ಹೀಗಿವೆ…

ಲೋಕಸಭೆ ಚುನಾವಣೆ:
ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಾವು ನವ ಭಾರತದ ನಿರ್ಮಾಣದ ಗುರಿ ಇಟ್ಟುಕೊಂಡು ಈ ಆಡಳಿತ ನಡೆಸುತ್ತಿದ್ದೇವೆ. ವಿರೋಧ ಪಕ್ಷಗಳ ಮಹಾಘಟಬಂಧನ ಯಶಸ್ವಿಯಾಗುವುದಿಲ್ಲ. ಆ ಮೈತ್ರಿಗೆ ಸಿದ್ಧಾಂತವೇ ಇಲ್ಲ. ಹೀಗಾಗಿ ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಕ್ಷೇತ್ರ ಗೆದ್ದು ಅಧಿಕಾರಕ್ಕೆ ಮರಳುತ್ತೇವೆ.

ಗುಂಪು ಥಳಿತ:

ಗುಂಪು ಥಳಿತ ಪ್ರಕರಣಗಳು ಖಂಡನೀಯ. ಥಳಿತಕ್ಕೆ ಏನೇ ಕಾರಣವಿದ್ದರೂ ಅದು ಅಪರಾಧ. ಹೀಗಾಗಿ ತಪ್ಪಿತಸ್ಥ ರಿಗೆ ಶಿಕ್ಷೆಯಾಗಬೇಕು. ದೇಶದಲ್ಲಿ ಶಾಂತಿ, ಐಕ್ಯತೆ ಕಾಪಾಡಲು ವಿರೋಧ ಪಕ್ಷಗಳು ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಬಾರದು. ಜನರ ಗುಂಪು ಅಮಾಯಕರನ್ನು ಬಡಿದು ಹತ್ಯೆ ಮಾಡಿ ಘಟನೆ ಅಥವಾ ಮಹಿಳೆಯರ ಮೇಲಿನ ಒಂದೇ ಒಂದು ದೌರ್ಜನ್ಯದ ಘಟನೆಯೂ ಕಳವಳಕಾರಿ ಹಾಗೂ ದುರಾದೃಷ್ಟಕರ. ಸಮಾಜದ ಶಾಂತಿ ಹಾಗೂ ಏಕತೆಯನ್ನು ಕಾಪಾಡಿಸಿಕೊಳ್ಳುವ ನಿಟ್ಟಿನಿಂದ ಪ್ರತಿಯೊಬ್ಬರನ್ನು ಪಕ್ಷಾತೀತವಾಗಿ ಕೈಜೋಡಿಸಬೇಕಿದೆ.

ಎನ್ಆರ್ ಸಿ:
ಎನ್ಆರ್’ಸಿ ನಮ್ಮ ಭರವಸೆಯಾಗಿದ್ದು, ಯಾವೊಬ್ಬ ಭಾರತೀಯನೂ ದೇಶ ಬಿಡುವ ಅಗತ್ಯವಿಲ್ಲ. ಅಸ್ಸಾಂ ಜನರ ಕಳವಳವನ್ನು ನಿವಾರಿಸಲು ಎಲ್ಲಾ ರೀತಿಯ ಅವಕಾಶಗಳನ್ನು ನೀಡಲಾಗುವುದು.

ಮಿತ್ರಪಕ್ಷಗಳ ವಿಶ್ವಾಸ: ರಾಜ್ಯಸಭೆಯಲ್ಲಿ ಉಪಸಭಾಪತಿ ಆಯ್ಕೆ ಮತ್ತು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಆದ ಸೋಲು. ಮಿತ್ರ ಪಕ್ಷಗಳು ನಮ್ಮ ಸರ್ಕಾರದ ಮೇಲೆ ಇತ್ತಿರುವ ನಂಬಿಕೆಗೆ ಸಾಕ್ಷಿ.

ರಾಹುಲ್ ಅಪ್ಪುಗೆ:
ರಾಹುಲ್ ಗಾಂಧಿ ಅವರು ನನ್ನನ್ನು ಲೋಕಸಭೆಯಲ್ಲಿ ಅಪ್ಪಿಕೊಂಡಿದ್ದು ಬಾಲಿಶತನವೇ ಅಲ್ಲವೇ ಎಂಬ ಬಗ್ಗೆ ನಿರ್ಧರಿಸುವುದು ನಿಮಗೆ ಬಿಟ್ಟಿದ್ದು. ಒಂದು ವೇಳೆ ಆ ಕುರಿತು ನಿಮಗೆ ಯಾವುದೇ ತೀರ್ಮಾನಕ್ಕೆ ಬರಲು ಆಗದಿದ್ದರೆ ಅವರು ಕಣ್ಣು ಹೊಡೆದ ದೃಶ್ಯವನ್ನು ನೋಡಿ. ಅಲ್ಲಿಗೆ ನಿಮಗೆ ಸ್ಪಷ್ಟ ಉತ್ತರ ಸಿಗುತ್ತದೆ.

ಉದ್ಯೋಗ ಸೃಷ್ಟಿ:
2017-18ನೇ ಸಾಲಿನಲ್ಲಿ ಫಾರ್ಮಲ್ ಸೆಕ್ಟರ್ ನಲ್ಲಿ 45 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಇಪಿಎಫ್ಒ ವರದಿ ತಿಳಿಸುತ್ತದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ 3 ಲಕ್ಷ ಸಣ್ಣ ಪ್ರಮಾಣದ ಉದ್ದಿಮೆ ಆರಂಭವಾಗಿವೆ. ಮೊಬೈಲ್ ತಯಾರಿಕಾ ಘಟಕಗಳಿಂದ ಸುಮಾರು 4.5 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ. 15 ಸಾವಿರ ಸ್ಟಾರ್ಟ್ ಅಪ್ ಗಳಿಗೆ ಸರ್ಕಾರದ ನೆರವು. ಮುದ್ರಾ ಯೋಜನೆಯಿಂದ ವ್ಯಾಪಾರ ಆರಂಭಿಸಲು ಸುಮಾರು 12 ಕೋಟಿಯಷ್ಟು ಜನರಿಗೆ ಸಾಲ. ಇದರಿಂದ ಪ್ರತಿ ಸಾಲದಿಂದ ಕನಿಷ್ಠ ಒಬ್ಬ ವ್ಯಕ್ತಿಗೆ ಉದ್ಯೋಗ.

Leave a Reply