70ನೇ ವಸಂತಕ್ಕೆ ಕಾಲಿಟ್ಟ ಅಹಿಂದ ನಾಯಕ ಸಿದ್ದರಾಮಯ್ಯ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು 70ನೇ ಜನ್ಮದಿನದ ಸಂಭ್ರಮ.

ದೇವರಾಜ ಅರಸು ಅವರ ನಂತರ ಅಹಿಂದ ಸಮುದಾಯದ ಪ್ರಗತಿಗೆ ಸಿದ್ದರಾಮಯ್ಯ ಅವರು ಕಂಕಣಬದ್ಧರಾಗಿ ದುಡಿದಿದ್ದಾರೆ. ಧ್ವನಿಯಿಲ್ಲದವರ, ಶೋಷಿತರ ಏಳಿಗೆಗೆ ತಮ್ಮ ರಾಜಕೀಯ ಜೀವನ ಮುಡಿಪಿಟ್ಟಿದ್ದಾರೆ.

1983ರ ಸಂದರ್ಭದಲ್ಲಿ ಜನತಾ ಪಕ್ಷ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳೆ ಮೈಸೂರಿನಲ್ಲಿ ಗೆಲ್ಲುತ್ತಿದ್ದಾಗ ಲೋಕದಳ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯ ಎಲ್ಲರ ಹುಬ್ಬೇರಿಸಿದ್ದರು.

ನಂತರ ಜನತಾ ಪರಿವಾರ ಸೇರಿದ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ರಾಜಕೀಯ ಗರಡಿಯಲ್ಲಿ ಪಾಳಗಿದರು. ತಮ್ಮ ರಾಜಕೀಯದ ಆರಂಭಿಕ ಹಂತದಲ್ಲೇ ಮೈಸೂರಿನ ಮೇಲೆ ನಿಯಂತ್ರಣ ಸಾಧಿಸಿದ್ದರು.

ಜನತಾದಳದಿಂದ ಹೊರಬಂದ ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ರಾಜ್ಯದಲ್ಲಿ ಪ್ರಮುಖ ನಾಯಕತ್ವದ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಸೆಳೆದುಕೊಂಡ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ತನ್ನ ಬೇರು ಗಟ್ಟಿ ಮಾಡಿಕೊಂಡಿತು. ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದರು. ಗಣಿ ದಣಿಗಳ ಸವಾಲು ಸ್ವೀಕರಿಸಿ ಬಳ್ಳಾರಿವರೆಗೂ ಪಾದ ಯಾತ್ರೆ ಮಾಡಿ ಸಾರ್ವಜನಿಕ ಸಮಾವೇಶದಲ್ಲಿ ತೊಡೆ ತಟ್ಟಿದಾಗ ರಾಜ್ಯ ಕಾಂಗ್ರೆಸ್ ಗೆ ಮರುಜನ್ಮ ಸಿಕ್ಕಂತಾಯಿತು.

ನಂತರ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದು ಐದು ವರ್ಷಗಳ ಅಧಿಕಾರ ನಡೆಸಿದರು. ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸಿದ ಅಷ್ಟೂ ಕುತಂತ್ರಗಳನ್ನು ಮೆಟ್ಟಿನಿಂತ ಸಿದ್ದರಾಮಯ್ಯ ತಮ್ಮ ತಾಕತ್ತು ಸಾಬೀತು ಪಡಿಸಿದರು.

ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಕೃಷಿ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಅನೇಕ ಜನಪ್ರಿಯ ‘ಭಾಗ್ಯ’ ಯೋಜನೆಗಳನ್ನು ನೀಡಿದರು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಮೋದಿ ಮಾತಿನ ಏಟಿಗೆ ಕಂಗೆಟ್ಟಾಗ ಪಕ್ಷದ ಪರವಾಗಿ ಮೋದಿಗೆ ಸಡ್ಡು ಹೊಡೆದು ನಿಂತರು. ಇವರ ಗಡಸುತನ ಮುಂದಿನ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಅತ್ಯಗತ್ಯವಾಗಿದೆ.

Leave a Reply